ಮೈಸೂರು, ಫೆ.28-ಇದೇ ಪ್ರಥಮ ಬಾರಿಗೆ ಮೈಸೂರು ರೇಸ್ ಕ್ಲಬ್ ವತಿಯಿಂದ ಪ್ರತಿಷ್ಠಿತ `ದಿ ಇಂಡಿಯನ್ ಟರ್ಫ್ ಇನ್ವಿಟೇಷನ್ ಕಪ್-2020’ ರೇಸ್ ಫೆ.29 ಮತ್ತು ಮಾ.1ರಂದು ನಡೆಯಲಿದೆ. ಎರಡು ದಿನಗಳ ಕಾಲ ನಡೆಯುವ ಈ ಪ್ರತಿಷ್ಠಿತ ರೇಸ್‍ನಲ್ಲಿ 1 ಕೋಟಿ ರೂ. ಬಹುಮಾನ ಹಾಗೂ 6 ಲಕ್ಷ ರೂ. ಮೌಲ್ಯದ ಆಕರ್ಷಕ ಟ್ರೋಫಿಗಳಿದ್ದು, ಇನ್ವಿಟೇಷನ್ ಕಪ್ ಸೇರಿ 8 ರೇಸ್‍ಗಳು ನಡೆಯಲಿವೆ. ಎರಡೂ ದಿನಗಳಲ್ಲೂ ತಲಾ 8 ರೇಸ್‍ಗಳನ್ನು ನಡೆಸಲಾಗುತ್ತಿದ್ದು, 120 ಕುದುರೆ ಗಳು ರೇಸ್‍ನಲ್ಲಿ ಭಾಗಿಯಾಗಲಿವೆ. ಮೊದಲ ದಿನವಾದ ಫೆ.29ರಂದು 8 ಸಾವಿರ ಹಾಗೂ ಎರಡನೇ ದಿನವಾದ ಮಾ.1ರಂದು 10 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಮೈಸೂರಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಈ ಐತಿಹಾಸಿಕ ರೇಸ್‍ಗಾಗಿ ಆಸನ ವ್ಯವಸ್ಥೆ, ಅಚ್ಚುಕಟ್ಟಾದ ಪಾರ್ಕಿಂಗ್ ವ್ಯವಸ್ಥೆ ಹಾಗೂ ಬುಕ್ಕಿಗಳೊಂದಿಗೆ ಫಂಟರ್‍ಗಳು ಬೆಟ್ಟಿಂಗ್ ಕಟ್ಟುವ ಸ್ಥಳದಲ್ಲಿ ಅಗತ್ಯ ಸಿದ್ಧತೆಗಳನ್ನು ಮೈಸೂರು ರೇಸ್ ಕ್ಲಬ್ ಆಡಳಿತ ಮಂಡಳಿ ಮುತುವರ್ಜಿ ಯಿಂದ ಮಾಡಿಕೊಂಡಿದೆ. ಡಾ. ಎನ್.ನಿತ್ಯಾನಂದ ರಾವ್ ಅವರು ಮೈಸೂರು ರೇಸ್ ಕ್ಲಬ್ ಅಧ್ಯಕ್ಷರಾದ ನಂತರ ಹಲವಾರು ಪ್ರಯೋಗಗಳ ಮೂಲಕ ಎಂಆರ್‍ಸಿಗೆ ದೇಶ-ವಿದೇಶ ದಲ್ಲಿ ಹೆಸರು ತಂದು ಕೊಟ್ಟಿದ್ದಾರೆ. ಈಗ ನಡೆಯಲಿರುವ `ದಿ ಇಂಡಿಯನ್ ಟರ್ಫ್ ಇನ್ವಿಟೇಷನ್ ಕಪ್-2020’ ರೇಸ್‍ನಿಂದ ಎಂಆರ್‍ಸಿಗೆ ಮತ್ತೊಂದು ಗರಿ ಮೂಡಲಿದೆ.