ಮೈಸೂರು ಜಿಲ್ಲೆಯಲ್ಲಿ ಡಿ.2ರಿಂದ 10ರವರೆಗೆ ಇಂದ್ರಧನುಷ್ ಅಭಿಯಾನ:  3 ದಿನಗಳಲ್ಲಿ 1,366 ಮಕ್ಕಳು, 392 ಗರ್ಭಿಣಿಯರಿಗೆ ರಕ್ಷಣಾ ಲಸಿಕೆ 
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಡಿ.2ರಿಂದ 10ರವರೆಗೆ ಇಂದ್ರಧನುಷ್ ಅಭಿಯಾನ: 3 ದಿನಗಳಲ್ಲಿ 1,366 ಮಕ್ಕಳು, 392 ಗರ್ಭಿಣಿಯರಿಗೆ ರಕ್ಷಣಾ ಲಸಿಕೆ 

December 6, 2019

ಮೈಸೂರು, ಡಿ.5(ಪಿಎಂ)- ಮೈಸೂರು ಜಿಲ್ಲೆಯಲ್ಲಿ ಆರಂಭಗೊಂಡಿರುವ ಇಂದ್ರ ಧನುಷ್ ಅಭಿಯಾನದಡಿ ಮೂರು ದಿನಗಳಲ್ಲಿ 1,366 ಮಕ್ಕಳು ಹಾಗೂ 392 ಗರ್ಭಿಣಿಯರಿಗೆ ರಕ್ಷಣಾ ಚುಚ್ಚುಮದ್ದು ನೀಡಲಾಗಿದೆ.

ರಕ್ಷಣಾ ಲಸಿಕೆಗಳಿಂದ ವಂಚಿತರಾಗುವ ಗರ್ಭಿಣಿ ಯರು ಹಾಗೂ ಮಕ್ಕಳನ್ನು ಗುರುತಿಸಿ ಲಸಿಕೆ ನೀಡುವ ಅಭಿಯಾನ ಇದಾಗಿದೆ. ಕೇಂದ್ರ ಸರ್ಕಾರದ ಮಿಷನ್ ಇಂದ್ರಧನುಷ್ ಅಭಿಯಾನ ಮೈಸೂರು ಜಿಲ್ಲೆಯಲ್ಲಿ ಇದೇ ಡಿಸೆಂಬರ್‍ನಿಂದ 2020ರ ಮಾರ್ಚ್‍ವರೆಗೆ ಪ್ರತಿ ತಿಂಗಳು 7 ದಿನಗಳು ನಡೆಯಲಿದೆ. ಈ ಪೈಕಿ ಡಿಸೆಂಬರ್‍ನ ಮೊದಲ ಸುತ್ತಿಗೆ ಡಿ.2ರಂದು ಚಾಲನೆ ನೀಡಲಾಗಿದೆ. ಮೊದಲ ಸುತ್ತಿಗೆ ತಾಯಿ ಮತ್ತು ಮಕ್ಕಳು, ಪ್ರದೇಶಗಳನ್ನು ಗಣತಿಯನ್ವಯ (ನಿರಂತರ ಗಣತಿ ನಡೆಯುವ ಹಿನ್ನೆಲೆಯಲ್ಲಿ ಅಂಕಿ-ಅಂಶಗಳಲ್ಲಿ ಬದಲಾವಣೆ ಆಗಲಿದೆ) ಗುರುತಿಸಿ ಯೋಜನೆ ರೂಪಿಸಲಾಗಿದೆ. ಅದರಂತೆ 358 ಲಸಿಕಾ ಶಿಬಿರಗಳ ಪೈಕಿ 291 ಶಿಬಿರಗಳಲ್ಲಿ ಲಸಿಕೆ ನೀಡಲಾಗಿದೆ.

ಇದರಲ್ಲಿ 0-2 ವರ್ಷದೊಳಗಿನ 1,715 ಮಕ್ಕಳ ಪೈಕಿ 1,366 ಮಕ್ಕಳಿಗೆ ರಕ್ಷಣಾ ಚುಚ್ಚುಮದ್ದು ನೀಡಲಾಗಿದೆ. ಅದೇ ರೀತಿ 474 ಗರ್ಭಿಣಿಯರ ಪೈಕಿ 392 ಮಂದಿಗೆ ಲಸಿಕೆಗಳನ್ನು ನೀಡಲಾಗಿದ್ದು, ಇಂದು (ಗುರುವಾರ) ಹಾಗೂ ಭಾನುವಾರ ಹೊರತು ಪಡಿಸಿ ಡಿ.10ರವರೆಗೆ ಮೊದಲ ಸುತ್ತಿನ ಲಸಿಕಾ ಕಾರ್ಯಕ್ರಮ ನಡೆಯಲಿದೆ. ಬಳಿಕ 2020ರ ಜನವರಿಯಲ್ಲಿ 2ನೇ ಸುತ್ತು, ಫೆಬ್ರವರಿಯಲ್ಲಿ 3ನೇ ಸುತ್ತು ಹಾಗೂ ಮಾರ್ಚ್ ನಲ್ಲಿ 4ನೇ ಸುತ್ತಿನ ಮಿಷನ್ ಇಂದ್ರಧನುಷ್ ನಡೆಯಲಿದೆ. 2014ರ ಡಿ.25ರಂದು ಕೇಂದ್ರ ಸರ್ಕಾರ ಮಿಷನ್ ಇಂದ್ರಧನುಷ್ ಅಭಿಯಾನಕ್ಕೆ ಚಾಲನೆ ನೀಡಿತು.

 

 

Translate »