ಇನ್‍ಫೋಸಿಸ್ ನಾರಾಯಣಮೂರ್ತಿ-ಡಾ.ಸುಧಾಮೂರ್ತಿ 800 ರೂ.ಗಳ ಯಶಸ್ವಿ ದಾಂಪತ್ಯ!!
ಮೈಸೂರು

ಇನ್‍ಫೋಸಿಸ್ ನಾರಾಯಣಮೂರ್ತಿ-ಡಾ.ಸುಧಾಮೂರ್ತಿ 800 ರೂ.ಗಳ ಯಶಸ್ವಿ ದಾಂಪತ್ಯ!!

February 3, 2019

ಸುತ್ತೂರು: ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಡಾ.ಸುಧಾಮೂರ್ತಿ ತಮ್ಮ ದಾಂಪತ್ಯ ಜೀವನ ಆರಂಭದ ಅಪರೂಪ ಕ್ಷಣಗಳ ವಿವರಿಸಿದರು.

ಹೆಣ್ಣು ಹುಟ್ಟಿದ ತಕ್ಷಣ ಅಪ್ಪ-ಅಮ್ಮ ಯೋಚನೆ ಮಾಡುತ್ತಾರೆ. ಮಗಳಿಗೆ ಮದುವೆ ಮಾಡಲು ಹಣ ಹೊಂದಿಸುವುದು ಹೇಗಪ್ಪಾ, ಬೇರೆ ಮಕ್ಕಳ ಓದನ್ನು ನಿಲ್ಲಿಸಿಯಾದ್ರು ಮದುವೆ ಮಾಡುತ್ತಾರೆ. ಅದರಲ್ಲೂ ಅದ್ಧೂರಿ ಮದುವೆಗೆ ಮುಂದಾಗುತ್ತಾರೆ. ಅದ್ಧೂರಿ ಹಾಗೂ ಆಡಂಬರದ ಮದುವೆಯಿಂದ ಆರ್ಥಿಕ ಸಮಸ್ಯೆಗೆ ಸಾಮಾನ್ಯ ಜನರು ತುತ್ತಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಸಾಮೂಹಿಕ, ಸರಳ ವಿವಾಹಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.

ನನ್ನ ಮದುವೆ ಗೊತ್ತಾದಾಗ ನಾನು ಸರಳ ಮದುವೆ ಮಾಡಿಕೊಳ್ಳೋಣ ಎಂದೇ. ಆಗ ನಾರಾಯಣಮೂರ್ತಿ ಅವರೇ ಜನರು ಏನಾದರೂ ಅಂದರೆ? ನಮ್ಮ ಬಂಧು ಬಳಗ ಏನಾದರೂ ಅಂದುಬಿಟ್ಟರೆ ಅಂಥ ಹೇಳಿದ್ರು. ಅದಕ್ಕೆ ಯಾರು ಟೀಕಿಸುತ್ತಾರೆ ಅನ್ನೋದು ಮುಖ್ಯವಲ್ಲ. ನೀವು ಒಪ್ಪಿದರೆ ಸಾಕು ಅಂದೆ. ಕೊನೆಗೆ ನಮ್ಮ ಕುಟುಂಬದವರು, ಅವರ ಕುಟುಂಬದವರನ್ನು ಮಾತ್ರ ಮದುವೆಗೆ ಆಹ್ವಾನಿಸಲು ನಿರ್ಧರಿಸಿದೆವು.

1978ರ ಫೆ.10ರಲ್ಲಿ ಮದುವೆಯಾದಾಗ ನಮಗೆ ಖರ್ಚಾಗಿದ್ದು ಕೇವಲ 800 ರೂ., ನಮ್ಮದು 400 ರೂ, ನಾರಾಯಣಮೂರ್ತಿ ಮನೆಯವರದ್ದು 400 ರೂ. ಮನೆಯಲ್ಲೇ ಮದುವೆಯಾಗಿದ್ದಲ್ಲದೆ, ಪಕ್ಕದಲ್ಲೇ ಇದ್ದ ರಾಯರ ಮಠದಲ್ಲಿ ಊಟದ ವ್ಯವಸ್ಥೆ ಇತ್ತು. ನಾವು ಯಾರಿಗೂ ಉಡುಗೊರೆ ಕೊಡಲಿಲ್ಲ, ಪಡೆಯಲೂ ಇಲ್ಲ. ಕೆಲವರು ನಮ್ಮನ್ನು ಜುಗ್ಗಾಗಳು ಅಂದ್ರು.

ಆದರೆ, ನಮಗೆ ನಮ್ಮ ವಿಶ್ವಾಸ, ಸರಳ ವಿವಾಹ ಮುಖ್ಯವಾಗಿತ್ತು ಎಂದು ಮದುವೆಯ ಖರ್ಚನ್ನು ಬಿಡಿಸಿಟ್ಟರು. ನಾನು ಮದುವೆಯಾದಾಗ ಕರಿಮಣಿ ದಾರ ಪೋಣಿಸಿಕೊಂಡು ಹಾಕಿಕೊಂಡಿದ್ದೆ. ನಾನು ವಯಸ್ಸಾದ ಮೇಲೆ ಮಾಂಗಲ್ಯ ಸರ ಮಾಡಿಸಿಕೊಂಡಿದ್ದು. ಮದುವೆ ಸಂದರ್ಭದಲ್ಲಿ ಧಾರವಾಡದ ಇಳಕಲ್ ಸೀರೆ ಬಿಟ್ಟರೆ ರೇಷ್ಮೆ ಸೀರೆ ತೆಗೆದುಕೊಂಡಿರಲಿಲ್ಲ ಎಂದು ತಮ್ಮ ಬದುಕಿನ ವಿಚಾರವನ್ನು ನೂತನ ವಧುವರರ ಮುಂದೆ ಬಿಚ್ಚಿಟ್ಟರು. ಗಂಡ ಅಂದವರು ದುಡ್ಡುತರುವ ಮೆಷಿನ್ ಅಲ್ಲ. ಕಷ್ಟಸುಖ ಬಂದಾಗ ಭಾಗಿಯಾಗುವಂತೆ ಇರಬೇಕು. ಅದಕ್ಕಾಗಿ ತಮ್ಮ ಬದುಕಿನಲ್ಲಿ ಸಂಕಲ್ಪ ಮಾಡಿ ಸರಳವಾಗಿ ಇರಬೇಕು ಎಂದರು.

Translate »