ಸರ್ಕಾರಿ ಖರಾಬು ಜಮೀನು ಒತ್ತುವರಿ ತೆರವಿಗೆ ಒತ್ತಾಯ
ಮೈಸೂರು

ಸರ್ಕಾರಿ ಖರಾಬು ಜಮೀನು ಒತ್ತುವರಿ ತೆರವಿಗೆ ಒತ್ತಾಯ

February 26, 2019

ಹನಗೋಡು: ಹೋಬಳಿಯ ದೊಡ್ಡಹೆಜ್ಜೂರು ಗ್ರಾಪಂ ವ್ಯಾಪ್ತಿಯ ಈರತಯ್ಯನಕೊಪ್ಪಲಿನ ಸರ್ಕಾರಿ ಖರಾಬು ಜಮೀನನ್ನು ಒತ್ತುವರಿ ಮಾಡಿ, ಪ್ರಭಾವಿ ರೈತರೊಬ್ಬರು ಶೆಡ್ ನಿರ್ಮಿಸಿ ಕೊಂಡಿದ್ದು, ಕೂಡಲೇ ಒತ್ತುವರಿ ತೆರವುಗೊಳಿಸಿ ಗ್ರಾಮದ ಸಭೆ ಸಮಾರಂಭಗಳಿಗೆ ಭೂಮಿ ಮೀಸಲಿಡುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ತಾಲೂಕು ಆಡಳಿತಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

ಸ್ಥಳದಲ್ಲಿ ಜಮಾಯಿಸಿದ್ದ ಗ್ರಾಮಸ್ಥರು ಮಾತನಾಡಿ, ಈರತಯ್ಯನ ಕೊಪ್ಪಲು ಗ್ರಾಮದಲ್ಲಿ 25 ಕುಟುಂಬಗಳು ವಾಸಿಸುತ್ತಿದ್ದು, ಅನಾದಿ ಕಾಲದಿಂದಲೂ ಗ್ರಾಮದ ಮಧ್ಯಭಾಗದಲ್ಲೇ ಇರುವ ಸುಮಾರು ಒಂದು ಎಕರೆ ಸರ್ಕಾರಿ ಭೂಮಿಯಲ್ಲಿ ಮದುವೆ, ಗ್ರಾಮದೇವರ ಹಬ್ಬ ಮತ್ತಿತರ ಸಾರ್ವಜನಿಕ ಸಭೆ ಸಮಾರಂಭಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಭೂಮಿಯನ್ನು ದೊಡ್ಡ ಹೆಜ್ಜೂರಿನ ವಿಶ್ವನಾಥ್ ಎಂಬುವರು, ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಲು ಮುಂದಾಗಿದ್ದಾರೆ. ಇದಕ್ಕಾಗಿ ರಾತ್ರೋರಾತ್ರಿ ಶೆಡ್ ನಿರ್ಮಿಸಿ, ಬೇಲಿ ಹಾಕಿಕೊಂಡಿದ್ದಾರೆ. ಪ್ರಶ್ನಿಸಿದವರಿಗೆ ಬೆದರಿಕೆ ಹೊಡ್ಡುತ್ತಿದ್ದು, ಇದರಿಂದ ಸಾರ್ವಜನಿಕ ಆಸ್ತಿ ಉಳ್ಳವರ ಪಾಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೂಡಲೇ ಒತ್ತುವರಿ ತೆರವುಗೊಳಿಸಿ ಈ ಭೂಮಿ ಗ್ರಾಮದಲ್ಲಿ ಮಹಿಳಾ ಸ್ವಸಹಾಯ ಸಂಘದವರು ಸಂಘದ ಚಟುವಟಿಕೆ ನಡೆಸಲು, ಅಂಗನವಾಡಿ ಕಟ್ಟಡ ನಿರ್ಮಾಣ ಹಾಗೂ ಮದುವೆ ಮತ್ತಿತರ ಸಭೆ ಸಮಾರಂಭ ನಡೆಸಲು ಮೀಸಲಿಡಬೇಕೆಂದು ಜಿಲ್ಲಾಧಿಕಾರಿ, ತಹಶೀಲ್ದಾರ್, ತಾಪಂ ಇಓ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ ಎಂದು ಗ್ರಾಮದ ಮುಖಂಡರಾದ ರಾಮಚಂದ್ರೇಗೌಡ ರಾಜೇಗೌಡ, ಶಿವೇಗೌಡ, ಗೌಡಪ್ಪ, ಹಾಗೂ ಪಾರ್ವತಿ, ಸ್ಪಂದನಾ, ಆಂಜನೇಯ ಹಾಗೂ ಭೂದೇವಿ ಸ್ವಸಹಾಯ ಸಂಘದ ಮಹಿಳೆಯರು ಆರೋಪಿಸಿದರು.

ಜಮೀನು ವಿಚಾರವಾಗಿ ಆಗಾಗ್ಗೆ ಗುಂಪು ಸಂಘರ್ಷಗಳು ಘಟಿಸುತ್ತಿದ್ದು, ವಾರದಿಂದ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಶನಿವಾರ ಬೆಳಿಗ್ಗೆ ಗ್ರಾಮಸ್ಥರು ಜಮೀನು ಪ್ರವೇಶಕ್ಕೆ ಮುಂದಾಗಿದ್ದರು. ಎರಡೂ ಕಡೆಯವರಿಗೆ ಗಲಾಟೆಗಳಾಗುವ ಸುಳಿವು ಅರಿತ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸುವಲ್ಲಿ ಯಶಸ್ವಿಯಾದರು.

Translate »