ಮೈಸೂರು: ಅವಾಚ್ಯ ಪದಗಳಿಂದ ನಿಂದಿಸಿದ್ದ ಮೈಸೂರು ಎಸ್ಪಿ ಅಮಿತ್ ಸಿಂಗ್ ವಿರುದ್ಧ ದೂರು ಸಲ್ಲಿಸಿದ್ದ ಇನ್ಸ್‍ಪೆಕ್ಟರ್ ಸಿ.ವಿ.ರವಿ ಅವರಿಗೆ ಸತತ 3ನೇ ಬಾರಿಗೆ ವರ್ಗಾವಣೆಯಾಗಿದ್ದು, ಅವರನ್ನು ಇದೀಗ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಗೆ ನಿಯೋಜಿಸಲಾಗಿದೆ.
ವಿವಿ ಪುರಂ ಸಂಚಾರ ಠಾಣೆಯ ಇನ್ಸ್‍ಪೆಕ್ಟರ್ ಆಗಿದ್ದ ರವಿ ಅವ ರನ್ನು ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡ ಲಾಗಿದೆ. ಅವರು ಠಾಣೆಯಲ್ಲಿ ಅಧಿಕಾರ ವಹಿಸಿಕೊಳ್ಳುವ ವಿಚಾರದಲ್ಲಿ ಜಿಲ್ಲಾ ಎಸ್ಪಿ ಅಮಿತ್ ಸಿಂಗ್ ಅವರು ಮೊಬೈಲ್ ಮೂಲಕ ರವಿ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದರು. ಈ ಸಂಬಂಧ ರವಿ ಅವರು ಎಸ್ಪಿ ವಿರುದ್ಧ ದಕ್ಷಿಣ ವಲಯ ಐಜಿಪಿ ಕೆ.ವಿ.ಶರತ್‍ಚಂದ್ರ ಅವರಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು ಗ್ರಾಮಾಂತರ ಠಾಣೆಗೆ ಆಗಿದ್ದ ವರ್ಗಾವಣೆಯನ್ನು ರದ್ದುಗೊಳಿಸಿ, ಅವರನ್ನು ಉಡುಪಿಗೆ ಎತ್ತಂಗಡಿ ಮಾಡಲಾಗಿತ್ತು. ಅವರು ಉಡುಪಿಗೆ ತೆರಳುವ ಮುನ್ನವೇ ಆ ವರ್ಗಾವಣೆ ಆದೇಶವನ್ನೂ ಕೂಡ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ರದ್ದುಗೊಳಿಸಿ ಕೇಂದ್ರ ಕಚೇರಿಯಲ್ಲಿ ಸ್ಥಳ ನಿರೀಕ್ಷೆಯೊಂದಿಗೆ ವರ್ಗಾಯಿಸಿದ್ದರು. ಇದೀಗ ರವಿ ಅವರನ್ನು ಬನಶಂಕರಿ ಠಾಣೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.