ಇಂದಿನಿಂದ ಸುತ್ತೂರಿನಲ್ಲಿ ಕೃಷಿ ಸಂಶೋಧನೆ, ಅಭಿವೃದ್ಧಿ ವಿಸ್ತರಣೆ ಕುರಿತ ಅಂತಾರಾಷ್ಟ್ರೀಯ ಸಮಾವೇಶ
ಮೈಸೂರು

ಇಂದಿನಿಂದ ಸುತ್ತೂರಿನಲ್ಲಿ ಕೃಷಿ ಸಂಶೋಧನೆ, ಅಭಿವೃದ್ಧಿ ವಿಸ್ತರಣೆ ಕುರಿತ ಅಂತಾರಾಷ್ಟ್ರೀಯ ಸಮಾವೇಶ

December 14, 2019

ಮೈಸೂರು,ಡಿ.13(ಪಿಎಂ)-ಸುತ್ತೂರಿನ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ), ಬೆಂಗಳೂರಿನ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು (ಐಸಿಎಆರ್-ಅಟಾರಿ), ಕೊಯಮ ತೂರಿನ ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ಶಿಕ್ಷಣ ಸಂಘದ (ಇಇಎಸ್) ಸಂಯುಕ್ತಾಶ್ರಯದಲ್ಲಿ ಡಿ.14ರಿಂದ 16ರವರೆಗೆ `ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿ ವಿಸ್ತರಣೆ’ ಕುರಿತಂತೆ ಸುತ್ತೂರಿನಲ್ಲಿ ಮೂರು ದಿನಗಳ ಅಂತಾರಾಷ್ಟ್ರೀಯ ಸಮಾವೇಶ ಏರ್ಪಡಿಸಲಾಗಿದೆ ಎಂದು ಕೆವಿಕೆ ಮುಖ್ಯಸ್ಥೆ ಡಾ.ಅರುಣ್‍ಬಾಲಮಟ್ಟಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುತ್ತೂರಿನ ಕೆವಿಕೆ ಭಾರತ ಸರ್ಕಾರದಿಂದ (ಐಸಿಎಆರ್) 1994ರಲ್ಲಿ ಮಂಜೂರಾಗಿದ್ದು, ಇದೀಗ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ. ಈ ಸುಸಂದ ರ್ಭದಲ್ಲಿ `ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿ ವಿಸ್ತರಣೆ’ ಕುರಿತು ಅಂತಾರಾಷ್ಟ್ರೀಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಅಂದು ಮಧ್ಯಾಹ್ನ 3ಕ್ಕೆ ಕೆವಿಕೆ ಆವರಣದಲ್ಲಿ ನವದೆಹಲಿಯ ಐಸಿಎಆರ್‍ನ ಉಪ ಮಹಾನಿರ್ದೇಶಕ ಡಾ.ಎ.ಕೆ.ಸಿಂಗ್ ಸಮಾವೇಶ ಉದ್ಘಾಟಿಸಲಿದ್ದು, ಮಾಜಿ ಉಪ ಮಹಾನಿರ್ದೇಶಕ ಡಾ.ಪಿ.ದಾಸ್ ಆಶಯ ಭಾಷಣ ಮಾಡಲಿದ್ದಾರೆ. ಬೆಂಗಳೂರು ಕೃಷಿ ವಿವಿ ಉಪಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್, ಭತ್ತದ ವಿಜ್ಞಾನಿ ಡಾ.ಮಹಾದೇವಪ್ಪ, ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟ ಸೂರಮಠ, ಇಇಎಸ್ ಅಧ್ಯಕ್ಷ ಡಾ.ಫಿಲಿಪ್, ಬೆಂಗಳೂರಿನ ಐಸಿಎಆರ್-ಅಟಾರಿ ನಿರ್ದೇಶಕ ಡಾ.ಎಂ.ಜೆ.ಚಂದ್ರೇಗೌಡ ಸೇರಿದಂತೆ ಮತ್ತಿತರರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ವಿದ್ಯಾರ್ಥಿಗಳು, ವಿಷಯ ತಜ್ಞರು, ವಿಜ್ಞಾನಿಗಳು ಸೇರಿದಂತೆ ಸಮಾವೇಶದಲ್ಲಿ ಸುಮಾರು 300 ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಪ್ರಸ್ತುತ ದೇಶದ ಕೃಷಿ ಕ್ಷೇತ್ರ ಸಂಪೂರ್ಣ ಮಾರುಕಟ್ಟೆ ಕೇಂದ್ರೀತವಾಗಿರುವ ಹಿನ್ನೆಲೆಯಲ್ಲಿ ರೈತರ ಅವಶ್ಯಕತೆಗಳಿಗೆ ಸ್ಪಂದಿಸುವುದು ಸರ್ಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಇಂತಹ ಸಂಕೀರ್ಣ ಪರಿಸ್ಥಿತಿ ಯಲ್ಲಿ ರೈತರ ಆದಾಯ ಹೆಚ್ಚಿಸುವ ಅನಿವಾರ್ಯತೆ ಸರ್ಕಾರದ ಮುಂದಿದೆ. ಇದಕ್ಕಿರುವ ಮಾರ್ಗ, ಕೃಷಿ ಸಂಶೋಧನೆ ಮತ್ತು ವಿಸ್ತರಣೆ ವ್ಯವಸ್ಥೆ ಬಲಪಡಿಸಲು ಸಮಾವೇಶ ದಲ್ಲಿ ಉಪಯುಕ್ತ ಮಾರ್ಗೋಪಾಯ ಕಂಡುಕೊಳ್ಳಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು. ಇಇಎಸ್ ಅಧ್ಯಕ್ಷ ಡಾ.ಫಿಲಿಪ್, ಬೆಂಗಳೂರಿನ ಐಸಿಎಆರ್-ಅಟಾರಿ ನಿರ್ದೇಶಕ ಡಾ.ಎಂ.ಜೆ.ಚಂದ್ರೇಗೌಡ ಗೋಷ್ಠಿಯಲ್ಲಿದ್ದರು.

Translate »