ಮೈಸೂರಿನ ಏಕೈಕ `ನಿರಾಶ್ರಿತ ಮಹಿಳೆಯರ ಆಶ್ರಯ ತಾಣ’ಕ್ಕೆ ಬೀಗ!
ಮೈಸೂರು

ಮೈಸೂರಿನ ಏಕೈಕ `ನಿರಾಶ್ರಿತ ಮಹಿಳೆಯರ ಆಶ್ರಯ ತಾಣ’ಕ್ಕೆ ಬೀಗ!

December 14, 2019

ಮೈಸೂರು, ಡಿ.13(ಎಂಟಿವೈ)- ಮೈಸೂರಿನ ದೇವರಾಜ ಮೊಹಲ್ಲಾದ ಬಿಡಾರಂ ಕೃಷ್ಣಪ್ಪ ರಸ್ತೆಯ ಗಾಡಿಚೌಕದಲ್ಲಿ ಕಳೆದ ಎಂಟು ವರ್ಷಗಳ ಹಿಂದೆ ನಗರ ಪಾಲಿಕೆ ಆರಂಭಿಸಿದ್ದ `ನಿರಾಶ್ರಿತ ಮಹಿಳೆಯರ ಆಶ್ರಯ ತಾಣ’ವನ್ನು ಈಗ ಶಾಶ್ವತವಾಗಿ ಮುಚ್ಚಲಾಗಿದೆ.

ಒಂದೆಡೆ ನಿರಾಶ್ರಿತ ಮಹಿಳೆಯರ ಸಂಖ್ಯೆ ಇಳಿಮುಖವಾಗಿದ್ದುದು, ಇನ್ನೊಂದೆಡೆ ನಿರ್ವಹಣೆ ವೆಚ್ಚ ಹೆಚ್ಚಾಗಿದ್ದರಿಂದ ನಿರಾಶ್ರಿತ ಮಹಿಳೆಯರ ಆಶ್ರಯ ತಾಣಕ್ಕೆ ಬೀಗ ಹಾಕಲಾಗಿದೆ. ಪ್ರಸ್ತುತ ಇಲ್ಲಿದ್ದ ಇಬ್ಬರು ಮಹಿಳೆಯರನ್ನು ವಿಜಯನಗರ ದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳೆಯರ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಆ ಮೂಲಕ ಮೈಸೂರಿನ ಏಕೈಕ `ನಿರಾಶ್ರಿತ ಮಹಿಳೆಯರ ಆಶ್ರಯ ಕೇಂದ್ರ’ ನೇಪಥ್ಯಕ್ಕೆ ಸರಿದಿದೆ.

ಬಿಡಾರಂ ಕೃಷ್ಣಪ್ಪ ರಸ್ತೆಯ ಗಾಡಿ ಚೌಕದಲ್ಲಿ 1984ರ ಆ.27ರಂದು ಪಾಲಿಕೆಯ ಶಾಲೆಯನ್ನು ಆರಂಭಿಸಲಾಗಿತ್ತು. ವರ್ಷಗಳ ಬಳಿಕ ವಿದ್ಯಾರ್ಥಿಗಳ ಕೊರತೆಯಿಂದ ಈ ಶಾಲೆ ಮುಚ್ಚಲ್ಪಟ್ಟಿತ್ತು. ಖಾಲಿ ಇದ್ದ ಕಟ್ಟಡದಲ್ಲಿ 2012ರಲ್ಲಿ ನಿರಾಶ್ರಿತ ಮಹಿಳೆ ಯರ ಪುನರ್ವಸತಿ ಕೇಂದ್ರ ಆರಂಭಿಸಲಾಯಿತು.

ಮೈಸೂರಿನ ವಿವಿಧೆಡೆ ಭಿಕ್ಷೆ ಬೇಡಿ ರಸ್ತೆ ಬದಿ, ಬಸ್ ಶೆಲ್ಟರ್‍ಗಳಲ್ಲಿ ರಾತ್ರಿ ಮಲಗುತ್ತಿದ್ದ ಮಹಿಳೆಯ ರನ್ನು ಕರೆತಂದು ಈ ಆಶ್ರಯ ತಾಣದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿತ್ತು. ಈ ಹಿಂದೆ 30 ನಿರಾಶ್ರಿತ ಮಹಿಳೆಯರು ಈ ಆಶ್ರಯ ಕೇಂದ್ರ ದಲ್ಲಿ ರಾತ್ರಿ ವಾಸ್ತವ್ಯ ಹೂಡುತ್ತಿದ್ದರು. ಆದರೆ, ಕೆಲವು ವರ್ಷಗಳಿಂದ ನಿರಾಶ್ರಿತ ಮಹಿಳೆಯರ ಸಂಖ್ಯೆ 3-4ಕ್ಕೆ ಇಳಿಕೆಯಾಗಿತ್ತು.

ಒಂದು ವರ್ಷದಿಂದ ಇಬ್ಬರಷ್ಟೇ ಆಶ್ರಯ ತಾಣ ದಲ್ಲಿದ್ದರು. ಓರ್ವ ವ್ಯವಸ್ಥಾಪಕ, ಇಬ್ಬರು ಸಹಾಯಕರು ಈ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಿಂಗಳಿಗೆ 40 ರಿಂದ 50 ಸಾವಿರ ರೂ. ವೆಚ್ಚವಾಗು ತ್ತಿತ್ತು. ಈ ಹಿನ್ನೆಲೆಯಲ್ಲಿ ನರ್ಮ್ ಯೋಜನೆಯ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ಮೈಸೂರಿಗೆ ಆಗಮಿಸಿ ನಿರಾಶ್ರಿತ ಮಹಿಳೆಯರ ಆಶ್ರಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕಟ್ಟಡ ಶಿಥಿಲಗೊಂಡಿರುವುದು ಹಾಗೂ ಇಬ್ಬರು ಮಹಿಳೆಯರಷ್ಟೇ ಇದ್ದುದರಿಂದ ಕೇಂದ್ರ ಸ್ಥಗಿತ ಗೊಳಿಸಲು ನಿರ್ಧರಿಸಲಾಯಿತು. ಆ ಇಬ್ಬರು ಮಹಿಳೆಯರನ್ನು ವಿಜಯನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಡೆಯುತ್ತಿರುವ ಮಹಿಳೆಯರ ನಿರಾಶ್ರಿತ ಕೇಂದ್ರಕ್ಕೆ ಸ್ಥಳಾಂತರ ಮಾಡಿ ಈ ಕೇಂದ್ರವನ್ನು ಮುಚ್ಚುವಂತೆ ಸಲಹೆ ನೀಡಿದರು. ಈ ಹಿನ್ನೆಲೆ ಯಲ್ಲಿ ನಗರ ಪಾಲಿಕೆ ನಿರಾಶ್ರಿತ ಮಹಿಳೆಯರ ಆಶ್ರಯ ತಾಣಕ್ಕೆ ಬೀಗ ಜಡಿದಿದೆ.

ಈ ಕುರಿತಂತೆ ಪಾಲಿಕೆ ಹೆಚ್ಚುವರಿ ಆಯುಕ್ತ ಎಂ.ಎನ್.ಶಶಿಕುಮಾರ್ `ಮೈಸೂರು ಮಿತ್ರ’ ನೊಂದಿಗೆ ಶುಕ್ರವಾರ ಮಾತನಾಡಿ, ಮೈಸೂರು ನಗರ ಪಾಲಿಕೆ ವತಿಯಿಂದ ವಿದ್ಯಾವರ್ಧಕ ಕಾಲೇಜಿನ ಬಳಿ ನಿರಾಶ್ರಿತ ಪುರುಷರಿಗಾಗಿ ನಡೆಸುತ್ತಿರುವ ಆಶ್ರಯ ಕೇಂದ್ರ ರಾಜ್ಯದಲ್ಲೇ ಅತ್ಯುತ್ತಮ ಕೇಂದ್ರ ಎಂಬ ಮನ್ನಣೆ ಪಡೆದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಗಾಡಿ ಚೌಕದಲ್ಲಿದ್ದ ನಿರಾಶ್ರಿತ ಮಹಿಳೆಯರ ಆಶ್ರಯ ಕೇಂದ್ರದಲ್ಲಿ ಇಬ್ಬರು ಮಹಿಳೆಯರು ಮಾತ್ರ ಇದ್ದರು. ಅವರ ಭದ್ರತೆ ದೃಷ್ಟಿಯಿಂದ ನಲ್ಮ್ ಯೋಜನೆಯ ನಿರ್ದೇಶಕರಾದ ಆರುಂಧತಿ ಚಂದ್ರಶೇಖರ್ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರ ಸಲಹೆ ಪಡೆದು ಆಶ್ರಯ ಕೇಂದ್ರವನ್ನು ಮುಚ್ಚ ಲಾಗಿದೆ ಎಂದು ತಿಳಿಸಿದರು.

Translate »