ಹಲ್ಲೆ ಸಂಚು ಬಯಲು ಮಾಡುವಲ್ಲಿ ತನಿಖಾಧಿಕಾರಿ ವಿಫಲ: ಗೃಹ ಸಚಿವರಿಗೆ ಶಾಸಕ ತನ್ವೀರ್ ಸೇಠ್ ಪತ್ರ
ಮೈಸೂರು

ಹಲ್ಲೆ ಸಂಚು ಬಯಲು ಮಾಡುವಲ್ಲಿ ತನಿಖಾಧಿಕಾರಿ ವಿಫಲ: ಗೃಹ ಸಚಿವರಿಗೆ ಶಾಸಕ ತನ್ವೀರ್ ಸೇಠ್ ಪತ್ರ

March 7, 2020

ಮೈಸೂರು, ಮಾ.6-ತಮ್ಮ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಸಂಚಿನ ಹಿಂದಿರುವ ಪ್ರಮುಖರು, ಸಂಘಟನೆ ಹಾಗೂ ಉದ್ದೇಶವನ್ನು ಪತ್ತೆ ಹಚ್ಚುವಲ್ಲಿ ತನಿಖಾಧಿಕಾರಿಗಳು ವಿಫಲವಾಗಿದ್ದಾರೆ ಎಂದು ನರಸಿಂಹರಾಜ ಶಾಸಕ ತನ್ವೀರ್ ಸೇಠ್ ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಮೈಸೂರಿನ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ 2019ರ ನ.17ರಂದು ತಾವು ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದಾಗ ದುಷ್ಕರ್ಮಿ ಯೋರ್ವ ಮಾರಣಾಂತಿಕ ಹಲ್ಲೆ ನಡೆಸಿದ್ದನ್ನು ಉಲ್ಲೇಖಿಸಿರುವ ಅವರು, ಈ ಪ್ರಕರಣದ ತನಿಖೆಯನ್ನು ಮೈಸೂರು ನಗರ ಅಪರಾಧ ವಿಭಾಗದ ಡಿಸಿಪಿ ನೇತೃತ್ವದಲ್ಲಿ ನಡೆಸಿ, ಹಲ್ಲೆಕೋರ ಮತ್ತು ಆತನ ಸಹಚರರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ, ತನಿಖಾಧಿಕಾರಿಗಳು ಹಲ್ಲೆಯ ಉದ್ದೇಶ ಹಾಗೂ ಈ ಸಂಚಿನ ಹಿಂದಿರುವ ಪ್ರಮುಖರು ಹಾಗೂ ಸಂಘಟನೆಯನ್ನು ಪತ್ತೆ ಹಚ್ಚಲು ವಿಫಲರಾಗಿದ್ದು, ಪ್ರಕರಣದ ತೀವ್ರತೆಯನ್ನು ಪರಿಗಣಿಸಿ ಹಲ್ಲೆ ಸಂಚಿನ ಹಿಂದಿರುವ ಪ್ರಮುಖರು, ಸಂಘಟನೆ ಹಾಗೂ ಉದ್ದೇಶವನ್ನು ಪತ್ತೆ ಹಚ್ಚಿ ತಮಗೆ ನ್ಯಾಯ ಒದಗಿಸಬೇಕೆಂದು ತನ್ವೀರ್ ಸೇಠ್ ಮನವಿ ಮಾಡಿದ್ದಾರೆ.

Translate »