INX ಮೀಡಿಯಾ ಹಗರಣ: ಹೈಡ್ರಾಮಾ ನಡುವೆ ಕೇಂದ್ರದ ಮಾಜಿ ಗೃಹ, ಹಣಕಾಸು ಸಚಿವ ಪಿ.ಚಿದಂಬರಂ ಬಂಧನ
ಮೈಸೂರು

INX ಮೀಡಿಯಾ ಹಗರಣ: ಹೈಡ್ರಾಮಾ ನಡುವೆ ಕೇಂದ್ರದ ಮಾಜಿ ಗೃಹ, ಹಣಕಾಸು ಸಚಿವ ಪಿ.ಚಿದಂಬರಂ ಬಂಧನ

August 22, 2019

ನವದೆಹಲಿ,ಆ.21-ಕಳೆದ 27 ಗಂಟೆಯಿಂದ ತಲೆ ಮರೆಸಿಕೊಂಡಿದ್ದ ಐಎನ್‍ಎಕ್ಸ್ ಮೀಡಿಯಾ ಲಂಚ ಸ್ವೀಕಾರ ಪ್ರಕರಣದ ಆರೋಪಿಯಾದ ಮಾಜಿ ಹಣಕಾಸು ಹಾಗೂ ಗೃಹ ಸಚಿವ ಪಿ.ಚಿದಂಬರಂ ಅವರನ್ನು ಕೊನೆಗೂ ಇಂದು ರಾತ್ರಿ ದೆಹಲಿಯ ಜೋರ್‍ಬಾಗ್‍ನಲ್ಲಿರುವ ಅವರ ನಿವಾಸಕ್ಕೆ ನುಗ್ಗಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ಚಿದಂಬರಂ ಅವರನ್ನು ಸಿಬಿಐ ಪ್ರಧಾನ ಕಚೇರಿ ಯಲ್ಲಿ ಸಿಬಿಐ ನಿರ್ದೇಶಕ ಆರ್.ಕೆ. ಶುಕ್ಲಾ ವಿಚಾ ರಣೆ ನಡೆಸುತ್ತಿದ್ದಾರೆ. ಇಡೀ ರಾತ್ರಿ ವಿಚಾರಣೆ ನಡೆಸಿ, ನಾಳೆ (ಗುರುವಾರ) ಸಿಬಿಐ ವಿಶೇಷ ನ್ಯಾಯಾ ಲಯಕ್ಕೆ ಹಾಜರುಪಡಿಸಿ, ಮತ್ತೆ ಚಿದಂಬರಂ ಅವ ರನ್ನು ಸಿಬಿಐ ತನ್ನ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

ಜಾಮೀನು ಅರ್ಜಿ ದೆಹಲಿ ಹೈಕೋರ್ಟ್‍ನಲ್ಲಿ ನಿನ್ನೆ ವಜಾಗೊಂಡ ನಂತರ ಸುಪ್ರೀಂ ಕೋರ್ಟ್‍ಗೆ ಮನವಿ ಸಲ್ಲಿಸಿ, ಚಿದಂಬರಂ ತಲೆಮರೆಸಿಕೊಂಡಿ ದ್ದರು. ಅವರ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿತ್ತು. ನಿನ್ನೆ ಮಧ್ಯಾಹ್ನದಿಂದ ಸರಿ ರಾತ್ರಿಯವರೆಗೆ ಸಿಬಿಐ ಮತ್ತು ಇಡಿ ಅಧಿಕಾರಿಗಳು ಚಿದಂಬರಂ ಮನೆಗೆ ಹಲವು ಬಾರಿ ತೆರಳಿ ಬರಿಗೈಯಲ್ಲಿ ವಾಪಸ್ಸಾಗಿ ದ್ದರು. ಇಂದು ಸುಪ್ರೀಂ ಕೋರ್ಟ್ ಜಾಮೀನು ಅರ್ಜಿ ಕ್ರಮಬದ್ಧವಾಗಿ ಸಲ್ಲಿಸುವಂತೆ ಮೊದಲು ಸಲ್ಲಿಸಿದ ಅರ್ಜಿಯನ್ನು ತಳ್ಳಿಹಾಕಿದ್ದರಿಂದ ಚಿದಂಬರಂ ಹಾಗೂ ಅವರ ಪರ ಘಟಾನುಘಟಿ ವಕೀಲರಾದ ಮನು ಸಿಂಘ್ವಿ, ಕಪಿಲ್ ಸಿಬಲ್‍ಗೆ ಭಾರಿ ಹಿನ್ನಡೆಯಾಯಿತು. ಹಾಲಿ ಜಾಮೀನು ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಶುಕ್ರವಾರಕ್ಕೆ ಮುಂದೂಡಿತು. ಈ ಮಧ್ಯೆ ಜಾರಿ ನಿರ್ದೇಶನಾಲಯ (ಇಡಿ) ಚಿದಂಬರಂ ವಿರುದ್ಧ ದೇಶ ಬಿಟ್ಟು ಹೊರಹೋಗದಂತೆ ಲುಕ್ ಔಟ್ ನೋಟಿಸ್ ಜಾರಿಗೊಳಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ನಡುವೆ ಬರೋಬ್ಬರಿ 27 ಗಂಟೆಗಳ ನಂತರ ಇಂದು ರಾತ್ರಿ ದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಪ್ರತ್ಯಕ್ಷರಾದ ಚಿದಂಬರಂ ತುರ್ತು ಸುದ್ದಿಗೋಷ್ಠಿ ನಡೆಸಿದರು.

ಈ ಮಾಹಿತಿ ತಿಳಿಯುತ್ತಿದ್ದಂತೆ ಸಿಬಿಐ ಹಾಗೂ ಇಡಿ ಅಧಿಕಾರಿಗಳು ಕಾಂಗ್ರೆಸ್ ಕಚೇರಿಗೆ ದೌಡಾಯಿ ಸಿದರು. ಅಷ್ಟರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಧಿಕ ಸಂಖ್ಯೆಯಲ್ಲಿ ಅಲ್ಲಿ ಜಮಾಯಿಸಿದ್ದರು. ಸಿಬಿಐ ಮತ್ತು ಇಡಿ ಅಧಿಕಾರಿಗಳು ಕಾಂಗ್ರೆಸ್ ಕಚೇರಿಯೊಳಗೆ ಪ್ರವೇ ಶಿಸಲು ಅವಕಾಶವಾಗದಂತೆ ಕಚೇರಿಯ ಮುಖ್ಯ ಬಾಗಿಲನ್ನು ಕಾರ್ಯಕರ್ತರು ಬಂದ್ ಮಾಡಿ ಪ್ರತಿಭಟಿ ಸಲಾರಂಭಿಸಿದರು. ಇದರಿಂದ ಅಲ್ಲಿ ಹೈಡ್ರಾಮಾವೇ ನಡೆದುಹೋಯಿತು. ಇತ್ತ ಸುದ್ದಿಗೋಷ್ಠಿಯಲ್ಲಿ ಚಿದಂಬರಂ ನಾನು ಐಎನ್‍ಎಕ್ಸ್ ಮೀಡಿಯಾ ಲಂಚ ಸ್ವೀಕಾರ ಪ್ರಕರಣದ ಆರೋಪಿಯಲ್ಲ. ನನ್ನನ್ನು ಹಾಗೂ ನನ್ನ ಮಗನನ್ನು ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ಮಾಡಲಾಗುತ್ತಿದೆ. ಎಫ್‍ಐಆರ್‍ನಲ್ಲೂ ಕೂಡ ನನ್ನ ಹೆಸರು ಇಲ್ಲ. ಇಡೀ ಪ್ರಕರಣವನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ದೂರಿದರು. ಚಿದಂಬರಂ ಅವರೊಂದಿಗೆ

ಈ ಸಂದರ್ಭದಲ್ಲಿ ಕಾಂಗ್ರೆಸ್ ವಕ್ತಾರ ಮನು ಸಿಂಘ್ವಿ ಹಾಗೂ ಅವರ ಪರ ವಕೀಲರೂ ಆದ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಉಪಸ್ಥಿತರಿದ್ದರು.

ತರಾತುರಿಯಲ್ಲಿ ಕೇವಲ 10 ನಿಮಿಷದಲ್ಲಿ ಪತ್ರಿಕಾಗೋಷ್ಠಿ ಮುಗಿಸಿದ ಚಿದಂಬರಂ, ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ನಡುವೆಯೇ ಸಿಬಿಐ ಮತ್ತು ಇಡಿ ಅಧಿಕಾರಿಗಳ ಕಣ್ತಪ್ಪಿಸಿ ವಾಹನವನ್ನೇರಿ ತಮ್ಮ ಮನೆಯತ್ತ ತೆರಳಿದರು. ಈ ವೇಳೆ ಸಿಬಿಐ ಹಾಗೂ ಇಡಿ ಅಧಿಕಾರಿಗಳು ಅವರನ್ನು ಬೆಂಬಿಡದೆ ಹಿಂಬಾಲಿಸಿದರು. ಚಿದಂಬರಂ ತಮ್ಮ ಮನೆ ತಲುಪುವಷ್ಟರಲ್ಲಿ ದೆಹಲಿ ಪೊಲೀಸರು ಅಲ್ಲಿ ಹಾಜರಿದ್ದರು. ಕೊನೆಗೆ ಸಿಬಿಐ ಹಾಗೂ ಇಡಿ ಅಧಿಕಾರಿಗಳು ಚಿದಂಬರಂ ಮನೆ ಪ್ರವೇಶಿಸಲು ಮುಂದಾದಾಗ ಮುಂದಿನ ಗೇಟ್ ಬಂದ್ ಮಾಡಲಾಗಿತ್ತು. ಅಂತಿಮವಾಗಿ ಗೇಟನ್ನು ಹಾರಿ ಒಳ ಹೋದ ಅಧಿಕಾರಿಗಳು ಸುಮಾರು 1 ಗಂಟೆಗಳ ಕಾಲ ಚಿದಂಬರಂ ಅವರನ್ನು ಅವರ ನಿವಾಸದ ಮೊದಲ ಮಹಡಿಯಲ್ಲಿ ಪ್ರಾಥಮಿಕ ವಿಚಾರಣೆ ನಡೆಸಿದರು. ಕೊನೆಗೆ ಚಿದಂಬರಂ ಅವರನ್ನು ಬಂಧಿಸಿ ಕರೆದೊಯ್ಯಲಾಯಿತು. ಈ ಸಂದರ್ಭದಲ್ಲೂ ಕೂಡ ಕೆಲ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮಾಧ್ಯಮದವರು ಅಧಿಕ ಸಂಖ್ಯೆಯಲ್ಲಿ ಮನೆಯ ಮುಂದೆ ನೆರೆದಿದ್ದರಿಂದ ಗೊಂದಲವುಂಟಾಯಿತು. ಆದರೂ ಪೊಲೀಸರು ಎಲ್ಲವನ್ನೂ ನಿವಾರಿಸಿಕೊಂಡು ಚಿದಂಬರಂ ಇದ್ದ ವಾಹನ ಮುಂದೆ ಸಾಗಲು ಅವಕಾಶ ಮಾಡಿಕೊಟ್ಟರು.

ಏನಿದು ಹಗರಣ: ಚಿದಂಬರಂ ಕೇಂದ್ರ ಹಣಕಾಸು ಸಚಿವರಾಗಿದ್ದಾಗ 2007ರಲ್ಲಿ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ ವಿದೇಶ ಬಂಡವಾಳ ಹೂಡಿಕೆ ಪ್ರೋತ್ಸಾಹಕ ಮಂಡಳಿ (ಈIPಃ)ಯ ಅನುಮೋದನೆ ಸಿಕ್ಕಿತ್ತು. ಆದರೆ 4.62 ಕೋಟಿ ಹೂಡಿಕೆಗೆ ಮಾತ್ರ ಅವಕಾಶವಿತ್ತು. ಆದರೆ ಪೀಟರ್ ಮತ್ತು ಇಂದ್ರಾಣಿ ಮುಖರ್ಜಿ (ಈಗ ಪುತ್ರಿ ಶೀನಾ ಬೋರಾ ಹತ್ಯೆ ಪ್ರಕರಣದ ಸಂಬಂಧ ಜೈಲಿನಲ್ಲಿದ್ದಾರೆ) ಮಾಲೀಕತ್ವದ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ ಮಲೇಷಿಯಾದ ಕಂಪನಿಯಿಂದ 305 ಕೋಟಿ ರೂ. ಮೊತ್ತದ ವಿದೇಶಿ ಬಂಡವಾಳ ಹೂಡಿಕೆ ಲಭ್ಯವಾಗಿತ್ತು. ಐಎನ್‍ಎಕ್ಸ್ ಮೀಡಿಯಾ ಪರ ಲಾಬಿ ಮಾಡಿದ ಚಿದಂಬರಂ ಪುತ್ರ ಕಾರ್ತಿಗೆ 10 ಕೋಟಿ ಲಂಚ ಸಂದಾಯವಾಗಿತ್ತು ಎಂದು ದೂರಲಾಗಿತ್ತು. ಐಎನ್‍ಎಕ್ಸ್ ಮೀಡಿಯಾಕ್ಕೆ ಹಣ ವರ್ಗಾಯಿಸಲಾದ ಕಂಪನಿಗಳು ಚಿದಂಬರಂ ಪುತ್ರ ಕಾರ್ತಿ ನೇರವಾಗಿ ಮತ್ತು ಪರೋಕ್ಷವಾಗಿ ನಿಯಂತ್ರಣಹೊಂದಿದ್ದ ಕಂಪನಿಗಳಾಗಿವೆ ಎಂದು ಸಿಬಿಐ ಮತ್ತು ಇಡಿ ಆರೋಪಿಸಿದ್ದವು.

ಈ ಪ್ರಕರಣ ಬಯಲಿಗೆ ಬರುತ್ತಿದ್ದಂತೆಯೇ ಕಂದಾಯ ಸಚಿವಾಲಯ ವಿಚಾರಣೆಗೆ ಆದೇಶಿಸಿತ್ತು. ವಿಚಾರಣೆಯ ವೇಳೆ ಪಿ.ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ಅವರು ಮಧ್ಯಸ್ಥಿಕೆ ವಹಿಸಿ ತಂದೆಯ ಪ್ರಭಾವವನ್ನು ಬಳಸಿಕೊಂಡು ತಮ್ಮ ಕಂಪನಿಯ ಮೂಲಕ 10 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಸಿಬಿಐ 2017ರಲ್ಲಿ ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಮತ್ತಿತರರ ವಿರುದ್ಧ ಎಫ್‍ಐಆರ್ ದಾಖಲಿಸಿ ವಿಚಾರಣೆ ಆರಂಭಿಸಿತ್ತು. ಆದರೆ ಈ ವಿಷಯದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ರಾಜಕೀಯ ಕಾರಣಕ್ಕಾಗಿ ಬಿಜೆಪಿ ಸರ್ಕಾರ ತಮ್ಮನ್ನು ಗುರಿಯಾಗಿಸುತ್ತಿದೆ ಎಂದು ಚಿದಂಬರಂ ಆಪಾದಿಸುತ್ತಾ ಬಂದಿದ್ದರು.

ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಆರಂಭದಲ್ಲೇ ಚಿದಂಬರಂ ಬಂಧನ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಆದರೆ ಬಿಜೆಪಿ ಎರಡನೇ ಬಾರಿ ಅಧಿಕಾರ ಗದ್ದುಗೆ ಏರಿ, ಅಮಿತ್ ಶಾ ಗೃಹ ಸಚಿವರಾಗುತ್ತಿದ್ದಂತೆ ಪ್ರಕರಣ ಹೊತ ತಿರುವು ಪಡೆದುಕೊಂಡಿತು. ತನಿಖೆ ವೇಗ ಪಡೆದುಕೊಂಡು ಕೊನೆಗೂ ಚಿದಂಬರಂ ಬಂಧನ ಹಂತ ತಲುಪಿತು. ಚಿದಂಬರಂ ಬೆನ್ನಿಗೆ ನಿಂತಿರುವ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ, ಸಹೋದರಿ ಪ್ರಿಯಾಂಕ ವಾದ್ರಾ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ನಾವೆಲ್ಲರೂ ಚಿದಂಬರಂ ಅವರ ಬೆಂಬಲಿಕ್ಕಿದ್ದೇವೆ. ಅದೇನೆ ಪರಿಣಾಮಗಳು ಎದುರಾಗಲಿ ಸತ್ಯಕ್ಕಾಗಿ ಹೋರಾಟ ಮುಂದುವರೆಸುತ್ತೇವೆ ಎಂದು ಪ್ರಿಯಾಂಕ ವಾದ್ರಾ ಟ್ವೀಟ್ ಮಾಡಿದ್ದಾರೆ.

ಸೋಹ್ರಾಬುದ್ದೀನ್ ಎನ್‍ಕೌಂಟರ್ ಪ್ರಕರಣ ಸಂಬಂಧ ಅಂದು ಗುಜರಾತ್ ಗೃಹ ಸಚಿವರಾಗಿದ್ದ ಹಾಲಿ ಕೇಂದ್ರದ ಗೃಹ ಸಚಿವ ಅಮಿತ್‍ಶಾ ಅವರು ಜೈಲು ಸೇರಬೇಕಾಗಿ ಬಂದಿತ್ತು. ಆಗ ಪಿ.ಚಿದಂಬರಂ ಕೇಂದ್ರ ಗೃಹ ಸಚಿವರಾಗಿದ್ದರು. ಅಮಿತ್ ಶಾ ವಿರುದ್ಧದ ನೆನೆಗುದಿಗೆ ಬಿದ್ದಿದ್ದ ಪ್ರಕರಣಗಳನ್ನು ತನಿಖೆಗೆ ಚಾಲನೆ ಕೊಟ್ಟಿದ್ದೇ ಪಿ.ಚಿದಂಬರಂ. ಕೊನೆಗೆ ಅಮಿತ್ ಶಾ ಜೈಲು ಸೇರಬೇಕಾಗಿ ಬಂತು. ಅಲ್ಲದೇ 2 ವರ್ಷಗಳ ಕಾಲ ಗುಜರಾತ್‍ನಿಂದ ಗಡಿಪಾರಾಗುವ ಸಂದರ್ಭವೂ ಬಂದಿತ್ತು. ಆದರೆ ಈಗ ಅಮಿತ್ ಶಾ ಕೇಂದ್ರ ಗೃಹ ಸಚಿವರಾಗಿದ್ದಾರೆ. ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಪಿ.ಚಿದಂಬರಂ ಜೈಲು ಸೇರಬೇಕಾಗಿ ಬಂದಿದೆ. ಅದಕ್ಕೆ ಹೇಳುವುದು ರಾಜಕಾರಣದಲ್ಲಿ ಯಾವುದೂ ಅಸಾಧ್ಯವಲ್ಲ. ಹಾಗೆಯೇ ಯಾವುದು ಶಾಶ್ವತವೂ ಅಲ್ಲ.

Translate »