ಇರ್ವಿನ್ ರಸ್ತೆ ಬಾಕಿ ಅಭಿವೃದ್ಧಿ ಕಾಮಗಾರಿ ಮಾ.1 ರಿಂದ ಆರಂಭ
ಮೈಸೂರು

ಇರ್ವಿನ್ ರಸ್ತೆ ಬಾಕಿ ಅಭಿವೃದ್ಧಿ ಕಾಮಗಾರಿ ಮಾ.1 ರಿಂದ ಆರಂಭ

February 5, 2020

ಮೈಸೂರು, ಫೆ. 4- ಮೈಸೂರಿನ ಹೃದಯ ಭಾಗದ ಪ್ರತಿಷ್ಠಿತ ಐತಿಹಾಸಿಕ ಇರ್ವಿನ್ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಅಂತೂ ಮಾರ್ಚ್ 1 ರಿಂದ ಆರಂಭವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಇರ್ವಿನ್ ರಸ್ತೆಯಲ್ಲಿ 4 ತಿಂಗಳು ವಾಹನ ಸಂಚಾರ ಬಂದ್ ಮಾಡಿ, ಸುರಕ್ಷಿತ ಕಾಮಗಾರಿಗೆ ಅವಕಾಶ ಕಲ್ಪಿಸುವಂತೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಅವರು ನಾಳೆ (ಫೆ. 5) ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲು ಉದ್ದೇಶಿಸಿ ದ್ದಾರೆ. ಕೆಎಸ್‍ಆರ್‍ಟಿಸಿ ಗ್ರಾಮಾಂತರ ಬಸ್ ನಿಲ್ದಾಣ ದಿಂದ ಸಂಚಾರ ಮಾರ್ಗ ಬದಲಿಸಿ, ಜೊತೆಗೆ ಖಾಸಗಿ ವಾಹನಗಳಿಗೂ ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟ ನಂತರ ಪಾಲಿಕೆ ಅಧಿಕಾರಿಗಳು, ನೆಹರು ಸರ್ಕಲ್ (ಸೆಂಟ್ರಲ್ ಪೋಸ್ಟ್ ಆಫೀಸ್)ನಿಂದ ಸರ್ಕಾರಿ ಆಯುರ್ವೇದ ಕಾಲೇಜು ಸರ್ಕಲ್ ವರೆಗೆ 850 ಮೀಟರ್ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಯನ್ನು ಮಾರ್ಚ್ 1 ರಿಂದ ಆರಂಭಿಸಲಿದ್ದಾರೆ.

ರಸ್ತೆ ಆಜು-ಬಾಜಿನ ಒಟ್ಟು 84 ಆಸ್ತಿಗಳ ಪೈಕಿ ಈಗಾ ಗಲೇ ಚದರಡಿಗೆ ಅತೀ ಹೆಚ್ಚು 13,072 ರೂ.ನಂತೆ ಪರಿಹಾರ ವನ್ನು ಮಾಲೀಕರಿಗೆ ಸಂದಾಯ ಮಾಡಿ, 76 ಕಟ್ಟಡಗಳ ಭಾಗಶಃ ನೆಲಸಮಗೊಳಿಸಲಾಗಿದೆ. (ಶೇ. 90). ಉಳಿದ 8 ಕಟ್ಟಡಗಳಿಗೆ ಸಂಬಂಧಿಸಿದಂತೆ ಮಾಲೀಕತ್ವದ ವಿಚಾರ ದಲ್ಲಿ ಕೆಲ ಕಾನೂನಾತ್ಮಕ ಮತ್ತು ತಾಂತ್ರಿಕ ತೊಡಕುಗಳಿರುವುದರಿಂದ ಸಂಬಂಧಿಸಿದವ ರೊಂದಿಗೆ ಮಾತುಕತೆ ನಡೆಸುತ್ತಿ ರುವ ಪಾಲಿಕೆ ವಲಯ ಕಚೇರಿ-6ರ ವಲಯಾಧಿಕಾರಿ ಗೀತಾ ಲುಡೇದ ಹಾಗೂ ಅಭಿವೃದ್ಧಿ ಅಧಿಕಾರಿ ಹೆಚ್. ನಾಗರಾಜ್, 15 ದಿನದೊಳ ಗಾಗಿ ಇತ್ಯರ್ಥಗೊಳಿಸುವ ವಿಶ್ವಾಸ ಹೊಂದಿದ್ದಾರೆ.

ಇರ್ವಿನ್ ರಸ್ತೆಯ ಇಕ್ಕೆಲಗಳಲ್ಲಿ ಸ್ವಾಧೀನಪಡಿಸಿಕೊಂಡ 84 ಕಟ್ಟಡಗಳ ಮಾಲೀಕರಿಗೆ ಪರಿಹಾರ ರೂಪದಲ್ಲಿ ಬರೋಬ್ಬರಿ 37 ಕೋಟಿ ರೂ. ಹಣವನ್ನು ಪಾಲಿಕೆ ನೀಡು ತ್ತಿದೆ. ವಶಪಡಿಸಿಕೊಂಡ ಕಟ್ಟಡಗಳನ್ನು ಸುರಕ್ಷಿತವಾಗಿ ನೆಲಸಮಗೊಳಿಸಲು 32 ಲಕ್ಷ ರೂ.ಗಳನ್ನು ಭರಿಸುತ್ತಿದೆ. ಇನ್ನು ರಸ್ತೆ ಅಗಲೀಕರಣ, ಅಭಿವೃದ್ಧಿ ಕಾಮಗಾರಿಗೆ ಪಾಲಿಕೆ ಯು 4 ಕೋಟಿ ರೂ. ಅನುದಾನವನ್ನು ಬಳಸುತ್ತಿದೆ. ಒಟ್ಟಾರೆ 850 ಮೀಟರ್ ಉದ್ದದ ಇರ್ವಿನ್ ರಸ್ತೆ ಅಭಿ ವೃದ್ಧಿಗೆ 41.32 ಕೋಟಿ ರೂ. ವೆಚ್ಚ ಮಾಡಿದಂತಾಗುತ್ತದೆ.

ಪ್ರಸ್ತುತ ಇರುವ 9 ಮೀಟರ್ ರಸ್ತೆಯನ್ನು 18 ಮೀಟರ್ ಅಗಲಕ್ಕೆ ವಿಸ್ತರಿಸುವುದು. ಮಧ್ಯೆ ವಿಭಜಕ ನಿರ್ಮಿಸಿ ಎರಡೂ ಕಡೆಯಲ್ಲಿ ಕಾಂಕ್ರಿಟ್ ಬಾಕ್ಸ್ ಡ್ರೈನ್, ಫುಟ್‍ಪಾತ್ ನಿರ್ಮಾಣ ಹಾಗೂ ಬೀದಿ ದೀಪ ಅಳವಡಿಸಲಾಗುತ್ತಿದೆ.

ಈಗಾಗಲೇ ಗ್ರಾಮಾಂತರ ಬಸ್ ನಿಲ್ದಾಣದಿಂದ ನೆಹರು ಸರ್ಕಲ್‍ವರೆಗೆ 20 ಮೀಟರ್ ಹೊರತುಪಡಿಸಿ 195 ಮೀಟರ್ ಹಾಗೂ ಸರ್ಕಾರಿ ಆಯುರ್ವೇದ ಸರ್ಕಲ್ ನಿಂದ ರೈಲ್ವೆ ಸ್ಟೇಷನ್ ಸರ್ಕಲ್‍ವರೆಗೆ 550 ಮೀಟರ್ ರಸ್ತೆ ಅಗಲೀಕರಿಸಿ ಅಭಿವೃದ್ಧಿಪಡಿಸಲಾಗಿದ್ದು, ಖಾಸಗಿ ಕಟ್ಟಡಗಳಿದ್ದ ಕಾರಣ ಆ ನಡುವಿನ 850 ಮೀಟರ್ ಉದ್ದದ ಇರ್ವಿನ್ ರಸ್ತೆ ಕೆಲಸ ಬಾಕಿ ಉಳಿದಿತ್ತು.

ಈ ಕಾಮಗಾರಿ ಪೂರ್ಣಗೊಂಡಲ್ಲಿ ರೈಲ್ವೆ ನಿಲ್ದಾಣ ದಿಂದ ಗ್ರಾಮಾಂತರ ಬಸ್ ನಿಲ್ದಾಣದವರೆಗಿನ ರಸ್ತೆಯನ್ನು ಮೈಸೂರು ಮಹಾನಗರ ಪಾಲಿಕೆಯು ರಾಜ್ಯ ಹಣಕಾಸು ಆಯೋಗ (ಎಸ್‍ಎಫ್‍ಸಿ)ದ ಒಟ್ಟು 47 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸಿದಂತಾಗುತ್ತದೆ.

2016ರಲ್ಲಿ ಕೈಗೆತ್ತಿಕೊಂಡ ಈ ಯೋಜನೆ 4 ವರ್ಷಗಳ ನಂತರ ಈಗ 2020ರಲ್ಲಿ ಪೂರ್ಣ ಗೊಳ್ಳುತ್ತಿದೆ. ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಮಾರ್ಗ ದರ್ಶನದಲ್ಲಿ ಅಧೀಕ್ಷಕ ಇಂಜಿನಿಯರ್ ಭಾಸ್ಕರ್, ಎಕ್ಸಿ ಕ್ಯೂಟಿವ್ ಇಂಜಿನಿಯರ್ ನಾಗರಾಜು ಈ ಕಾಮ ಗಾರಿಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಈ ಯೋಜನೆ ಅಂತ್ಯಗೊಂಡಲ್ಲಿ ಗ್ರಾಮಾಂತರ ಬಸ್ ನಿಲ್ದಾಣದಿಂದ ಮಡಿಕೇರಿ, ಹಾಸನ, ಮಂಗಳೂರು ಮಾರ್ಗದ ಸಾರಿಗೆ ಬಸ್‍ಗಳು, ನಗರ ಸಾರಿಗೆ ಬಸ್ ಹೀಗೆ ಎಲ್ಲಾ ಬಗೆಯ ವಾಹನಗಳು ಸುಗಮವಾಗಿ ಇಲ್ಲಿ ಸಂಚರಿಸಬಹುದಾಗಿದೆ.

ಎಸ್.ಟಿ. ರವಿಕುಮಾರ್

Translate »