ವಿಜಯಶಂಕರ್ ಪರ ಜೆಡಿಎಸ್, ಕಾಂಗ್ರೆಸ್ ಮುಖಂಡರ ರೋಡ್ ಶೋ
ಮೈಸೂರು

ವಿಜಯಶಂಕರ್ ಪರ ಜೆಡಿಎಸ್, ಕಾಂಗ್ರೆಸ್ ಮುಖಂಡರ ರೋಡ್ ಶೋ

April 12, 2019

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಪರ ಮೈಸೂರಿನ ಜನತಾನಗರ, ಟಿಕೆ ಬಡಾವಣೆ ಹಾಗೂ ಶಾರದಾದೇವಿ ನಗರದಲ್ಲಿ ಗುರುವಾರ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ರೋಡ್ ಶೋ ನಡೆಸಿ ಮತ ಯಾಚಿಸಿ ದರು. ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದ ಎರಡೂ ಪಕ್ಷಗಳ ಮುಖಂಡರು, ಸಿ.ಹೆಚ್.ವಿಜಯ ಶಂಕರ್ ಬೆಂಬಲಿಸುವಂತೆ ಜನತೆಯಲ್ಲಿ ಮನವಿ ಮಾಡಿ ದರು. ಹಿರಿಯ ನಟ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಖ್ಯಮಂತ್ರಿ ಚಂದ್ರು, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ಎಂಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ ನೇತೃತ್ವ ದಲ್ಲಿ ಪ್ರಚಾರ ನಡೆಸಲಾಯಿತು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಸಂವಿ ಧಾನ ಉಳಿಸಬೇಕಾದ ಪರಿಸ್ಥಿತಿ ಇಂದು ನಿರ್ಮಾಣ ವಾಗಿದೆ. ಹಾಲಿ ಸಂಸದರಾದ ಅನಂತಕುಮಾರ್ ಹೆಗ್ಗಡೆ, ಪ್ರತಾಪಸಿಂಹ ಸಂವಿಧಾನ ಬದಲಾಯಿಸುವ ಮಾತನಾಡಿದ್ದು, ಇವರಿಗೆ ಬಾಯಲ್ಲಿ ಹಿಡಿತವಿಲ್ಲ. ಇಂತಹವರು ಗೆದ್ದರೆ ಶೋಷಿತರು, ದಲಿತರು ಶೋಷಣೆಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಸಜ್ಜನ ರಾಜಕಾರಣಿ ಸಿ.ಹೆಚ್.ವಿಜಯಶಂಕರ್ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.

ಜಿ.ಡಿ.ಹರೀಶ್‍ಗೌಡ ಮಾತನಾಡಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಗೊಂದಲಗಳಿಗೆ ಕಿವಿಗೊಡದೇ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಅವರು ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಲು ಶ್ರಮಿಸಬೇಕು. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 3ನೇ ಸ್ಥಾನದಲ್ಲಿದ್ದು, ಇಲ್ಲಿ ಬಿಜೆಪಿಗೆ ಹಿನ್ನಡೆ ಕಟ್ಟಿಟ್ಟ ಬುತ್ತಿಯಾಗಿದೆ ಎಂದು ಹೇಳಿದರು.

ಮೈತ್ರಿ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಉನ್ನತ ಶಿಕ್ಷಣ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಸಹಕಾರದಿಂದ ಚಾಮುಂಡೇ ಶ್ವರಿ ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಸಾಗಿದೆ ಎಂದರು.

ರೈತರ 44 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿರುವ ಮೈತ್ರಿ ಸರ್ಕಾರ ಅನ್ನದಾತನ ಹಿತ ಕಾಯಲು ಬದ್ಧವಾಗಿದೆ. ಮೈಸೂರಿನ ಕುಡಿಯುವ ನೀರಿನ ಬವಣೆ ನೀಗಿಸಲು ಉಂಡವಾಡಿ ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ನೀಡಲಾಗಿದೆ. ಹೀಗೆ ಮೈತ್ರಿ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಸಿದ್ದರಾಮಯ್ಯರ ಮುಖ್ಯಮಂತ್ರಿ ಅವಧಿಯಲ್ಲಿ ಜಾರಿಗೆ ತಂದ ಯೋಜನೆಗಳನ್ನು ಮೈತ್ರಿ ಸರ್ಕಾರ ಮುಂದುವರಿಸಿ ಮತ್ತಷ್ಟು ಅಭಿವೃದ್ಧಿಗೆ ನಾಂದಿ ಹಾಡಿದೆ. ಹೀಗಾಗಿ ಜನತೆ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಬೆಂಬಲಿಸಿ ಉತ್ತಮ ಆಡಳಿತ ನೀಡಲು ಅವಕಾಶ ನೀಡಬೇಕೆಂದು ಕೋರಿದರು.

ಸಾಹಿತಿ ಪ್ರೊ.ಹೆಚ್.ಜಿ.ಸಿದ್ದರಾಮಯ್ಯ, ಜಿ.ಪಂ. ಮಾಜಿ ಅಧ್ಯಕ್ಷ ಕೆ.ಮರೀಗೌಡ, ಪಾಲಿಕೆ ಸದಸ್ಯರಾದ ಗೋಪಿ, ನಿರ್ಮಲ ಹರೀಶ್, ಸವಿತಾ ಸುರೇಶ್, ಮಾಜಿ ಮೇಯರ್ ಟಿ.ಬಿ.ಚಿಕ್ಕಣ್ಣ, ಮುಖಂಡರಾದ ಸಿ.ಎನ್. ಮಂಜೇಗೌಡ, ಕೃಷ್ಣಕುಮಾರ್ ಸಾಗರ್, ಮಂಜುಳಾ ಮಾನಸ, ಕೆ.ಎಸ್.ಶಿವರಾಂ, ಸೋಮಶೇಖರ್, ಹರೀಶ್, ಶೇಖರ್, ರಾಮಕೃಷ್ಣ ಮತ್ತಿತರರು ಪಾಲ್ಗೊಂಡಿದ್ದರು.

Translate »