ಪ್ರಕೃತಿ ವಿಕೋಪದಿಂದ ಕಣ್ಮರೆಯಾದ ‘ಜೋಡುಪಾಲ’
ಕೊಡಗು

ಪ್ರಕೃತಿ ವಿಕೋಪದಿಂದ ಕಣ್ಮರೆಯಾದ ‘ಜೋಡುಪಾಲ’

October 8, 2018

ಮಡಿಕೇರಿ: ಮನೆಯ ಕುರುಹುಗಳನ್ನೇ ಅಳಿಸಿ ಹಾಕಿದ ಭೀಕರ ಪ್ರಕೃತಿ ವಿಕೋಪ. ಭೂ ಸಮಾಧಿಯಾದ ಮನೆಯ ಅವಶೇಷಗಳಡಿಯಲ್ಲಿ ಅಳಿದುಳಿದ ವಸ್ತುಗಳಿಗಾಗಿ ಹುಡುಕುತ್ತಿರುವ ಮನೆಮಂದಿ. ಇಲ್ಲಿ ಮನೆಯೊಂದಿತ್ತು ಎಂಬುದಕ್ಕೆ ಸಾಕ್ಷಿ ಹೇಳುತ್ತಿರುವ ರುಬ್ಬುವ ಕಲ್ಲು. ಸಂಪೂರ್ಣ ಕೆಸರುಮಯವಾಗಿರುವ ಮಕ್ಕಳ ಶಾಲಾ ಪುಸ್ತಕಗಳು. ಗಿಡವೊಂದರಲ್ಲಿ ನೇತಾಡು ತ್ತಿರುವ ಮಕ್ಕಳ ಶಾಲಾ ಗುರುತಿನ ಕಾರ್ಡ್. ಕೆಸರಿನಲ್ಲಿ ಹೂತು ಹೋಗಿರುವ ಟಿವಿಯನ್ನು ಮೇಲಕ್ಕೆತ್ತಲು ಪ್ರಯತ್ನಿಸುತ್ತಿರುವ ಮನೆ ಮಾಲೀಕ.

ಇದು ಇತ್ತೀಚೆಗೆ ಕೊಡಗಿನಲ್ಲಿ ಸುರಿದ ಮಹಾಮಳೆಯಿಂದಾಗಿ ಸಂಭವಿಸಿದ ಭೀಕರ ಭೂಕು ಸಿತಕ್ಕೊಳಗಾದ ಜೋಡುಪಾಲ ಗ್ರಾಮದಲ್ಲಿ ಕಂಡುಬಂದ ಚಿತ್ರಣ. ಆಗಸ್ಟ್ 16ರಂದು ಸಂಭವಿಸಿದ ಭೀಕರ ಪ್ರಕೃತಿ ವಿಕೋಪ, ಬಡ ಕುಟುಂಬ ವಾಸಿಸುತ್ತಿದ್ದ ಮನೆ ಯನ್ನು ಆಪೋಷನ ಪಡೆದು ಕೊಂಡಿದೆ. ಕೂಲಿ-ನಾಲಿ ಮಾಡಿ ಬದುಕುತ್ತಿದ್ದ ಮನೆಮಂದಿ, ಇದ್ದ ಮನೆಯನ್ನು ಕಳೆದು ಕೊಂಡು ಇದೀಗ ಅತಂತ್ರರಾಗಿದ್ದಾರೆ. ಮನೆ ಸಮೀಪದಲ್ಲೇ ಹರಿಯುತ್ತಿದ್ದ ಸಣ್ಣ ತೋಡು ಮಹಾಮಳೆ ಯಿಂದಾಗಿ ಭೋರ್ಗರೆದ ಪರಿಣಾಮ ನದಿಯಂತಾದ ತೋಡಿನ ನೀರಿನಲ್ಲಿ ಮನೆ ಸಂಪೂರ್ಣ ಕೊಚ್ಚಿ ಹೋಗಿದೆ.

ಅಂದಿನ ಕರಾಳ ಘಟನೆಯನ್ನು ‘ಮೈಸೂರು ಮಿತ್ರ’ನೊಂದಿಗೆ ತೆರೆದಿಟ್ಟ ಜೋಡುಪಾಲದ ರಾಮಕೃಷ್ಣ, ಸುಮಾರು 40 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದ ನಾವು, ಭೀಕರ ಪ್ರಕೃತಿ ವಿಕೋಪದಿಂದ ಮನೆಯನ್ನು ಕಳೆದುಕೊಂಡಿದ್ದು, ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ತಮಗೆ ಸರ್ಕಾರ ಮತ್ತು ಜಿಲ್ಲಾಡಳಿತದಿಂದ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ಮನವಿ ಮಾಡಿದರು.

ಮನೆ ಸಂಪೂರ್ಣ ನಾಮಾವಶೇಷ ಗೊಂಡಿದ್ದು, ಅಲ್ಲಿ ಮನೆಯೊಂದಿತ್ತು ಅನ್ನೋ ಕುರುಹು ಇಲ್ಲದಂತೆ ಸಂಪೂರ್ಣ ಮನೆಯ ನಕ್ಷೆಯನ್ನೇ ಅಳಿಸಿ ಹಾಕಿದ ತೋಡು, ಇದೀಗ ಏನೂ ನಡೆದೇ ಇಲ್ಲ ವೆಂಬಂತೆ ಜುಳು ಜುಳು ನಾದದೊಂದಿಗೆ ಹರಿಯುತ್ತಿದೆ. ಆದರೆ, ಮನೆ ಮಂದಿ ಮಾತ್ರ ಕಂಬನಿ ಮಿಡಿಯುತ್ತಾ, ಅಳಿದು ಉಳಿದ ಅಲ್ಪಸ್ವಲ್ಪ ವಸ್ತುಗಳಿಗಾಗಿ ಹುಡು ಕಾಟ ನಡೆಸುತ್ತಿದ್ದಾರೆ. ಅವರ ಕಣ್ಣೀರು ಕೂಡ ತೋಡು ನೀರಿನಲ್ಲಿ ಬೆರೆತು ಕೋಡಿಯಾಗಿ ಹರಿಯುತ್ತಿದೆ.

Translate »