ಹ್ಯುಮಾನಿಟಿ ಫಸ್ಟ್‍ನಿಂದ ಸಂತ್ರಸ್ತರ ಮನೆ ದುರಸ್ತಿ
ಕೊಡಗು

ಹ್ಯುಮಾನಿಟಿ ಫಸ್ಟ್‍ನಿಂದ ಸಂತ್ರಸ್ತರ ಮನೆ ದುರಸ್ತಿ

October 8, 2018

ಮಡಿಕೇರಿ: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿ ಸಂಕಷ್ಟಕ್ಕೊಳಗಾದ ಸಂತ್ರಸ್ತರಿಗೆ ಮಡಿಕೇರಿಯ ಕಮ್ಯುನಿಟಿ ಹಾಲ್‍ನಲ್ಲಿ ಆಶ್ರಯ ನೀಡಿ ಸೇವೆಗೈದ ಹ್ಯುಮ್ಯಾನಿಟಿ ಫಸ್ಟ್ ಇಂಡಿಯಾದ ಸ್ವಯಂಸೇವಕರು ಇದೀಗ ಅತಿವೃಷ್ಟಿಯಿಂದಾಗಿ ತ್ಯಾಗರಾಜ ಕಾಲೋನಿಯಲ್ಲಿ ಹಾನಿಗೀಡಾದ ಗೋಡೆ ಕುಸಿದ ಕೆಲವು ಮನೆಗಳನ್ನು ದುರಸ್ತಿ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.

ತ್ಯಾಗರಾಜ ಕಾಲೋನಿಯ ಜನಾರ್ದನ, ಗಣೇಶ್, ಅಬ್ಬು, ಆಯಿಷ, ಸರೋಜ ಹಾಗೂ ಕಮರು ಎಂಬುವರ ಮನೆಗಳನ್ನು ದುರಸ್ತಿ ಮಾಡಲಾಗಿದೆ. ಹ್ಯುಮ್ಯಾನಿಟಿ ಫಸ್ಟ್‍ನ ಸುಮಾರು 20 ಸ್ವಯಂಸೇವಕರು ಕಳೆದ 15 ದಿನಗಳಿಂದ ಮನೆಗಳ ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, 6 ಮನೆಗಳ ದುರಸ್ತಿ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಆರ್ಥಿಕ ಪರಿಸ್ಥಿತಿಗೆ ಅನುಗುಣ ವಾಗಿ ಇನ್ನೂ 8 ರಿಂದ 10 ಮನೆಗಳನ್ನು ದುರಸ್ತಿ ಮಾಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಹ್ಯುಮ್ಯಾನಿಟಿ ಫಸ್ಟ್ ಸಂಸ್ಥೆ ಭಾರತ ಮಾತ್ರವಲ್ಲದೇ ಜಗತ್ತಿನ 52 ರಾಷ್ಟ್ರಗಳಲ್ಲಿ ಮಾನ ವೀಯ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಈ ಹಿಂದೆ ತಮಿಳುನಾಡು ಹಾಗೂ ಇತ್ತೀಚೆಗೆ ಕೇರಳದಲ್ಲಿ ಸಂಭವಿಸಿದ ಪ್ರಕೃತಿ ದುರಂತದ ಸಂದರ್ಭದಲ್ಲೂ ಸಂತ್ರಸ್ತರ ನೆರವಿಗೆ ಸಂಸ್ಥೆ ಸ್ಪಂದಿಸಿ ಮಾನವೀಯತೆ ಮೆರೆದಿದೆ ಎಂದು ಹ್ಯುಮ್ಯಾನಿಟಿ ಫಸ್ಟ್‍ನ ಪ್ರಮುಖರು ತಿಳಿಸಿದರು.

ಹ್ಯುಮ್ಯಾನಿಟಿ ಫಸ್ಟ್ ಸ್ವಯಂ ಸೇವಕರಾದ ಎಂ.ಎಫ್.ಬಶೀರ್ ಅಹ್ಮದ್, ಎಂ.ಯು. ಖಾಲಿದ್, ಜೆ.ಎಂ.ಶರೀಫ್, ಎಂ.ಯು.ಸಫಲ್ ಅಹ್ಮದ್, ಎಂ.ಇ.ಮುಕ್ತಾರ್ ಅಹ್ಮದ್ ಅವರ ಮೇಲುಸ್ತುವಾರಿಯಲ್ಲಿ ಮನೆಗಳ ದುರಸ್ತಿ ಕಾರ್ಯ ನಡೆಯುತ್ತಿದ್ದು, ತಾಹಾ ಇಂಜಿನಿಯರಿಂಗ್‍ನ ಎಂ.ವೈ.ಅಬ್ದುಲ್ ರಹಿಮಾನ್ ಅಲ್ಲದೇ ಹ್ಯುಮ್ಯಾನಿಟಿ ಫಸ್ಟ್‍ನ ಯಾದಗಿರಿ ಘಟಕದ ಸ್ವಯಂ ಸೇವಕರೂ ಈ ನೆರವು ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

Translate »