ಕಾರ್ಮಿಕರ ಶ್ರಮದಿಂದ ದೇಶದ ಬೆಳವಣಿಗೆ ನ್ಯಾಯಧೀಶ ಬಿ.ಕೆ.ಮನು ಅಭಿಮತ
ಕೊಡಗು

ಕಾರ್ಮಿಕರ ಶ್ರಮದಿಂದ ದೇಶದ ಬೆಳವಣಿಗೆ ನ್ಯಾಯಧೀಶ ಬಿ.ಕೆ.ಮನು ಅಭಿಮತ

June 30, 2018

ವಿರಾಜಪೇಟೆ:  ಯಾವುದೇ ದೇಶ ಬೆಳವಣಿಗೆಯಾಗಲು ಕಾರ್ಮಿಕರ ಶ್ರಮ ಮುಖ್ಯವಾಗಿದ್ದು ಕಾರ್ಮಿಕರು ಸಂಘಟನೆಗಳ ಮುಖಾಂತರ ಸರಕಾರ ದಿಂದ ಸಿಗುವಂತಹ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಅಪರ ಸಿವಿಲ್ ನ್ಯಾಯಾಧೀಶರಾದ ಬಿ.ಕೆ.ಮನು ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವಿರಾಜಪೇಟೆ ವಕೀಲರ ಸಂಘ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾ ಖೆಯ ಸಂಯುಕ್ತ ಆಶ್ರಯದಲ್ಲಿ ವಿರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಕಾರ್ಮಿಕರಿಗೆ ವಿಶೇಷ ಕಾನೂನು ಅರಿವು ಕಾರ್ಯಕ್ರಮ’ವನ್ನು ಉದ್ಘಾಟಿಸಿದ ಅವರು ಮಾತ ನಾಡಿ, ಕಾರ್ಮಿಕರನ್ನು ಯಾರೂ ಕೂಡ ಕೀಳಾಗಿ ಕಾಣಬಾರದು. ಕಾನೂನು ಸೇವೆಗಳ ಸಮಿತಿಯಿಂದ ನೀಡುತ್ತಿರುವ ಉಚಿತ ಕಾನೂನಿನ ಅರಿವನ್ನು ಕಾರ್ಮಿ ಕರು ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎಂ.ಎಂ. ನಂಜಪ್ಪ ಮಾತನಾಡಿ, ಕಾರ್ಮಿಕರಿಲ್ಲದೆ ಬದುಕಿಲ್ಲ. ಅನೇಕ ಕಾರ್ಮಿಕರಿಗೆ ವಿದ್ಯಾಬ್ಯಾಸದ ಕೊರತೆ ಇದ್ದು, ಅವರನ್ನು ದುಡಿಸಿಕೊಳ್ಳುವವರು ಅವರಿಗೆ ಸೌಲತ್ತು ಗಳನ್ನು ಒದಗಿಸಿಕೊಡುವ ಮೂಲಕ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ನೀಡಲು ಸಹಕರಿಸಬೇಕು ಎಂದರು. ಸಂಪನ್ಮೂಲ ವ್ಯಕ್ತಿ ವಕೀಲ ಕೆ.ವಿ.ಸುನಿಲ್ ಅವರು ‘ಕಾರ್ಮಿಕರಿಗೆ ನ್ಯಾಯ’ ಎಂಬ ವಿಷಯದ ಬಗ್ಗೆ ಮಾತನಾಡಿ, ಕಾರ್ಮಿ ಕರಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಕಾರ್ಮಿಕರಿಗೆ ಸರಿಯಾಗಿ ಸೌಲಭ್ಯಗಳು ದೊರಕುತ್ತಿಲ್ಲ. ವಿರಾಜಪೇಟೆ ಮತ್ತು ಮಡಿಕೇರಿಯಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿ ಗಳನ್ನು ಸಂಘಟನೆಯ ಮುಖಾಂತರ ಭೇಟಿ ಮಾಡಿ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತಾಗಬೇಕು ಎಂದರು.

ಕೆದಮುಳ್ಳೂರು ದವಸ ಭಂಡಾರದ ಅಧ್ಯಕ್ಷ ಮಾಳೇಟಿರ ಪ್ರಶಾಂತ್ ಉತ್ತಪ್ಪ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು. ದವಸ ಭಂಡಾರದ ಮಾಜಿ ಅಧ್ಯಕ್ಷ ಎಂ.ಎಂ.ಬೆಲ್ಲು ಬೋಪಯ್ಯ ಮಾತನಾಡಿದರು. ವೇದಿಕೆಯಲ್ಲಿ ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಹಿಣಿ, ಉಪಾಧ್ಯಕ್ಷೆ ಅನಿತಾ ಮುಂತಾದವರು ಉಪಸ್ಥಿತರಿದ್ದರು. ಎಂ.ಎಂ.ನಂಜಪ್ಪ ಸ್ವಾಗತಿಸಿದರೆ ಪ್ರಶಾಂತ್ ಉತ್ತಪ್ಪ ವಂದಿಸಿದರು.

Translate »