ಕುಟ್ಟದಲ್ಲಿ ಸಂಭ್ರಮದ ಕಕ್ಕಡ ನಮ್ಮೆ
ಕೊಡಗು

ಕುಟ್ಟದಲ್ಲಿ ಸಂಭ್ರಮದ ಕಕ್ಕಡ ನಮ್ಮೆ

August 8, 2018

ಮಡಿಕೇರಿ: ಕೊಡಗಿನ ಗಡಿ ಭಾಗ ಕುಟ್ಟದಲ್ಲಿ ಕುಟ್ಟ ಕೊಡವ ಸಮಾಜ ಹಾಗೂ ವಿವಿಧ ಮಹಿಳಾ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ 6ನೇ ವರ್ಷದ “ಕಕ್ಕಡ ನಮ್ಮೆ”ಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಕೊಡವ ಸಮಾಜದಲ್ಲಿ ನಡೆದ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಪ್ರತಿಯೊಂದು ಸಂಸ್ಕøತಿ ಯನ್ನು ಮುಂದಿನ ಪೀಳಿಗೆಗಾಗಿ ಉಳಿಸಿ ಬೆಳೆಸುವ ಅಗತ್ಯವಿದೆ. ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಪ್ರತಿಬಿಂಬಿಸುವ ಮತ್ತು ಪರಿಚಯಿಸುವ ಇಂತಹ ಕಾರ್ಯ ಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು, ಅಲ್ಲದೆ ಮಹಿಳೆಯರು ಒಟ್ಟಾಗಿ ಸೇರಿ ನಡೆಸುವ ಈ ರೀತಿಯ ವಿಶಿಷ್ಟ ಕಾರ್ಯ ಕ್ರಮಗಳಿಗೆ ಪ್ರೋತ್ಸಾಹ ನೀಡುವುದು ಅತಿ ಮುಖ್ಯವೆಂದರು. ಮಹಿಳೆಯರು ನಡೆ ಸುವ ಕಾರ್ಯಕ್ರಮಗಳಿಗೆ ಯಾವುದೇ ಸಂದರ್ಭದಲ್ಲಿ ಅಗತ್ಯ ಸಹಕಾರ ನೀಡು ವುದಾಗಿ ಭರವಸೆ ನೀಡಿದ ವೀಣಾ ಅಚ್ಚಯ್ಯ, “ಕಕ್ಕಡ ನಮ್ಮೆ” ಪ್ರತಿ ವರ್ಷ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಕಳೆದ ಆರು ವರ್ಷ ಗಳಿಂದ “ಕಕ್ಕಡ ನಮ್ಮೆ”ಯನ್ನು ಸಂಭ್ರಮ ದಿಂದ ಆಚರಿಸಲಾಗುತ್ತಿದ್ದು, ದೇಶದ ಮೂಲೆ ಮೂಲೆಗೆ ಕೊಡಗಿನ ಸಂಸ್ಕೃತಿಯ ಪರಿಚಯವಾಗಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು. ಈ ವೈವಿಧ್ಯ ಮಯ ಕಾರ್ಯಕ್ರಮವನ್ನು ಕೊಡವರು ಮಾತ್ರವಲ್ಲದೆ ಎಲ್ಲರೂ ಒಗ್ಗೂಡಿ ಆಚರಿ ಸುತ್ತಿರುವುದು ಇತರರಿಗೆ ಮಾದರಿ ಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಡವ ಸಮಾಜಗಳ ಒಕ್ಕೂಟದ ಪೊಮ್ಮಕ್ಕಡ ಕೂಟದ ಖಜಾಂಚಿ ಕಳ್ಳಿಚಂಡ ಶಾಲಿನಿ ಕಾರ್ಯಪ್ಪ, ಕುಟ್ಟ ಕೊಡವ ಸಮಾ ಜದ ಖಜಾಂಚಿ ಕೊಂಗಂಡ ಸುರೇಶ್, ಪ್ರಮುಖರಾದ ತೀತಿರ ಮಂದಣ್ಣ, ಚೆಕ್ಕೇರ ರಾಬಿನ್, ಮಚ್ಚಮಾಡ ಪ್ರಕಾಶ್, ಮಚ್ಚಮಾಡ ನವ್ಯ, ತೀತಿರ ಕಬೀರ್, ತೀತಿರ ಮೇಘ ತಿಮ್ಮಯ್ಯ, ಕಲ್ಕಂಡ ಅಪ್ಪಣ್ಣ, ಕೋಳೆರ ಲೀಲ, ಚೆಕ್ಕೇರ ದೇಚು, ಮಚ್ಚಮಾಡ ಪದ್ಮ, ಶರೀನ್ ಮತ್ತಿತರ ಪ್ರಮುಖರು ಹಾಜರಿದ್ದು, “ಕಕ್ಕಡ ನಮ್ಮೆ”ಯನ್ನು ಯಶಸ್ವಿಗೊಳಿಸಿದರು.

ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಯಿಂದಲೂ ಆಗಮಿಸಿದ್ದ ಮಹಿಳಾ ಸದಸ್ಯರುಗಳು ಕಕ್ಕ ಡದ ತಿನಿಸು, ಕೊಡಗಿನ ಖಾದ್ಯಗಳು ಸೇರಿದಂತೆ ವೈವಿಧ್ಯಮಯ ತಿಂಡಿ ತಿನಿಸುಗಳನ್ನು ಪ್ರದರ್ಶನಕ್ಕಿಟ್ಟು ಗಮನ ಸೆಳೆದರು. ನೆರೆದಿದ್ದವರು ರುಚಿ ರುಚಿಯಾದ ಖಾದ್ಯಗಳನ್ನು ಸವಿದರು. ಕಳೆದ ಆರು ವರ್ಷಗಳಿಂದ ‘ಕಕ್ಕಡ ನಮ್ಮೆ’ಯನ್ನು ಆಚರಿಸಲಾಗುತ್ತಿದ್ದು, ಆರಂಭದ ಎರಡು ವರ್ಷಗಳ ಕಾಲ ಕೊಡವ ಸಮಾಜದ ಸದಸ್ಯರುಗಳು ಮಾತ್ರ ಭಾಗವಹಿಸುತ್ತಿ ದ್ದರು. ಆದರೆ, ಕಳೆದ ನಾಲ್ಕು ವರ್ಷಗಳಿಂದ ಸುತ್ತಮುತ್ತಲ ಊರಿನ ಎಲ್ಲಾ ಮಹಿಳಾ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಿದ್ದಾರೆ ಎಂದು ಆಯೋಜಕರು ಇದೇ ಸಂದರ್ಭ ಮೆಚ್ಚುಗೆ ವ್ಯಕ್ತಪಡಿಸಿದರು.

Translate »