ಕಾಮಾಕ್ಷಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ
ಮೈಸೂರು

ಕಾಮಾಕ್ಷಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ

June 18, 2019

ಮೈಸೂರು: ಮೈಸೂರಿನ ಜೆ.ಪಿ.ನಗರದಲ್ಲಿ ನಿರ್ಮಿಸಿರುವ ನೂತನ ಕಾಮಾಕ್ಷಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸೋಮ ವಾರ ಲೋಕಾರ್ಪಣೆಗೊಂಡಿತು.

ಮೈಸೂರಿನ ಶ್ರೀದ್ವಯರಾದ ಅವದೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಗೂ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸುಸಜ್ಜಿತ ಆಸ್ಪತ್ರೆಯನ್ನು ಉದ್ಘಾಟಿಸಿ, ಶುಭ ಹಾರೈಸಿದರು.

ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸುತ್ತೂರು ಶ್ರೀಗಳು, ಕಾಮಾಕ್ಷಿ ಆಸ್ಪತ್ರೆ ಶ್ರೀಮಂತರ ಆಸ್ಪತ್ರೆಯಂತೂ ಅಲ್ಲ. ಇದು ಸಾಮಾನ್ಯರ ಆಸ್ಪತ್ರೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಸರಸ್ವತಿ ಪುರಂನಲ್ಲಿ 4 ದಶಕಗಳಿಂದ ಕನಿಷ್ಠ ದರದಲ್ಲಿ ಉತ್ತಮ ವೈದ್ಯಕೀಯ ಸೇವೆ ನೀಡುತ್ತಿರುವ ಆಸ್ಪತ್ರೆಯ 2ನೇ ಘಟಕ ಇಂದು ಉದ್ಘಾಟನೆ ಯಾಗಿದೆ. ಈ ಸುಸಜ್ಜಿತ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹುಣ್ಣಿಮೆಯ ದಿನವಾದ ಇಂದು ಉದ್ಘಾಟನೆಗೊಂಡಿರುವ ಆಸ್ಪತ್ರೆ ಸದಾ ಪ್ರಕಾಶಮಾನವಾಗಿ ಬೆಳಗಲಿ. ಇದರರ್ಥ ರೋಗಿಗಳ ಸಂಖ್ಯೆ ಹೆಚ್ಚಲಿ ಎಂದಲ್ಲ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಔಷಧಿ ನೀಡಿ ಗುಣಪಡಿಸುವುದರ ಜೊತೆಗೆ ರೋಗಗಳನ್ನು ತಡೆಯುವ ಬಗ್ಗೆಯೂ ಸಲಹೆ ನೀಡುವ ಆರೋಗ್ಯ ಕೇಂದ್ರವಾಗಲಿ ಎಂದು ಹಾರೈಸುತ್ತೇನೆ ಎಂದರು.

ಮಾಧವ ಶೆಣೈ ಅವರ ಕುಟುಂಬ ದಾನ-ಧರ್ಮದಿಂದ ಸಾಮಾನ್ಯರಿಗೆ ಹತ್ತಿರವಾಗಿದೆ. ಶ್ರೀಮತಿ ಸುಲೋಚನಾ ಬಾಯಿ ಅವರ ಆಶಯ ದಿಂದ ಸ್ಥಾಪನೆಯಾದ ಕಾಮಾಕ್ಷಿ ಆಸ್ಪತ್ರೆ ಉತ್ತಮ ಸೇವೆ ನೀಡುತ್ತಿದೆ. ಕುಟುಂಬದ ಸದಸ್ಯರು ಸತ್ಕಾರ್ಯವನ್ನು ಮುಂದುವರೆಸಿಕೊಂಡು ಬರುತ್ತಿ ದ್ದಾರೆ. ಆಸ್ಪತ್ರೆ ಬೆಳವಣಿಗೆಯಲ್ಲಿ ಡಾ.ಕಾಮತ್ ಅವರ ಸೇವೆ ಸ್ಮರಣೀಯ ಎಂದು ಶ್ಲಾಘಿಸಿದ ಶ್ರೀಗಳು, ಪ್ರತಿಯೊಬ್ಬರಲ್ಲೂ ಆರೋಗ್ಯದ ಬಗ್ಗೆ ಕಾಳಜಿ ಇರಬೇಕು. ಶ್ರೀಮಂತರಾದಿಯಾಗಿ ಎಲ್ಲರೂ ಬೀದಿ ಬದಿ ಮಾರಾಟ ಮಾಡುವ ಆಹಾರ ಪದಾರ್ಥ ಸೇವಿಸಲು ಇಚ್ಛಿಸುತ್ತಾರೆ. ಹಿಂದೆ ನೀಡುತ್ತಿದ್ದ ಔಷಧಿ ಕಹಿಯಾಗಿರುತ್ತಿತ್ತು. ಆದರೆ ಕಾಯಿಲೆ ಗುಣವಾಗುತ್ತಿತ್ತು. ಹಾಗಾಗಿ `ಬಾಯಿಗೆ ಕಹಿಯಾ ದರೆ ಉದರಕ್ಕೆ ಸಿಹಿ’ ಎಂಬ ನಾಣ್ಣುಡಿ ಬಳಸುತ್ತಿದ್ದರು. ಆದರೆ ಈಗ ಎಲ್ಲರಿಗೂ ಬಾಯಿ ರುಚಿಯೇ ಮುಖ್ಯವಾಗಿದೆ. ಹೀಗಾದರೆ ಆಸ್ಪತ್ರೆಗೆ ಹೋಗಲೇ ಬೇಕಾಗುತ್ತದೆ. ಆರೋಗ್ಯ ಚೆನ್ನಾಗಿದ್ದರೆ ಉತ್ಸಾಹದಿಂದ ಏನನ್ನಾದರೂ ಸಾಧಿಸಬಹುದು. ಹಾಗಾಗಿ ಆರೋಗ್ಯದ ಬಗ್ಗೆ ಎಲ್ಲರೂ ಎಚ್ಚರವಹಿಸಬೇಕು. ಶುದ್ಧವಾದ ಗಾಳಿ, ನೀರು, ಆಹಾರ ಸೇವಿಸಿದರೆ ಕಾಯಿಲೆಗಳನ್ನು ಆದಷ್ಟು ತಡೆಗಟ್ಟಬಹುದು ಎಂದು ಸಲಹೆ ನೀಡಿದರು.

ಗಣಪತಿ ಸಚ್ಚಿದಾನಂದ ಶ್ರೀಗಳು ಮಾತನಾಡಿ, ವೈದ್ಯ ಪುನರ್ಜನ್ಮ ನೀಡುವ ಉಪಬ್ರಹ್ಮ. ಪುನರ್ ಸೃಷ್ಟಿಸುವ ಶಕ್ತಿ ವೈದ್ಯನಿಗಿದೆ. ಹಾಗಾಗಿ ಎಷ್ಟೋ ಮಠ ಮಾನ್ಯಗಳು, ಸಂಸ್ಥೆಗಳು ವೈದ್ಯ ಸೇವೆ ನೀಡುತ್ತಿವೆ. ಹಾಗೆಯೇ ಕಾಮಾಕ್ಷಿ ಆಸ್ಪತ್ರೆ ಉತ್ತಮ ಸೇವೆಯ ಮೂಲಕ ಪ್ರಸಿದ್ಧಿಯಾಗಿದೆ. ಇದೀಗ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸಿದ್ದು, ಇದೇ ರೀತಿಯಲ್ಲಿ ಸೇವೆ ಮುಂದುವರೆಸಲಿ ಎಂದು ಹಾರೈಸಿದರು.

ಮಾಜಿ ವೈದ್ಯಕೀಯ ಶಿಕ್ಷಣ ಸಚಿವ, ಹಾಲಿ ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ನಿಜವಾಗಿ ಸೇವೆ ನೀಡುವ ಆಸ್ಪತ್ರೆಗಳ ಮಧ್ಯೆ ಹಣ ಸುಲಿಗೆ ಮಾಡುವುದನ್ನೇ ಮುಖ್ಯವನ್ನಾಗಿ ಸಿಕೊಂಡಿರುವ ಬ್ಲೇಡ್ ಆಸ್ಪತ್ರೆಗಳೂ ಇವೆ. ಆದರೆ ಇಲ್ಲಿಯವರೆಗೂ ಕಾಮಾಕ್ಷಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದುಬಾರಿ ಎಂದು ಯಾರೊಬ್ಬರೂ ಹೇಳಿಲ್ಲ. ಇಲ್ಲಿಗೆ ಬರುವ ಅತ್ಯಂತ ಬಡ ರೋಗಿಗಳಿಗೂ ವೈದ್ಯಕೀಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಬಿಎಸ್‍ಎಂಎಸ್ ಟ್ರಸ್ಟ್ ಬದ್ಧವಾಗಿದೆ. ವೈದ್ಯಕೀಯ ಸೇವೆ ವ್ಯಾಪಾರೀ ಕರಣವಾಗಿರುವ ಸಂದರ್ಭದಲ್ಲಿ ನಿಜವಾದ ಸೇವೆ ನೀಡಲಾಗುತ್ತಿದೆ. ಡಾ.ಕಾಮತ್ ಅವರಂತಹ ಸಾವಿರಾರು ನಿಸ್ವಾರ್ಥ ವೈದ್ಯರು ನಮ್ಮೊಡನೆ ಇಲ್ಲವೇಕೆ ಎಂಬ ಪ್ರಶ್ನೆ ಕಾಡುತ್ತಿರುತ್ತದೆ. ಶಾಲೆ ಹಾಗೂ ವೃದ್ಧಾಶ್ರಮವನ್ನೂ ನಿರ್ಮಿಸುವ ಉದ್ದೇಶ ಹೊಂದಿರುವ ಟ್ರಸ್ಟ್‍ಗೆ ನಮ್ಮ ಸಹಕಾರ ನಿಶ್ಚಿತವಾಗಿ ಇರಲಿದೆ. ಆಸ್ಪತ್ರೆ ಮುಂಭಾಗ ಸಮಾಜಕ್ಕೆ ಅವಿಸ್ಮರಣೀಯ ಕೊಡಗೆ ನೀಡಿರುವ ಗೋವಿಂದ ರಾವ್ ಅವರ ಹೆಸರಿನಲ್ಲೇ ಸುಮಾರು 1.50 ಕೋಟಿ ವೆಚ್ಚದಲ್ಲಿ ದ್ವಿಪಥ ರಸ್ತೆ ನಿರ್ಮಿಸಲಾ ಗುವುದು. ಇನ್ನೊಂದು ವಾರದಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.

ಮಾಜಿ ಶಾಸಕ ವಾಸು ಮಾತನಾಡಿ, ಮಹಾ ರಾಜರ ಕಾಲದಲ್ಲಿ ಆಧ್ಯಾತ್ಮಿಕ, ಶಿಕ್ಷಣ, ಆರೋಗ್ಯ, ಅನ್ನ ದಾಸೋಹ ನಿರಂತರ ಸೇವೆಯಾಗಿತ್ತು. ಗುಣಾಂಬ ಟ್ರಸ್ಟ್‍ನಿಂದ ಮಕ್ಕಳಿಗೆ ಹಾಲು-ಬ್ರೆಡ್ ನೀಡಲಾಗುತ್ತಿತ್ತು. ನಂತರದಲ್ಲಿ ಮಠಮಾನ್ಯಗಳು ಸೇವೆಯನ್ನು ಮುಂದುವರೆಸಿಕೊಂಡು ಬಂದಿವೆ. ಆಸ್ಪತ್ರೆ ಆಡಳಿತ ಮಂಡಳಿಯ ಎಲ್ಲಾ ಧರ್ಮ ದರ್ಶಿಗಳೂ ಉದ್ಯಮದಲ್ಲಿದ್ದಾರೆ. ತಮ್ಮ ಆದಾಯ ದಲ್ಲಿ ಒಂದು ಭಾಗವನ್ನು ಸಾಮಾಜಿಕ ಸೇವೆಗೆ ವಿನಿಯೋಗಿಸುತ್ತಿದ್ದಾರೆ. ನಷ್ಟವೂ ಇಲ್ಲ, ಆದಾ ಯವು ಇಲ್ಲ ಎಂಬಂತೆ ಆಸ್ಪತ್ರೆಯನ್ನು ಮುನ್ನಡೆ ಸಿದ್ದಾರೆ. ಇಂದಿಗೂ ಮೌಲ್ಯಗಳು ಉಳಿದಿವೆ ಎಂಬುದಕ್ಕೆ ಶೆಣೈ ಕುಟುಂಬದ ಸೇವೆಯೇ ಸಾಕ್ಷಿ. ಮೈಸೂರಿನ ಜನತೆಯ ಪರವಾಗಿ ನಾನು ಅಭಿನಂದನೆ ತಿಳಿಸುತ್ತೇನೆ ಎಂದರು.

ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ, ಕಾಮಾಕ್ಷಿ ಆಸ್ಪತ್ರೆಯ ಮ್ಯಾನೇಜಿಂಗ್ ಟ್ರಸ್ಟಿ ಎಂ.ಮಹೇಶ್ ಶೆಣೈ, ಆಡಳಿತಾಧಿಕಾರಿ ಡಾ.ಕೆ.ಆರ್.ಕಾಮತ್ ವೇದಿಕೆಯಲ್ಲಿದ್ದರು. ಜಾಯಿಂಟ್ ಮ್ಯಾನೇಜಿಂಗ್ ಟ್ರಸ್ಟಿ ಅಶೋಕ್ ಶೆಣೈ, ಎಂ.ಪಿ.ಶಂಕರ್ ನಾರಾಯಣ್ ಶೆಣೈ, ಎಂ.ವಿಶ್ವನಾಥ್‍ರಾವ್, ಎಂ.ಜಗನ್ನಾಥ್ ಶೆಣೈ, ಎಂ.ಗೋಪಿನಾಥ್ ಶೆಣೈ, ಎಂ.ಮನೋಜ್ ಶೆಣೈ ಸೇರಿದಂತೆ ಟ್ರಸ್ಟಿಗಳು, ಮೆಡಿಕಲ್ ಆಫೀಸರ್ ಡಾ. ಉಮೇಶ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

ಕಾಮಾಕ್ಷಿ ಆಸ್ಪತ್ರೆ ಸೇವೆ ಶ್ಲಾಘಿಸಿದ ಸಿ.ಟಿ.ರವಿ
ಮೈಸೂರು,ಜೂ.17-`ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ…’ ಪುರಂ ದರ ದಾಸರ ಕೀರ್ತನೆಯ ಸಾಲನ್ನು ಉಲ್ಲೇಖಿಸಿ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ, ಮೈಸೂರಿನ ಕಾಮಾಕ್ಷಿ ಆಸ್ಪತ್ರೆ ಸೇವೆಯನ್ನು ಬಣ್ಣಿಸಿದರು.

ಮೈಸೂರಿನ ಜೆ.ಪಿ.ನಗರದಲ್ಲಿ ನಿರ್ಮಿಸಿರುವ ಕಾಮಾಕ್ಷಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆರೆಯ ನೀರನ್ನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ ಎಂಬಂತೆ ಉದ್ಯಮದ ಆದಾಯವನ್ನು ಸಾಮಾಜಿಕ ಸೇವೆಗೆ ವಿನಿಯೋಗಿ ಸುತ್ತಿರುವುದು ಶ್ಲಾಘನಾರ್ಹ. ಶೆಣೈ ಅವರ ಕುಟುಂಬ ಸಂಕಷ್ಟದಲ್ಲಿದ್ದ ಜನಸಂಘದ ಅದೆಷ್ಟೋ ಅಭ್ಯರ್ಥಿಗಳಿಗೆ ಠೇವಣಿ ಕಟ್ಟಿದೆ. ಪಕ್ಷಕ್ಕೆ ಅಂಬಾಸಿ ಡರ್ ಕಾರನ್ನು ಮೊದಲ ಕೊಡುಗೆಯಾಗಿ ನೀಡಿದ್ದು ಇದೇ ಮನೆತನ. ಧರ್ಮದ ಆಧಾರ ದಲ್ಲಿ ಮತ್ತಷ್ಟು ಸೇವೆ ಮಾಡುವ ಶಕ್ತಿಯನ್ನು ತಾಯಿ ಚಾಮುಂಡಿ ಕರುಣಿಸಲಿ ಎಂದರು.

ಮೆಕಾಲೆ ಪ್ರೇರಿತ ಶಿಕ್ಷಣ ಜಾರಿಗೆ ಮುನ್ನ ಶಿಕ್ಷಣ ವ್ಯಾಪಾರೀಕರಣವಾಗಿರಲಿಲ್ಲ. ಮಹಾ ರಾಜರು, ಮಠಮಾನ್ಯರು, ಶ್ರೀಮಂತರು ಅನ್ನ ದಾನ ಮಾಡುತ್ತಿದ್ದರು. ಪಂಡಿತರು ಉಚಿತವಾಗಿ ಔಷಧಿ ನೀಡುತ್ತಿದ್ದರು. ಅನ್ನ, ಅಕ್ಷರ ಹಾಗೂ ಔಷಧಿ ಮಾರಾಟದ ವಸ್ತುವಾಗಿರಲಿಲ್ಲ. ಇವು ಗಳಿಗೆ ಬೆಲೆ ಕಟ್ಟುವುದು ಅಪರಾಧ ಎಂಬ ಭಾವನೆಯಿತ್ತು. ಹಳ್ಳಿಗಳಲ್ಲಿ ಊಟ ಆಯ್ತಾ ಎಂದು ಕೇಳುವುದು ಅಪಚಾರವಾಗಿತ್ತು. ಬನ್ನಿ ಊಟ ಮಾಡಿ ಎಂಬುದು ಸಂಸ್ಕøತಿಯಾಗಿತ್ತು. ಕೃಷ್ಣ-ಸುದಾಮ, ದ್ರುಪದ-ದ್ರೋಣ ಒಂದೇ ಶಾಲೆಯಲ್ಲಿ ಕಲಿತಿದ್ದರು. ಬಡವ-ಬಲ್ಲಿದ ಭೇದವಿಲ್ಲದೆ ಎಲ್ಲರಿಗೂ ಸಮಾನ ರೀತಿಯ ಶಿಕ್ಷಣ ನೀಡಲಾಗುತ್ತಿತ್ತು. ಆದರೆ ಈಗ ಶಿಕ್ಷಣ ಬಹುದೊಡ್ಡ ಉದ್ಯಮವಾಗಿದೆ. ಗ್ಲೋಬಲ್ ಪಾಲಿಸಿ ಡೆಕ್ಟೇಟ್ ಮಾಡುವಷ್ಟರ ಮಟ್ಟಿಗೆ ಮೆಡಿಸನ್ ಲಾಬಿ ಗಟ್ಟಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಆದರೆ ಈಗಲೂ ಮೌಲ್ಯಗಳು ಉಳಿದಿವೆ. ಯಾವುದೇ ಲಾಭದ ಅಪೇಕ್ಷೆಯಿಲ್ಲದೆ ಕನಿಷ್ಠ ಶುಲ್ಕದಲ್ಲಿ ಮಾನವೀಯತೆ ಸ್ಪರ್ಶದೊಂದಿಗೆ ವೈದ್ಯ ಕೀಯ ಸೇವೆ ನೀಡುತ್ತಿರುವ ಕಾಮಾಕ್ಷಿ ಆಸ್ಪತ್ರೆ ನಮ್ಮ ಮುಂದಿದೆ.

ಆಸ್ಪತ್ರೆ ಕಟ್ಟುವುದು ಸುಲಭ. ಆದರೆ ಧರ್ಮದ ಆಧಾರದಲ್ಲಿ ಆಸ್ಪತ್ರೆ ಮುನ್ನಡೆ ಸುವುದು ತುಂಬಾ ಕಷ್ಟ. ಕಾಮಾಕ್ಷಿ ಆಸ್ಪತ್ರೆ ಸಾಧಿಸಿ ತೋರಿಸಿದೆ ಎಂದು ಬಣ್ಣಿಸಿದರು.

ವೈದ್ಯರ ರಕ್ಷಣೆಗೆ ಶ್ರೀಗಳ ಕರೆ
ಮೈಸೂರು: ವೈದ್ಯರ ಮೇಲಿನ ಹಲ್ಲೆ ಖಂಡಿಸಿ ದೇಶಾದ್ಯಂತ ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್ ಮಾಡಿ ಮುಷ್ಕರ ನಡೆಸಿದ ದಿನದಂದು ಮೈಸೂರಿನ ಶ್ರೀದ್ವಯರು ವೈದ್ಯರಿಗೆ ರಕ್ಷಣೆ ಬೇಕೆಂದು ಪ್ರತಿಪಾದಿಸಿದ್ದಾರೆ.

ಕಾಮಾಕ್ಷಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸುತ್ತೂರು ಶ್ರೀಗಳು, ಆಸ್ಪತ್ರೆಗೆ ಬರುವವರು ಆರೋಗ್ಯವಾಗಿ ವಾಪಸ್ಸಾಗಬೇಕೆಂಬುದು ಎಲ್ಲರ ಆಶಯವಾಗಿರುತ್ತದೆ. ಹಾಗೆಯೇ ವೈದ್ಯರು ರೋಗಿಯ ಜೀವ ಉಳಿಸಲು ಸರ್ವ ಪ್ರಯತ್ನ ಮಾಡುತ್ತಾರೆ. ಆದರೂ ರೋಗಿ ಬದುಕುಳಿಯಲಿಲ್ಲ ಎಂದರೆ ವೈದ್ಯರ ಮೇಲೆ ಪ್ರಹಾರ ನಡೆಸುತ್ತಾರೆ. ಇದೀಗ ಆಸ್ಪತ್ರೆ ಮುಚ್ಚುವ ಸ್ಥಿತಿ ತಲುಪಿದೆ. ವೈದ್ಯರ ಪ್ರಯತ್ನಕ್ಕೂ ಮೀರಿದ ಫಲಿತಾಂಶ ನೀಡುವುದು ದೇವರು. ಹಾಗಾಗಿಯೇ ವೈದ್ಯರೂ ದೇವರ ಮೇಲೆ ಭಾರಹಾಕಿ ಪ್ರಯತ್ನ ಮುಂದುವರೆಸುತ್ತಾರೆ. ಆದರೆ ಎಲ್ಲಾ ಕಾಯಿಲೆಗಳನ್ನೂ ಗುಣಪಡಿಸುವ ಚಿಕಿತ್ಸೆ ವೈದ್ಯಕೀಯ ಕ್ಷೇತ್ರದಲ್ಲಿ ಆವಿಷ್ಕರಿಸಲಾಗಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ವಾಸ್ತವತೆಯನ್ನು ಅರಿತು ಸಂಯಮದಿಂದ ವರ್ತಿಸಬೇಕೆಂದು ಕಿವಿ ಮಾತು ಹೇಳಿದರು.

ಗಣಪತಿ ಸಚ್ಚಿದಾನಂದ ಶ್ರೀಗಳು ಮಾತನಾಡಿ, ವೈದ್ಯ ಸೇವೆಗೆ ಹೋಗಲು ಹೆದರುವ ದುಸ್ಥಿತಿ ನಿರ್ಮಾಣವಾಗಿದೆ. ವೈದ್ಯರು ತಮ್ಮ ಪ್ರಯತ್ನ ಮಾಡು ತ್ತಾರೆ. ಅದನ್ನೂ ಮೀರಿ ವ್ಯತ್ಯಾಸವಾದರೆ ಏನೂ ಮಾಡಲಾಗದು. ಅನಾರೋಗ್ಯ ಗಂಭೀರ ಸ್ಥಿತಿ ತಲುಪಿದಾಗ ಆಸ್ಪತ್ರೆಗೆ ಕರೆದೊಯ್ದು ಎಷ್ಟು ಹಣವಾದರೂ ನೀಡುತ್ತೇವೆ, ಬದುಕಿಸಿಕೊಡಿ ಎನ್ನುತ್ತಾರೆ. ಜೀವ ಉಳಿಯದಿದ್ದರೆ ವೈದ್ಯರ ವಿರುದ್ಧ ತಿರುಗಿ ಬೀಳುತ್ತಾರೆ. ಇದನ್ನು ತಡೆಯಲು ಸರ್ಕಾರ ಪರಿಣಾಮ ಕಾರಿ ಕಾಯ್ದೆ ಜಾರಿಗೊಳಿಸಬೇಕು. ಈ ನಿಟ್ಟಿನಲ್ಲಿ ದೆಹಲಿಗೆ ಹೋಗಿ ಸರ್ಕಾರವನ್ನು ಆಗ್ರಹಿಸಲಿದ್ದೇವೆ. ವೈದ್ಯರಿಗೆ ರಕ್ಷಣೆ ಬೇಕು. ಇಲ್ಲವಾದರೆ ಸೇವೆ ಮಾಡಲು ಯಾರೂ ಮುಂದೆ ಬರುವುದಿಲ್ಲ. ಈ ಬಗ್ಗೆ ವೇದಿಕೆಯಲ್ಲಿ ರುವ ರಾಜಕಾರಣಿಗಳು, ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ತಿಳಿಸಿದರು.