ಕನ್ನಡ ಶಾಸ್ತ್ರೀಯ ಚಟುವಟಿಕೆ  ಇಡೀ ರಾಜ್ಯಕ್ಕೆ ವಿಸ್ತಾರವಾಗಬೇಕು
ಮೈಸೂರು

ಕನ್ನಡ ಶಾಸ್ತ್ರೀಯ ಚಟುವಟಿಕೆ  ಇಡೀ ರಾಜ್ಯಕ್ಕೆ ವಿಸ್ತಾರವಾಗಬೇಕು

September 7, 2018

ಮೈಸೂರು:  ಮೈಸೂರಿಗೆ ಮಾತ್ರ ಸೀಮಿತ ವಾದ ಕನ್ನಡ ಶಾಸ್ತ್ರೀಯ ಸ್ಥಾನಮಾನ, ಚಟುವಟಿಕೆ ಇಡೀ ರಾಜ್ಯಕ್ಕೆ ವಿಸ್ತರಿಸಬೇಕು ಎಂದು ಉದಯಭಾನು ಉನ್ನತ ಅಧ್ಯಯನ ಕೇಂದ್ರದ ಗೌರವ ಡೀನ್ ಡಾ. ನಾ.ಗೀತಾಚಾರ್ಯ ಅಭಿಪ್ರಾಯಪಟ್ಟರು.

ಮೈಸೂರು ಮಹಾರಾಜ ಕಾಲೇಜು ಜೂನಿಯರ್ ಬಿಎ ಹಾಲ್‍ನಲ್ಲಿ ಮಹಾರಾಜ ಕಾಲೇಜು ಕನ್ನಡ ಸಂಘ, ಉದಯಭಾನು ಕಲಾಸಂಘ, ಉದಯಭಾನು ಭಾಷೆ-ಸಾಹಿತ್ಯ-ಸಂಸ್ಕøತಿ ಅಧ್ಯಯನಾಂಗ ಸಂಯುಕ್ತವಾಗಿ ಗುರುವಾರ ಆಯೋಜಿಸಿದ್ದ `ಹಳಗನ್ನಡ ಗದ್ಯ ಸಾಹಿತ್ಯದ ಅವಲೋಕನ’ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿದ್ದರೂ, ಕೇಂದ್ರ ಸರ್ಕಾರ ಶಾಸ್ತ್ರೀಯ ಸ್ಥಾನಮಾನ ಪಡೆದ ಭಾಷೆಗಳಿಗೆ ಪ್ರತಿ ಬಜೆಟ್‍ನಲ್ಲಿ ನೀಡುತ್ತಿರುವ ಅನುದಾನವನ್ನು ಕನ್ನಡಿಗರು ಪಡೆದುಕೊಳ್ಳುವುದರಲ್ಲಿ ಹಾಗೂ ಅದನ್ನು ಬಳಸಿಕೊಳ್ಳುವಲ್ಲಿ ಹಿಂದುಳಿದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಹಲವು ಭಾಷಾ ವಿಜ್ಞಾನಿಗಳ ಪ್ರಕಾರ ಬಳಕೆಯಲ್ಲಿ ಇರದ ‘ಸಂಸ್ಕøತ’, ‘ಪಾಳಿ’ಯಂತಹ ಭಾಷೆಗಳು ಮಾತ್ರ ಶಾಸ್ತ್ರೀಯ ಭಾಷೆಗಳು. ಆದರೆ ತಮಿಳಿಗರು, 2 ಸಾವಿರ ವರ್ಷಗಳ ಇತಿಹಾಸ ಇರುವ ಭಾಷೆ, ಅದು ಜೀವಂತ ಇದ್ದರೂ ಶಾಸ್ತ್ರೀಯವಾದದ್ದೇ ಎಂದು ಒತ್ತಡ ತಂದು, ತಮಿಳಿಗೆ ಈ ಸ್ಥಾನಮಾನ ಪಡೆದರು ಎಂದರು.

ಅದೇ ಹಾದಿಯಲ್ಲಿ ತೆಲುಗು, ಕನ್ನಡ, ಮಲೆಯಾಳಂ ಭಾಷಿಗರು ಹೋರಾಡಿ ಈ ಸ್ಥಾನಮಾನ ಗಿಟ್ಟಿಸಿದರು. ಕನ್ನಡ ಸಾಹಿತ್ಯ ಪಂಪನಿಂದ ಹಿಡಿದು, ಮುದ್ದಣ, ಕುವೆಂಪು ವರೆಗೆ ಸಮೃದ್ಧವಾಗಿ ಬೆಳೆದಿದೆ. ಕನ್ನಡಿಗರ ಅಸ್ತಿತ್ವ ದೂರದ ನೇಪಾಳದಲ್ಲೂ ಕಾಣ ಬಹುದು. ಅಲ್ಲಿನ ದೇವಾಲಯವೊಂದರ ಅರ್ಚಕರು ಕನ್ನಡಿಗರಾಗಿದ್ದಾರೆ. ಕನ್ನಡಿ ಗರು ಪ್ರಾಚೀನ ಕಾಲದಿಂದಲೂ ಎಲ್ಲೆಡೆ ಚದುರಿದ್ದಾರೆ ಎಂದು ವಿವರಿಸಿದರು.

ಹಳಗನ್ನಡ ಸಾಹಿತ್ಯ ಓದುವವರೇ ಕಡಿಮೆ, ಹಳಗನ್ನಡ ಬೋಧಿಸಲು ಅನೇಕ ಪ್ರಾಧ್ಯಾಪಕರು ಹೆದರುತ್ತಾರೆ. ಅದು ಅರ್ಥವಾಗದು ಎನ್ನುತ್ತಾರೆ. ಆದರೆ ಇದು ಕಬ್ಬಿಣದ ಕಡಲೆ ಅಲ್ಲ. ಹಳಗನ್ನಡ ಸಾಹಿತ್ಯ ಕುರಿತ ಪುನರ್ ಅಧ್ಯಯನ ಇದೇ ಮಹಾರಾಜ ಕಾಲೇಜಿನಲ್ಲಿ ಆರಂಭವಾಯಿತು ಎಂದು ಶ್ಲಾಘಿಸಿದರು.

‘ಪಂಚತಂತ್ರದ ಕಥಾತಂತ್ರ’ ಕುರಿತು ಡಾ.ಸಿ.ಬಿ.ನಾಗೇಂದ್ರ ಕುಮಾರ್ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿ.ಪಿ.ಸುನೀತಾ, ಆಡಳಿತಾಧಿಕಾರಿ ಅನಿತಾ ವಿಮಲಾ ಬ್ರಗ್ಸ್, ಉದಯಭಾನು ಕಲಾಸಂಘ ಸಂಸ್ಥಾಪಕ ಕಾರ್ಯದರ್ಶಿ ಎಂ. ನರಸಿಂಹ, ಕನ್ನಡ ವಿಭಾಗ ಮುಖ್ಯಸ್ಥ ಡಾ.ವಿಶ್ವನಾಥ, ಕನ್ನಡ ಸಂಘ ಸಂಚಾಲಕಿ ಡಾ.ಡಿ.ವಿಜಯಲಕ್ಷ್ಮಿ, ಡಾ.ಎಸ್.ಎಚ್. ಭುವನೇಶ್ವರ್, ವಿಚಾರ ಸಂಕಿರಣ ಸಂಯೋಜಕ ಡಾ.ಟಿ.ಕೆ. ಕೆಂಪೇಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Translate »