ಭಾರತೀಯ ವಾಯುಪಡೆ ಫ್ಲೈಯಿಂಗ್ ವಿಭಾಗಕ್ಕೆ ಆಯ್ಕೆಯಾದ ಕೊಡಗಿನ ಕುವರಿ ಪುಣ್ಯ ನಂಜಪ್ಪ
ಮೈಸೂರು

ಭಾರತೀಯ ವಾಯುಪಡೆ ಫ್ಲೈಯಿಂಗ್ ವಿಭಾಗಕ್ಕೆ ಆಯ್ಕೆಯಾದ ಕೊಡಗಿನ ಕುವರಿ ಪುಣ್ಯ ನಂಜಪ್ಪ

June 25, 2019

ಮೈಸೂರು, ಜೂ.24(ಎಸ್‍ಬಿಡಿ)- ಕೊಡಗು ಮೂಲದ ಮೈಸೂರಿನ ಯುವತಿ ಭಾರತೀಯ ವಾಯು ಪಡೆಗೆ ಸೇರುವ ಮೂಲಕ ಬಾಲ್ಯದ ಕನಸನ್ನು ಸಾಕಾರ ಗೊಳಿಸಿದ್ದಾರೆ. ಮೈಸೂರಿನ ವಿಜಯನಗರ ನಿವಾಸಿ ಕೊಳುವಂಡ ಪುಣ್ಯ ನಂಜಪ್ಪ ಭಾರತೀಯ ವಾಯು ಪಡೆಯ ಫ್ಲೈಯಿಂಗ್ ಬ್ರಾಂಚ್‍ಗೆ ಆಯ್ಕೆಯಾಗಿದ್ದು, ಬಾಲ್ಯದ ಕನಸಿನಂತೆ ಪೈಲಟ್ ಆಗುವ ಹಾದಿಯಲ್ಲಿ ದ್ದಾರೆ. ಹೈದರಾಬಾದ್‍ನ ದುಂಡಿಗಲ್‍ನಲ್ಲಿರುವ ಏರ್ ಫೋರ್ಸ್ ಅಕಾಡೆಮಿಯಲ್ಲಿ ಜುಲೈ 8ರಿಂದ ಅವರು ಟ್ರೈನಿ ಪೈಲಟ್ ಆಗಿ ಸೇವೆ ಆರಂಭಿಸಲಿದ್ದಾರೆ. ಪ್ರಸಕ್ತ ಕೋರ್ಸ್‍ಗೆ ಆಯ್ಕೆಯಾಗಿರುವವರಲ್ಲಿ ಫ್ಲೈಯಿಂಗ್ ಬ್ರಾಂಚ್‍ನಲ್ಲಿರುವ ಏಕೈಕ ಕನ್ನಡತಿ ಪುಣ್ಯ ನಂಜಪ್ಪ ಎಂಬುದು ಹೆಮ್ಮೆಯ ಸಂಗತಿ.

ಕೊಡಗಿನ ವಿರಾಜಪೇಟೆ ತಾಲೂಕು, ಚೆಂಬೆ ಬೆಳ್ಳೂರು ಮೂಲದ ಕೊಳುವಂಡ ಪಿ.ನಂಜಪ್ಪ ಹಾಗೂ ಅನುರಾಧ ನಂಜಪ್ಪ ದಂಪತಿ ಪುತ್ರಿ ಪುಣ್ಯ ನಂಜಪ್ಪ, ಹುಟ್ಟಿ ಬೆಳೆದದ್ದು ಮೈಸೂರಿನಲ್ಲಿ. ತಾಯಿ ಅನುರಾಧ ವಿಜಯನಗರದಲ್ಲಿರುವ ಸೆಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್‍ನಲ್ಲಿ ಶಿಕ್ಷಕಿಯಾಗಿದ್ದಾರೆ. ವರ್ಷದ ಹಿಂದೆ ನಿಧನರಾದ ತಂದೆ ನಂಜಪ್ಪ ಪ್ರಭಾ ಚಿತ್ರಮಂದಿರದ ಮ್ಯಾನೇಜರ್ ಆಗಿದ್ದರು. ವಿಜಯನಗರದ ಸೆಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್‍ನಲ್ಲಿ ಹೈಸ್ಕೂಲ್‍ವರೆಗೆ ವಿದ್ಯಾಭ್ಯಾಸ ಮಾಡಿದ ಪುಣ್ಯ ನಂಜಪ್ಪ, ಸರಸ್ವತಿ ಪುರಂ ವಿಜಯ ವಿಠಲ ಶಾಲೆಯಲ್ಲಿ ಪಿಯುಸಿ, ಎನ್‍ಐಇ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

ಪದವಿ ಮುಗಿಯುತ್ತಿದ್ದಂತೆ 2018ರ ಆಗಸ್ಟ್ 18 ರಂದು ನಡೆಸಲಾಗಿದ್ದ ಭಾರತೀಯ ವಾಯುಪಡೆ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದಿದ್ದರು. ಫ್ಲೈಯಿಂಗ್ ಬ್ರಾಂಚ್, ಗ್ರೌಂಡ್ ಡ್ಯೂಟಿ ಟೆಕ್ನಿಕಲ್, ನಾನ್ ಟೆಕ್ನಿಕಲ್, ಲಾಜಿಸ್ಟಿಕ್ಸ್, ಅಕೌಂಟ್ಸ್, ಎಜುಕೇಷನ್, ಮಿಟಿಯೋ ರಾಲಜಿ ವಿಭಾಗಗಳ ಒಟ್ಟು 114 ಹುದ್ದೆಗಳ ನೇಮಕಾತಿಗೆ ನಡೆಸಲಾಗಿದ್ದ ಪರೀಕ್ಷೆಯಲ್ಲಿ ಪುಣ್ಯ ನಂಜಪ್ಪ ಫ್ಲೈಯಿಂಗ್ ಬ್ರಾಂಚ್‍ಗೆ ಆಯ್ಕೆಯಾಗಿದ್ದಾರೆ. ಪ್ರವೇಶ ಪರೀಕ್ಷೆ ನಂತರ 5 ದಿನದ ಸಂದರ್ಶನ ಹಾಗೂ ವೈದ್ಯಕೀಯ ಪರೀಕ್ಷೆ ಇನ್ನಿತರ ಪ್ರಕ್ರಿಯೆ ಬಳಿಕ ಅಂತಿಮ ಪಟ್ಟಿಯನ್ನು ಪ್ರಸ್ತುತ ಜೂ.11ರಂದು ಪ್ರಕಟಿಸಲಾಗಿತ್ತು. ಹೈದರಾಬಾದ್‍ನ ದುಂಡಿಗಲ್ ಏರ್‍ಫೋರ್ಸ್ ಅಕಾಡೆಮಿಯಲ್ಲಿ ಜುಲೈ 8ರಿಂದ ತರಬೇತಿ ಕೋರ್ಸ್ ಆರಂಭವಾಗಲಿದ್ದು, ನಿಗದಿತ ಅವಧಿ ತರಬೇತಿ ಬಳಿಕ ಪೂಜಾ ಭಾರತೀಯ ವಾಯು ಪಡೆ ಪೈಲಟ್ ಆಗಿ ಕರ್ತವ್ಯ ನಿರ್ವಹಿಸಬಹುದಾಗಿದೆ.

Translate »