ಮಡಿಕೇರಿ: ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತವಾಗಿ ನೆಲಕಚ್ಚಿದ್ದ ಕೊಡಗು ಜಿಲ್ಲೆಯ ಪ್ರವಾಸೋದ್ಯಮದ ಚೇತರಿಕೆಗಾಗಿ ಹಮ್ಮಿಕೊಂಡಿದ್ದ ಕೊಡಗು ಪ್ರವಾಸಿ ಉತ್ಸವ ಮತ್ತು ಫಲಪುಷ್ಪ ಪ್ರದರ್ಶನ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. 3 ದಿನಗಳ ಕಾಲ ಮಡಿಕೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರವಾಸಿ ಉತ್ಸವಕ್ಕೆ ಸುಮಾರು 70 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದಾರೆಂದು ತೋಟಗಾರಿಕಾ ಇಲಾಖೆ ಮೂಲಗಳು ತಿಳಿಸಿವೆ.
ಪ್ರವಾಸಿ ಉತ್ಸವದ ಪ್ರಯುಕ್ತ ರಾಜಾಸೀಟಿನಲ್ಲಿ ನಡೆದ ಫಲಪುಷ್ಪ ಪ್ರದರ್ಶನಕ್ಕೆ 43 ಸಾವಿರ ಮಂದಿ ಸಂದರ್ಶಕರು ಆಗಮಿಸಿದ್ದಾರೆಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಜಾ ಸೀಟಿನಲ್ಲಿ 33 ಸಾವಿರ ಟಿಕೆಟ್ ವಿತರಣೆಯಾಗಿದ್ದು, ಶಾಲಾ ವಿದ್ಯಾರ್ಥಿಗಳು ಮತ್ತು 10 ವರ್ಷದೊಳಗಿನ ಮಕ್ಕಳಿಗೆ 3 ದಿನಗಳ ಕಾಲ ಉಚಿತ ಪ್ರವೇಶ ನೀಡಲಾಗಿತ್ತು. ಪ್ರತೀ ಟಿಕೆಟ್‍ಗೆ ತಲಾ 10 ರೂ.ಗಳಂತೆ ಪ್ರವೇಶ ಶುಲ್ಕ ನಿಗಧಿ ಮಾಡಿದ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆಗೆ ಒಟ್ಟು 3 ಲಕ್ಷಕ್ಕೂ ಅಧಿಕ ಆದಾಯ ದೊರೆತಿದೆ. ಹಿಂದಿನ ಸಾಲಿಗೆ ಹೋಲಿಸಿದರೆ ಈ ಬಾರಿಯ ಫಲಪುಷ್ಪ ಪ್ರದರ್ಶನ ವಿಜೃಂಭಣೆ ಮತ್ತು ಅತ್ಯಾಕರ್ಷಕವಾಗಿ ನೆರವೇರಿದೆ.
ರಾಜಾಸೀಟಿನಲ್ಲಿ ಫಲಪುಷ್ಪ ಪ್ರದರ್ಶನದಲ್ಲಿ ಅಲಂ ಕಾರಿಕ ಹೂವು ಮತ್ತು ತರಕಾರಿಗಳಿಂದ ನಿರ್ಮಿಸಲಾಗಿದ್ದ ಕಲಾಕೃತಿಗಳನ್ನು ಮುಂದಿನ ಎರಡು ದಿನಗಳ ಕಾಲ ಹಾಗೆಯೇ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ಕಲಾಕೃತಿ ಗಳಿಗೆ ಅಳವಡಿಸಿರುವ ಹೂವು ಮತ್ತು ತರಕಾರಿಗಳು ಬಿಸಿಲಿಗೆ ಬಾಡದಂತೆ ನೀರನ್ನು ಸಿಂಪಡಿಸಲಾಗುತ್ತಿದ್ದು, ಮತ್ತಷ್ಟು ಸಂದರ್ಶಕರಿಗೆ ವೀಕ್ಷಿಸಲು ಅನುವು ಮಾಡಿ ಕೊಡಲಾಗಿದೆ. ಕಲ್ಲಂಗಡಿ ಹಣ್ಣಿನಲ್ಲಿ ಕೆತ್ತಲಾಗಿರುವ ಮಹನೀಯರ ಭಾವ ಚಿತ್ರಗಳು ದಿನದಿಂದ ದಿನಕ್ಕೆ ಮೆರುಗು ಪಡೆಯುತ್ತಿರುವುದು ಮತ್ತೊಂದು ವಿಶೇಷವಾಗಿದೆ. ಫಲಪುಷ್ಪ ಪ್ರದರ್ಶನಕ್ಕೆಂದು ಹೊರ ಊರುಗಳಿಂದ ತರಲಾಗಿದ್ದ ವಿಶೇಷ ಹೂವುಗಳನ್ನು ಉದ್ಯಾನದಿಂದ ತೆಗೆದೊಯ್ಯ ಲಾಗಿದ್ದು, ಪಾತಿಗಳಲ್ಲಿ ನಾಟಿ ಮಾಡಿರುವ ವಿವಿಧ ತಳಿಯ ಹೂವುಗಳು ನೋಡುಗರನ್ನು ಸೆಳೆಯುತ್ತಿವೆ.
ಒಟ್ಟಿನಲ್ಲಿ ಈ ಬಾರಿಯ ಫಲಪುಷ್ಪ ಪ್ರದರ್ಶನ ಸಂದರ್ಶಕರನ್ನು ತನ್ನೆಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೇ ಮೊದಲ ಬಾರಿಗೆ ಜಿಲ್ಲೆಯ ಮೂಲೆ ಮೂಲೆಗಳಿಂದ ಮಾತ್ರವಲ್ಲದೆ, ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಫಲಪುಷ್ಪ ಪ್ರದರ್ಶನ ಮತ್ತು ಕೊಡಗು ಪ್ರವಾಸಿ ಉತ್ಸವಕ್ಕೆ ಆಗಮಿಸಿದ್ದು ಮತ್ತೊಂದು ವಿಶೇಷವಾಗಿದೆ.