ನಾಪೋಕ್ಲು ಬಳಿ ರೇವ್‍ಪಾರ್ಟಿ; ಆರೋಪಿಗಳ ಬಂಧನ
ಕೊಡಗು

ನಾಪೋಕ್ಲು ಬಳಿ ರೇವ್‍ಪಾರ್ಟಿ; ಆರೋಪಿಗಳ ಬಂಧನ

January 15, 2019

ಮಡಿಕೇರಿ: ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ನೆಲಜಿ ಗ್ರಾಮದ “ನೆಲಜಿ ಎ-1 ಗ್ಲಾಂಪಿಂಗ್” ಹೋಂ ಸ್ಟೇಯಲ್ಲಿ ಅಕ್ರಮವಾಗಿ ರೇವ್ ಪಾರ್ಟಿಯನ್ನು ಆಯೋಜಿಸಿ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಬಾಂಬೆ, ಪೂನಾ ಹಾಗೂ ಬೆಂಗಳೂರು ಮೂಲದ ವ್ಯಕ್ತಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಅಪರಾಧ ಪತ್ತೆ ದಳ ಯಶಸ್ವಿಯಾಗಿದೆ.

ನಾಪೋಕ್ಲುವಿನ ಎ1 ಗ್ಲಾಂಪ್ಲಿಂಗ್ ಹೋಂ ಸ್ಟೇ ಮಾಲೀಕ ಎಂ.ಎ. ಅಪ್ಪಣ್ಣ ಸೇರಿದಂತೆ ಪೂನಾದ ಜೂಡ್ ಪೆರೇರ, ಪಶ್ಚಿಮ ಮುಂಬೈನ ಶಂಕರ್ ಶಾಂತನು, ಬೆಂಗಳೂರಿನ ಸಾಯಿರಾಮ್, ಎಂ.ವಿ. ಈಶ್ವರ್ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ 205.15 ಗ್ರಾಂ ಗಾಂಜಾ, 29 ಗ್ರಾಂ. ಚರಸ್, ಹುಕ್ಕ ಸೇದಲು ಉಪ ಯೋಸುವ ಸಾಧನ, ಗಾಂಜಾ ಪುಡಿ ಮಾಡಲು ಉಪಯೋಗಿಸುವ 3 ಸಾಧನ, 2 ಅತೀ ಸಣ್ಣ ತೂಕದ ಸಾಧನ, 17 ಸಿಗರೇಟ್ ತಯಾರಿಸಲು ಉಪಯೋಗಿಸುವ ಪೇಪರ್ ಪ್ಯಾಕೆಟ್ ಮತ್ತು ಫಿಲ್ಟರ್, ಮೊಬೈಲ್ ಫೋನ್‍ಗಳು, ಹಾಗೂ ಮಾದಕವಸ್ತು ಮಾರಾಟ ಮಾಡಿ ಇಟ್ಟುಕೊಂಡಿದ್ದ ಒಟ್ಟು ರೂ. 1,75,500 ರೂ ನಗದು, ರೇವ್ ಪಾರ್ಟಿಗೆ ಬಳಲಾಗುತ್ತಿದ್ದ ಲಕ್ಷಾಂತರ ಬೆಲೆಯ ಮ್ಯೂಸಿಕ್ ಸಿಸ್ಟಮ್, ಜನರೇಟರ್, ಅಶೋಕ ಲೈಲ್ಯಾಂಡ್ ಮಿನಿ ಲಾರಿ ವಶಪಡಿಸಿಕೊಳ್ಳಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಜನನಿಬಿಡ ಪ್ರದೇಶದಲ್ಲಿರುವ ಕೆಲವು ಹೋಂಸ್ಟೇಗಳಲ್ಲಿ ರೇವ್‍ಪಾರ್ಟಿಗಳನ್ನು ತಡರಾತ್ರಿ ನಡೆಸುತ್ತಿ ರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನಲೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ, ರೇವ್ ಪಾರ್ಟಿಗಳನ್ನು ಹತ್ತಿಕ್ಕುವಂತೆ ಜಿಲ್ಲಾ ಅಪರಾಧ ಪತ್ತೆದಳದ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ನಿರ್ದೇಶನ ನೀಡಿದ್ದರು.

ಜ. 12ರಂದು ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ “ನೆಲಜಿ ಎ-1 ಗ್ಲಾಂಪಿಂಗ್” ಹೋಂಸ್ಟೇಯಲ್ಲಿ ರೇವ್ ಪಾರ್ಟಿ ಯನ್ನು ಬಾಂಬೆ, ಪೂನಾ ಹಾಗೂ ಬೆಂಗ ಳೂರಿನ ಕೆಲವು ವ್ಯಕ್ತಿಗಳು ಹೋಂಸ್ಟೇ ಮಾಲೀಕರೊಡನೆ ಶಾಮೀಲಾಗಿ ರೇವ್ ಪಾರ್ಟಿಯನ್ನು ಆಯೋಜಿಸಿರುವ ಬಗ್ಗೆ ಮಾಹಿತಿ ಕಲೆ ಹಾಕಿ ದಾಳಿ ನಡೆಸಿದ್ದಾರೆ.

ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸ್ ನಿರೀಕ್ಷಕ ಮಹೇಶ್ ದಾಳಿ ನಡೆಸಿದ ಸಂದರ್ಭ ಬಾಂಬೆ, ಪೂನಾದ ತಲಾ ಒಬ್ಬರು, ಹಾಗೂ ಬೆಂಗಳೂರಿನ ಇಬ್ಬರು ವ್ಯಕ್ತಿಗಳನ್ನು ಹಾಗೂ ನಾಪೋಕ್ಲುವಿನ ನೆಲಜಿ ಎ1 ಗ್ಯಾಂಪ್ಲಿಂಗ್ ಹೋಂ ಸ್ಟೇ ಮಾಲೀಕನನ್ನು ಮಾಲು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಅಪ ರಾಧ ಪತ್ತೆ ದಳದ ಪೊಲೀಸ್ ಇನ್ಸ್‍ಪೆಕ್ಟರ್ ಎಂ. ಮಹೇಶ್, ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಎಂ.ನಂಜುಂಡ ಸ್ವಾಮಿ, ಸಿಬ್ಬಂದಿಗಳಾದ ಕೆ.ವೈ. ಹಮ್ಮೀದ್, ಎಂ.ಎನ್. ನಿರಂಜನ, ಬಿ.ಎಲ್. ಯೋಗೇಶ್ ಕುಮಾರ್, ವಿ.ಜಿ. ವೆಂಕಟೇಶ್, ಕೆ.ಆರ್. ವಸಂತ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಶಿವರಾಜೇಗೌಡ, ದಿನೇಶ್ ಮತ್ತು ಎಎನ್‍ಎಸ್ ತಂಡದ ಅವಿನಾಶ್, ಸಿಡಿಆರ್ ಸೆಲ್‍ನ ರಾಜೇಶ್ ಹಾಗೂ ಗಿರೀಶ್ ಹಾಗೂ ಚಾಲಕ ಶಶಿ ಕುಮಾರ್ ಅವರುಗಳು ಭಾಗವಹಿಸಿದ್ದರು. ಈ ಪ್ರಕರಣವನ್ನು ಪತ್ತೆಹಚ್ಚಿದ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿ ರುವ ಎಸ್ಪಿ ಡಾ.ಸುಮನ ನಗದು ಬಹು ಮಾನವನ್ನು ಘೋಷಿಸಿದ್ದಾರೆ.

Translate »