ಕೊಳ್ಳೇಗಾಲ ಕಾಂಗ್ರೆಸ್, ಚಾ.ನಗರ ಬಿಜೆಪಿ ಭಿನ್ನಮತ ಶಮನ
ಚಾಮರಾಜನಗರ

ಕೊಳ್ಳೇಗಾಲ ಕಾಂಗ್ರೆಸ್, ಚಾ.ನಗರ ಬಿಜೆಪಿ ಭಿನ್ನಮತ ಶಮನ

April 25, 2018

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಹಾಗೂ ಚಾಮರಾಜನಗರ ಕ್ಷೇತ್ರದ ಬಿಜೆಪಿಯಲ್ಲಿ ಕಾಣ ಸಿಕೊಂಡಿದ್ದ ಭಿನ್ನಮತ ಕೊನೆಗೂ ಶಮನಗೊಂಡಿದೆ.

ಕೊಳ್ಳೇಗಾಲ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರನ್ನು ಪಕ್ಷದ ಹೈಕಮಾಂಡ್ ಕಣಕ್ಕೆ ಇಳಿಸುತ್ತಿದ್ದಂತೆಯೇ ಟಿಕೆಟ್ ಪ್ರಬಲ ಆಕಾಂಕ್ಷಿಗಳಾಗಿದ್ದ ಮಾಜಿ ಶಾಸಕ ಎಸ್.ಬಾಲರಾಜು, ಮುಖಂಡರಾದ ಕಿನಕಹಳ್ಳಿ ರಾಚಯ್ಯ ಹಾಗೂ ಡಿ.ಎನ್.ನಟರಾಜು ಮುನಿಸಿಕೊಂಡಿದ್ದರು. ಈಗ ಇವರೆಲ್ಲರ ಮುನಿಸನ್ನು ಹೊಗಲಾಡಿಸಲಾಗಿದೆ. ಈ ಮೂಲಕ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಕಾಂಗ್ರೆಸ್ ಬಹಿರಂಗವಾಗಿ ತೋರ್ಪಡಿಸಿದೆ.

ಅದೇ ರೀತಿ ಚಾಮರಾಜನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿ ಆಗಿದ್ದ ಜಿಪಂ ಮಾಜಿ ಅಧ್ಯಕ್ಷೆ ಜಿ.ನಾಗಶ್ರೀ ಪ್ರತಾಪ್ ಮತ್ತು ಮಾಜಿ ಶಾಸಕ ಸಿ.ಗುರುಸ್ವಾಮಿ ಅವರ ಅಸಮಾಧಾನವೂ ಸಹ ಶಮನಗೊಂಡಿದೆ. ಪಕ್ಷದ ಅಭ್ಯರ್ಥಿ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಅವರ ಪರ ಪ್ರಚಾರ ನಡೆಸಲು ತಂದೆ ಮತ್ತು ಮಗಳು(ಸಿ.ಗುರುಸ್ವಾಮಿ, ನಾಗಶ್ರೀ) ತೀರ್ಮಾನಿಸಿದ್ದಾರೆ.

ಕಾಂಗ್ರೆಸ್‍ನಲ್ಲಿ ಒಗ್ಗಟ್ಟು: ಕೊಳ್ಳೇಗಾಲ ಮೀಸಲು ಕ್ಷೇತ್ರದ ಕಾಂಗ್ರೆಸ್ ಮುಖಂಡರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅಭ್ಯರ್ಥಿ ಹಾಗೂ ಟಿಕೆಟ್ ಆಕಾಂಕ್ಷಿಗಳೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಇಂದಿಲ್ಲಿ ತೋರ್ಪಡಿಸಲಾಯಿತು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಸಂಸದ ಆರ್.ಧ್ರುವನಾರಾಯಣ್, ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ, ಶಾಸಕ ಎಸ್.ಜಯಣ್ಣ, ಮಾಜಿ ಶಾಸಕ ಎಸ್.ಬಾಲರಾಜು, ಟಿಕೆಟ್ ಆಕಾಂಕ್ಷಿಗಳಾಗಿದ್ದ ಕಿನಕಹಳ್ಳಿ ರಾಚಯ್ಯ, ಡಿ.ಎನ್.ನಟರಾಜು ಸುದ್ದಿಗೋಷ್ಠಿ ನಡೆಸುವ ಮೂಲಕ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದೇವೆ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಮಾತನಾಡಿದ ಸಂಸದ ಆರ್.ಧ್ರುವನಾರಾಯಣ್, ಕೊಳ್ಳೇಗಾಲ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‍ಗೆ 5 ಜನ ಆಕಾಂಕ್ಷಿಗಳಿದ್ದರು. ಪಕ್ಷದ ವರಿಷ್ಠರು ಎ.ಆರ್.ಕೃಷ್ಣಮೂರ್ತಿಗೆ ಟಿಕೆಟ್ ನೀಡಿದರು. ಇದರಿಂದ ಟಿಕೆಟ್ ಆಕಾಂಕ್ಷಿಗಳಲ್ಲಿ ಕೆಲವರಿಗೆ ಅಸಮಾಧಾನ ಇತ್ತು. ಈಗ ಈ ಅಸಮಾಧಾನವನ್ನು ಹೊಗಲಾಡಿಸಿದ್ದು ಎಲ್ಲರೂ ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು.

ಟಿಕೆಟ್ ಆಕಾಂಕ್ಷಿಗಳಾಗಿದ್ದ ಹಾಲಿ ಶಾಸಕ ಎಸ್.ಜಯಣ್ಣ ಈಗಾಗಲೇ ಪಕ್ಷದ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಪರ ಮತ ಯಾಚನೆಯಲ್ಲಿ ತೊಡಗಿದ್ದಾರೆ. ಇದರಿಂದ ಎಸ್.ಬಾಲರಾಜು, ಕಿನಕಹಳ್ಳಿ ರಾಚಯ್ಯ, ಡಿ.ಎನ್.ನಟರಾಜು ಅವರು ಅಭ್ಯರ್ಥಿ ಕೃಷ್ಣಮೂರ್ತಿ ಪರ ಮತ ಯಾಚನೆಯಲ್ಲಿ ತೊಡಗಿದ್ದಾರೆ. ಈ ಮೂಲಕ ನಮ್ಮಲ್ಲಿ ಒಗ್ಗಟ್ಟಿದೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ತೋರ್ಪಡಿಸಲಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಿಕೆಟ್ ಪ್ರಬಲ ಆಕಾಂಕ್ಷಿಗಳೊಂದಿಗೆ ಮಾತುಕತೆ ನಡೆಸಿದ ಪರಿಣಾಮ ಒಗ್ಗಟ್ಟು ಮೂಡಲು ಕಾರಣವಾಯಿತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಟಿಕೆಟ್ ಆಕಾಂಕ್ಷಿಗಳಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವ ಭರವಸೆ ನೀಡಲಾಗಿದೆ ಎಂದು ಧ್ರುವನಾರಾಯಣ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲೆ ಕಾಂಗ್ರೆಸ್ ಭದ್ರಕೋಟೆ, ಇದು 2008, 2013ರ ವಿಧಾನಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. ಈ 2018 ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ 4 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಈ ಮೂಲಕ ಜಿಲ್ಲೆ ‘ಕೈ’ ಭದ್ರಕೋಟೆ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಎಸ್.ಜಯಣ್ಣ ಮಾತನಾಡಿ, ನನ್ನೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತುಕತೆ ನಡೆಸಿದ ನಂತರವೇ ಎಆರ್‍ಕೆ ಅವರಿಗೆ ಟಿಕೆಟ್ ನೀಡಲಾಯಿತು. ನಾನು ಕಳೆದ 40 ವರ್ಷಗಳಿಂದ ಸಿದ್ದರಾಮಯ್ಯ ಅವರೊಟ್ಟಿಗೆ ರಾಜಕೀಯ ಮಾಡುತ್ತಾ ಬರುತ್ತಿದ್ದೇನೆ. ಅವರ ಮಾತಿಗೆ ಬೆಲೆ ಕೊಟ್ಟು ಎಆರ್‍ಕೆ ಗೆಲುವಿಗೆ ಪ್ರಾಮಾಣ ಕವಾಗಿ ದುಡಿಯುತ್ತೇನೆ ಎಂದರು.

ಮಾಜಿ ಶಾಸಕ ಎಸ್.ಬಾಲರಾಜು ಮಾತನಾಡಿ, ಮುಖ್ಯಮಂತ್ರಿ ಹಾಗೂ ಸಂಸದರು ನನ್ನೊಟ್ಟಿಗೆ ಮಾತುಕತೆ ನಡೆಸಿದ ಪರಿಣಾಮ ನನ್ನಲ್ಲಿದ್ದ ಅಸಮಾಧಾನ ಹೋಯಿತು. ನನಗೂ ಎಆರ್‍ಕೆಗೂ ಯಾವುದೇ ವೈಯಕ್ತಿಕ ದ್ವೇಷ ಇಲ್ಲ. ನಾವು ಸಂಬಂಧಿಕರು. ರಾಜಕೀಯದಿಂದ ಮಾತ್ರ ದೂರ ಇದ್ದೆವು. ಈಗ ನಾವು ಒಂದಾಗಿದ್ದೇವೆ. ಅವರ ಗೆಲುವಿಗೆ ಶ್ರಮಿಸಿ ಅದರಲ್ಲಿ ಯಶಸ್ಸು ಗಳಿಸುತ್ತೇವೆ ಎಂದರು. ಕಿನಕನಹಳ್ಳಿ ರಾಚಯ್ಯ, ಡಿ.ಎನ್.ನಟರಾಜು ಮಾತನಾಡಿ, ಮುಖ್ಯಮಂತ್ರಿ ಹಾಗೂ ಸಂಸದರ ಸೂಚನೆ ಮೇರೆಗೆ ಕಾಂಗ್ರೆಸ್ ಪರ ದುಡಿಯಲು ತೀರ್ಮಾನಿಸಿದ್ದೇವೆ ಎಂದರು.

ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಮುಖ್ಯಮಂತ್ರಿಗಳು, ಸಂಸದರು ಟಿಕೆಟ್ ಪ್ರಬಲ ಆಕಾಂಕ್ಷಿಗಳೊಂದಿಗೆ ಎರಡು ಸುತ್ತಿನ ಮಾತುಕತೆ ನಡೆಸಿದ ಪರಿಣಾಮ ಎಲ್ಲರೂ ಒಗ್ಗೂಡಲು ಕಾರಣವಾಯಿತು. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲರೂ ಒಗ್ಗೂಡಿದ್ದೇವೆ. ಎಲ್ಲರೂ ಸಹ ನನ್ನ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಬಿಜೆಪಿಯಲ್ಲೂ ಒಂದೂ: ಚಾಮರಾಜನಗರ ಕ್ಷೇತ್ರ ಬಿಜೆಪಿಯಿಂದ ವಿಧಾನಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಅವರನ್ನು ಪಕ್ಷ ಕಣಕ್ಕೆ ಇಳಿಸಿದೆ. ಇದರಿಂದ ಟಿಕೆಟ್ ವಂಚಿತೆ ಜಿಪಂ ಮಾಜಿ ಅಧ್ಯಕ್ಷೆ ನಾಗಶ್ರೀ ಪ್ರತಾಪ್ ಅಸಮಾಧಾನಗೊಂಡಿದ್ದರು. ತಮ್ಮ ತಂದೆ ಸಿ.ಗುರುಸ್ವಾಮಿ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿ ಅಸಮಾಧಾನವನ್ನು ಹೊರ ಹಾಕಿದ್ದರು. ತಮ್ಮ ತಂದೆ ಸಿ.ಗುರುಸ್ವಾಮಿ ಅವರಿಗೆ ಪಕ್ಷದ ಜಿಲ್ಲಾ ಅಧ್ಯಕ್ಷ ಸ್ಥಾನ ಸಿಗುವಂತೆ ಒತ್ತಾಯಿಸಿದ್ದರು. ಈ ಬೇಡಿಕೆ ಈಡೇರಿದರೆ ಮಾತ್ರ ಅಭ್ಯರ್ಥಿ ಮಲ್ಲಿಕಾರ್ಜುನಪ್ಪ ಪರ ಪ್ರಚಾರದಲ್ಲಿ ತೊಡಗುತ್ತೇವೆ. ಇಲ್ಲದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಎಚ್ಚರಿಕೆ ನೀಡಿದ್ದರು. ಸೋಮವಾರ ಸಂಜೆ ನಡೆದ ಬೆಂಬಲಿಗರ ಸಭೆಯಲ್ಲಿ ಮಲ್ಲಿಕಾರ್ಜುನಪ್ಪ ಪಾಲ್ಗೊಂಡು ಸಿ.ಗುರುಸ್ವಾಮಿ ಅವರಿಗೆ ಪಕ್ಷದ ಜಿಲ್ಲಾ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೊಡನೆ ಮಾತುಕತೆ ನಡೆಸಿದ್ದೇನೆ ಎಂದು ಭರವಸೆ ನೀಡಿದರು. ನಂತರ ಮುಖಂಡರು ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಸಿ.ಗುರುಸ್ವಾಮಿ ಹಾಗೂ ನಾಗಶ್ರೀ ಅವರಿಗೆ ಸಲಹೆ ನೀಡಿದರು. ಟಿಕೆಟ್ ಆಕಾಂಕ್ಷಿಗಳಾಗಿದ್ದ ಎಂ.ರಾಮಚಂದ್ರ, ನಾಗಶ್ರೀ ಪ್ರತಾಪ್, ಅಮ್ಮನಪುರ ಮಲ್ಲೇಶ್, ಡಾ.ಎಲ್.ಆರ್.ಬಾಬು, ನಿಜಗುಣರಾಜು ಎಲ್ಲರೂ ಒಗ್ಗೂಡಿರುವುದರಿಂದ ಬಿಜೆಪಿಯಲ್ಲಿ ಇದ್ದ ಅಸಮಾಧಾನವೂ ಹೋದಂತಾಗಿದೆ.

ಕೊಳ್ಳೇಗಾಲ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ಇದ್ದ ಅಸಮಾಧಾನ ಹೋಗಿದೆ. ಎಲ್ಲರೂ ಒಗ್ಗೂಡಿ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಮೂಲಕ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲರೂ ಒಂದಾಗಿದ್ದೇವೆ. ಹೀಗಾಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಗೆಲ್ಲುವುದು ಖಚಿತ
-ಆರ್.ಧ್ರುವನಾರಾಯಣ್, ಸಂಸದ

ಕೊಳ್ಳೇಗಾಲ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಆಗಿರುವ ಕಾರಣ ಹಾಗೂ ಸಂಸದರು, ಶಾಸಕರು, ಟಿಕೆಟ್ ಆಕಾಂಕ್ಷಿಗಳು, ಪಕ್ಷದ ಜನಪ್ರತಿನಿಧಿಗಳು ಮುಖಂಡರು, ಕಾರ್ಯಕರ್ತರು ನನ್ನ ಗೆಲುವಿಗೆ ದುಡಿಯುತ್ತಿರುವ ಕಾರಣ ನನ್ನ ಗೆಲುವು ಖಚಿತ. ಬಿಜೆಪಿ ಮತ್ತು ಬಿಎಸ್‍ಪಿ 2ನೇ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿವೆ.
-ಎ.ಆರ್.ಕೃಷ್ಣಮೂರ್ತಿ, ಕಾಂಗ್ರೆಸ್ ಅಭ್ಯರ್ಥಿ

ಚಾಮರಾಜನಗರ ಕ್ಷೇತ್ರದ ಬಿಜೆಪಿಯಲ್ಲೂ ಒಗ್ಗಟ್ಟು ಮೂಡಿದೆ. ಮಾಜಿ ಶಾಸಕ ಸಿ.ಗುರುಸ್ವಾಮಿ ಅವರ ಪುತ್ರಿ ನಾಗಶ್ರೀ ಟಿಕೆಟ್ ಆಕಾಂಕ್ಷಿಗಳಾಗಿದ್ದ ಎ.ರಾಮಚಂದ್ರ, ಮಲ್ಲೇಶ್, ನಿಜಗುಣರಾಜು, ಡಾ.ಬಾಬು ಅಭ್ಯರ್ಥಿಯಾದ ನನ್ನ ಪರ ಪ್ರಚಾರದಲ್ಲಿ ತೊಡಗಿರುವುದಕ್ಕೆ ಅವರೆಲ್ಲರಿಗೂ ಚಿರಋಣ ಆಗಿದ್ದೇನೆ.
– ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಬಿಜೆಪಿ ಅಭ್ಯರ್ಥಿ

Translate »