ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಕಾಂಗ್ರೆಸ್ ಸೇರ್ಪಡೆ
ಚಾಮರಾಜನಗರ

ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಕಾಂಗ್ರೆಸ್ ಸೇರ್ಪಡೆ

April 25, 2018

ಚಾಮರಾಜನಗರ: ಬಹುಜನ ಸಮಾಜ ಪಾರ್ಟಿ(ಬಿಎಸ್‍ಪಿ) ರಾಜ್ಯ ಕಾರ್ಯದರ್ಶಿ ಹಾಗೂ ಚಾಮರಾಜನಗರ ನಗರ ಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ ಬಿಎಸ್‍ಪಿ ತೊರೆದು ಕಾಂಗ್ರೆಸ್ ಸೇರಿದರು.

ಸಂಸದ ಆರ್.ಧ್ರುವನಾರಾಯಣ್ ಅವರು ನಂಜುಂಡಸ್ವಾಮಿಗೆ ಪಕ್ಷದ ಶಲ್ಯ ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಧ್ರುವನಾರಾಯಣ್, ಬಿಎಸ್‍ಪಿ ಪಕ್ಷದಲ್ಲಿ ಕಳೆದ 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಆರ್.ಪಿ.ನಂಜುಂಡಸ್ವಾಮಿ ಇಂದು ಆ ಪಕ್ಷ ತೊರೆದು ಯಾವುದೇ ಷರತ್ತು ಇಲ್ಲದೇ ಕಾಂಗ್ರೆಸ್ ಸೇರಿದ್ದಾರೆ ಎಂದರು.

ಆರ್.ಪಿ.ನಂಜುಂಡಸ್ವಾಮಿ ಮಾತನಾಡಿ, ಕಳೆದ 18 ವರ್ಷಗಳಿಂದ ನಾನು ಬಿಎಸ್‍ಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದೆ. ಎರಡು ಬಾರಿ ನಗರಸಭಾ ಸದಸ್ಯನೂ ಆದೆ. ಆದರೆ ಪಕ್ಷದ ರಾಜ್ಯಾಧ್ಯಕ್ಷ ಎನ್.ಮಹೇಶ್ ಪಕ್ಷದ ತತ್ವ ಸಿದ್ಧಾಂತವನ್ನು ಗಾಳಿಗೆ ತೂರುತ್ತಿರುವುದರಿಂದ ಮನಸ್ಸಿಗೆ ನೋವಾಗಿ ನಾನು ಆ ಪಕ್ಷ ತೊರೆದೆ ಎಂದರು.

ಕಾಂಗ್ರೆಸ್ ಸೋಲಿಸುವುದೇ ನಮ್ಮ ಧ್ಯೇಯ ಎನ್ನುತ್ತಿದ್ದ ಎನ್.ಮಹೇಶ್ ಈ ಬಾರಿ ಆ ಮಾತನ್ನು ಹೇಳುತ್ತಲೇ ಇಲ್ಲ. ಅವರೊಬ್ಬ(ಮಹೇಶ್) ಅವಕಾಶವಾದಿ ರಾಜಕಾರಣ , ಪಕ್ಷದ ಟಿಕೆಟ್‍ನ್ನು ಹಣಕ್ಕೆ ಮಾರಿಕೊಳ್ಳುವವರು. ತಮ್ಮ ಅನುಕೂಲಕ್ಕೆ ತಕ್ಕಂತೆ ರಾಜಕಾರಣ ಮಾಡುವ ಅವರ ಪಕ್ಷದಲ್ಲಿ ಇರುವುದು ಬೇಡ ಎಂದು ತೀರ್ಮಾನಿಸಿ ಆ ಪಕ್ಷಕ್ಕೆ ಗುಡ್ ಬೈ ಹೇಳಿದೆ ಎಂದರು.
ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್‍ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ವಿ.ಚಂದ್ರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Translate »