ಭಾವಸಾರ ಕ್ಷತ್ರಿಯ ಮಹಾಸಭಾ ರಾಜ್ಯ ಪದಾಧಿಕಾರಿಗಳ ಪದಗ್ರಹಣ
ಮೈಸೂರು

ಭಾವಸಾರ ಕ್ಷತ್ರಿಯ ಮಹಾಸಭಾ ರಾಜ್ಯ ಪದಾಧಿಕಾರಿಗಳ ಪದಗ್ರಹಣ

November 5, 2018

ಮೈಸೂರು: ಐಎಎಸ್, ಐಪಿಎಸ್ ನಂತಹ ನಾಗರಿಕ ಸೇವಾ ಪರೀಕ್ಷೆ ತೆಗೆದುಕೊಳ್ಳ ಬಯಸುವ ಭಾವಸಾರ ಕ್ಷತ್ರಿಯ ಸಮುದಾಯದ ಯುವಕರಿಗೆ ಊಟ, ವಸತಿ ಸೌಲಭ್ಯದ ಜೊತೆಗೆ ವ್ಯಾಸಂಗದ ಖರ್ಚುಗಳನ್ನು ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾ(ಎಬಿಬಿಕೆ) ಭರಿಸಲಿದೆ ಎಂದು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸಮಾಜ ಭೂಷಣ ಮಹದೇವ ಪತಂಗೆ ಇಂದಿಲ್ಲಿ ತಿಳಿಸಿದರು.

ಮೈಸೂರಿನ ಕಬೀರ್ ರಸ್ತೆ ಪಾಂಡುರಂಗ ದೇವ ಸ್ಥಾನದ ಸಭಾಂಗಣದಲ್ಲಿ ಎಬಿಬಿಕೆ ರಾಜ್ಯಾಧ್ಯಕ್ಷ ಮತ್ತು ಪದಾಧಿಕಾರಿಗಳ ಪದಗ್ರಹಣ ಮತ್ತು ಗುರು ವಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪತಂಗೆ ಮಾತನಾಡಿದರು. ಇತ್ತೀಚೆಗೆ ಶಿಕ್ಷಣದ ಬಗ್ಗೆ ಆಸಕ್ತಿ ತೋರುತ್ತಿರುವ ಸಮುದಾಯದ ಯುವಕರು ಐಎಎಸ್, ಐಪಿಎಸ್‍ನಂತಹ ನಾಗರೀಕ ಸೇವಾ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಒತ್ತು ನೀಡಬೇಕು ಎಂದು ಕರೆ ನೀಡಿದರು.

ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಮಾತನಾಡಿ, ರಾಷ್ಟ್ರೀಯ ಅಧ್ಯಕ್ಷರ ಆಶಯದಂತೆ ಸಮುದಾಯದ ಯುವಕರು ಐಎಎಸ್, ಐಪಿಎಸ್ ಓದಲು ಆದ್ಯತೆ ನೀಡಬೇಕು. ನಾಗರೀಕ ಸೇವೆಗಳ ಪರೀಕ್ಷೆ ತೆಗೆದುಕೊಳ್ಳಲು ಆರ್ಥಿಕವಾಗಿ ಶಕ್ತರಲ್ಲದ ಸಮುದಾಯದ ಯುವಕರಿಗೆ ಅಗತ್ಯ ತರಬೇತಿ, ಸಹಕಾರ, ನೆರವು ನೀಡುವುದಾಗಿ ಹೇಳಿರುವ ರಾಷ್ಟ್ರೀಯ ಅಧ್ಯಕ್ಷರ ಸಮುದಾಯದೆಡೆಗಿನ ಕಾಳಜಿ ಪ್ರಶಂಸಾರ್ಹ ಎಂದು ಶ್ಲಾಘಿಸಿದರು.

ಇದಕ್ಕೂ ಮುನ್ನ ಎಬಿಬಿಕೆ ಮಹಾಸಭಾದ ಯುವ ಪರಿಷತ್ ರಾಜ್ಯಾಧ್ಯಕ್ಷರಾಗಿ ಗಣೇಶ್ ಲಾಳಿಗೆ ಮತ್ತು ಇನ್ನಿತರ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ವನ್ನು ಯುವ ಪರಿಷತ್ ರಾಷ್ಟ್ರೀಯ ಅಧ್ಯಕ್ಷ ಡಾ. ಯೋಗೇಂದ್ರ ವರ್ಣೆ ನೆರವೇರಿಸಿಕೊಟ್ಟರು.
ಇದೇ ಸಂದರ್ಭ ಸಮುದಾಯದ ಶಿಕ್ಷಕರಾದ ವಿಠಲರಾವ್ ಪತಂತೆ, ಶೋಭಾ ನಾಯಕ್, ವೇದಾ ರಂಪೂರೆ, ರಾಧಾ ಸುಲಾಕೆ, ಎಂ.ಕೆ. ಸುಬ್ರಮಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಭಾವಸಾರ ಕ್ಷತ್ರಿಯ ಮಂಡಳಿ ಮೈಸೂರು ಅಧ್ಯಕ್ಷ ಜಯರಾಮ್‍ರಾವ್ ಲಾಳಿಗೆ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಮಹಾನಗರಪಾಲಿಕೆ ಸದಸ್ಯರಾದ ರಮೇಶ್ (ರಮಣಿ), ಬಿ.ವಿ. ಮಂಜು ನಾಥ್, ಮೈಸೂರು ಡಯಾಗ್ನೊಸ್ಟಿಕ್ ಸೆಂಟರ್‍ನ ವ್ಯವಸ್ಥಾಪಕ ನಿರ್ದೇಶಕ ಗಿರೀಶ್, ಯುವ ಪರಿ ಷತ್ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಅನಂತ್ ಕುಮಾರ್ ಕಾಟೋಕರ್, ಕೆ.ವಿ.ಕಿಶೋರ್ ಕುಮಾರ್, ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಎಸ್.ವಿ.ಸತ್ಯನಾರಾಯಣ, ನಿರ್ದೇಶಕ ನಾಗರಾಜ ಪತಂಗೆ, ಸಮಾಜದ ಹಿರಿಯರಾದ ಗೋವಿಂದರಾವ್ ತೇಲ್ಕರ್, ವೆಂಕಟೇಶ್ ಪತಂಗೆ, ನಾರಾಯಣರಾವ್ ತೇಲ್ಕರ್
, ರಾಜೇಂದ್ರಪ್ರಸಾದ್ ಉತ್ತರ್‍ಕರ್, ವಿಠಲರಾವ್ ಲಾಳಿಗೆ ಹಾಗೂ ಯುವ ಪರಿಷತ್ ನಗರಾಧ್ಯಕ್ಷ ಸಂತೋಷ್ ಪತಂಗೆ ಇನ್ನಿತರರು ಉಪಸ್ಥಿತರಿದ್ದರು.

Translate »