28ಕ್ಕೆ ಕೆಎಸ್‍ಆರ್‍ಟಿಸಿ ನೌಕರರ ವಿಭಾಗ ಮಟ್ಟದ ಸಮಾವೇಶ
ಕೊಡಗು

28ಕ್ಕೆ ಕೆಎಸ್‍ಆರ್‍ಟಿಸಿ ನೌಕರರ ವಿಭಾಗ ಮಟ್ಟದ ಸಮಾವೇಶ

March 21, 2019

ಸಮಸ್ಯೆಗಳಿಗೆ ಸಂಘಟನಾತ್ಮಕ ಪರಿಹಾರ ಕಂಡುಕೊಳ್ಳಲು ಯತ್ನ
ಹಾಸನ: ಸಾರಿಗೆ ಕಾರ್ಮಿಕರ ಹಾಸನ ವಿಭಾಗ ಮಟ್ಟದ ಸಮಾವೇಶವನ್ನು ಮಾ.28ರ ಗುರುವಾರ ಬೆಳಿಗ್ಗೆ 10.30ಕ್ಕೆ ನಗರದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‍ಆರ್‍ಟಿಸಿ) ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ಸಂಸ್ಥೆಯು ಕೋಟ್ಯಾಂತರ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೇವೆ ಒದಗಿಸಲೆಂದೇ ಚಾಲಕರು, ನಿರ್ವಾಹಕರು, ಚಾಲಕ ಕಮ್ ನಿರ್ವಾಹಕರು, ತಾಂತ್ರಿಕ, ಭದ್ರತಾ ಮತ್ತು ಆಡಳಿತ ಸಿಬ್ಬಂದಿ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಆದರೆ, ನೌಕರರು ನೂರಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆ ಬಗ್ಗೆ ಚರ್ಚಿಸಲು ಮತ್ತು ಸಂಘಟನಾತ್ಮಕವಾಗಿ ಪರಿಹಾರ ಕಂಡುಕೊಳ್ಳಲು ಈ ಸಮಾವೇಶ ಆಯೋಜಿಸಲಾಗಿದೆ. ಸಾಲಗಾಮೆ ರಸ್ತೆ ಬಳಿಯ ಅರಳಿಕಟ್ಟೆ ವೃತ್ತದ ಸಂಸ್ಕøತ ಭವನದಲ್ಲಿ ಸಮಾವೇಶ ನಡೆಯಲಿದೆ ಎಂದರು.

25 ವರ್ಷಗಳಿಂದ ಸರ್ಕಾರ ಮತ್ತು ಆಡಳಿತ ವರ್ಗದ ಕಾರ್ಮಿಕ ವಿರೋಧಿ ಧೋರಣೆ ಗಳಿಂದಾಗಿ ನೌಕರರು ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ನಿತ್ಯವೂ ಕಿರುಕುಳ ಅನುಭವಿಸು ತ್ತಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಿರುಕುಳ ತಪ್ಪಿಸಿ ಕೊಳ್ಳಬೇಕೆಂದರೆ ಸಿಬ್ಬಂದಿ ಪ್ರತಿಹಂತದಲ್ಲೂ ಅಧಿಕಾರಿಗಳಿಗೆ ಲಂಚ ನೀಡಬೇಕಾದ ಪರಿಸ್ಥಿತಿ ಇದೆ. ರಜೆ ಪಡೆಯಲೂ ಲಂಚ ನೀಡಬೇಕಾದ ಸ್ಥಿತಿ ಇದೆ. ಇಂಥ ಹತ್ತಾರು ಸಮಸ್ಯೆಗಳಿದ್ದರೂ ಘಟಕ, ವಿಭಾಗ, ಕೇಂದ್ರ ಕಚೇರಿ ಮಟ್ಟದಲ್ಲಿ ಕಾರ್ಮಿಕ ಸಂಘಗಳೊಂದಿಗೆ ಚರ್ಚಿಸಿ ಬಗೆಹರಿಸುವ ವ್ಯವಸ್ಥೆಯೇ ಇಲ್ಲ ಎಂದು ಸಮಸ್ಯೆಯ ಚಿತ್ರಣ ನೀಡಿದರು.

ನಿಗಮದಲ್ಲಿ ಅಧಿಕಾರಿಗಳು ಮನಸೋ ಇಚ್ಛೆ ಆಡಳಿತ ನಡೆಸುತ್ತಿದ್ದಾರೆ. ಕಾನೂನು ಪ್ರಕಾರ ದಿನಕ್ಕೆ 8ರಿಂದ 9 ಗಂಟೆ, ವಾರಕ್ಕೆ 48ರಿಂದ 54 ಗಂಟೆಗಿಂತ ಅಧಿಕವಾಗಿ ದುಡಿಸಬಾರದು. ಆದರೆ ಬಾರ್ ಡ್ಯೂಟಿ ಹೆಸರಿನಲ್ಲಿ 2 ದಿನಕ್ಕೆ 36 ಗಂಟೆಗಳಿಗೂ ಹೆಚ್ಚು ಸಮಯ ದುಡಿಸಲಾಗುತ್ತಿದೆ. ಫಾರಂ ನಂ.4 ತಯಾರಿಸಲಿದ್ದ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಗಂಟೆಗೆ ವೇಗದೂತಕ್ಕೆ 40 ಕಿಮೀ, ಸಾಮಾನ್ಯ ವಾಹನಕ್ಕೆ 30 ಕಿಮೀ, ನಿಗದಿಪಡಿಸಲಾಗಿತ್ತು. ಈಗ ನಿಯಮ ತಿದ್ದುಪಡಿ ಇಲ್ಲದೆ ಗಂಟೆಗೆ ವೇಗದೂತಕ್ಕೆ 55 ಕಿಮೀ, ಸಾಮಾನ್ಯ ವಾಹನಕ್ಕೆ 45 ಕಿಮೀ ಹೆಚ್ಚಿಸಲಾಗಿದೆ. 300 ಕಿಮೀ-8 ಗಂಟೆ ಡ್ಯೂಟಿ ನಿಗದಿಗೆ ಬದಲು 410 ಕಿಮೀಗೆ, ಅಂದರೆ 110 ಕಿಮೀಗಳಷ್ಟು ಹೆಚ್ಚಳ ಮಾಡಲಾಗಿದೆ. ಇದರಿಂದ ಚಾಲಕ ಮತ್ತು ನಿರ್ವಾಹಕರಿಗೆ ಕೆಲಸದ ಒತ್ತಡ ಹೆಚ್ಚಿದೆ. ಅಷ್ಟೇ ಅಲ್ಲದೇ, ಷೆಡ್ಯೂಲ್ ಓಟಿಯನ್ನೂ ಕಡಿತಗೊಳಿಸಲಾಗಿದೆ. ಇನ್ನೊಂದೆಡೆ, ಕಾರ್ಮಿಕ ಸಂಘದ ಚುನಾವಣೆಯನ್ನೇ 1996ರಿಂದ ನಡೆಸಲಾಗಿಲ್ಲ. ನೌಕರರ ಸಂಘ ಆಯ್ಕೆ ಹಕ್ಕನ್ನೇ ಕಿತ್ತುಕೊಳ್ಳಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿಐಟಿಯು ಅಧ್ಯಕ್ಷ ಧರ್ಮೇಶ್, ಅರವಿಂದ್, ನೌಕರರ ಸಂಘದ ಮುಖಂಡರಾದ ಆರ್.ಡಿ.ವೀರಪ್ಪ, ಲೋಕೇಶ್, ಯೋಗೇಶ್ ಉಪಸ್ಥಿತರಿದ್ದರು.

Translate »