ದೈವಾನುಗ್ರಹದಿಂದ ಕುಮಾರಸ್ವಾಮಿ ಸಿಎಂ ಆಗಿದ್ದಾರೆ
ಮೈಸೂರು

ದೈವಾನುಗ್ರಹದಿಂದ ಕುಮಾರಸ್ವಾಮಿ ಸಿಎಂ ಆಗಿದ್ದಾರೆ

February 8, 2019

ಶಾಸಕಿ ಅನಿತಾ ಕುಮಾರಸ್ವಾಮಿ ಅಭಿಮತ
ಬಂಡಹಳ್ಳಿ(ಕೆ.ಆರ್.ನಗರ ತಾಲೂಕು), ಫೆ.7- ಕಡಿಮೆ ಸಂಖ್ಯೆಯ ಶಾಸಕರು ಆಯ್ಕೆಯಾದ್ದರಿಂದ ನಾವ್ಯಾರೂ ನಿರೀಕ್ಷೆ ಮಾಡದಿದ್ದರೂ ದೈವಾನುಗ್ರಹದಿಂದ ನನ್ನ ಪತಿ ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾದರು, ಅವರು ಕರ್ನಾಟಕವನ್ನು ರಾಮರಾಜ್ಯ ಮಾಡುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.

ಕೆ.ಆರ್.ನಗರ ತಾಲೂಕು ಬಂಡಹಳ್ಳಿ ಗ್ರಾಮದಲ್ಲಿ ಗುರುವಾರ ಶ್ರೀ ಲಕ್ಷ್ಮೀದೇವಿ ನೂತನ ದೇವಾಲಯ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ವರ್ಗದ ಜನರ ಅಭ್ಯುದಯ ಹಾಗೂ ರೈತರ ಹಿತದ ಬಗ್ಗೆ ಸದಾ ಚಿಂತಿಸುವ ಕುಮಾರಸ್ವಾಮಿಯವರ ರಾಮರಾಜ್ಯದ ಕನಸು ನನಸಾಗಬೇಕೆಂಬ ಉದ್ದೇಶದಿಂದ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಬೇಕೆಂಬ ಆಶಯ ನನ್ನದು. ಎಷ್ಟೆ ಕಷ್ಟವಾದರೂ ರೈತರ ಸಾಲಮನ್ನಾ ಮಾಡಿಯೇ ತೀರುತ್ತಾರೆ ಎಂದರು.

ಸಚಿವ ಸಾ.ರಾ.ಮಹೇಶ್ ಅವರು ಈ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಲು ಅವರ ಜನಪರ, ಸಮಾಜಮುಖಿ ಕೆಲಸಗಳೆ ಕಾರಣ. ಅವರನ್ನೂ ಎಂದೂ ಕೈಬಿಡದಿರಿ. ನೀವು ಮಹೇಶ್ ಅವರಿಗೆ ಆಶೀರ್ವಾದ ಮಾಡಿದರೆ ಕುಮಾರಸ್ವಾಮಿಯವವರಿಗೆ ಆಶೀರ್ವಾದ ಮಾಡಿದಂತೆ. ನಿಮ್ಮ ಕಷ್ಟ-ಸುಖಗಳಿಗೆ ಸದಾ ಸ್ಪಂದಿಸುವ ಉದಾರ ವ್ಯಕ್ತಿ. ಕ್ಷೇತ್ರದ ಅಭಿವೃದ್ದಿಗೆ ಸಾಕಷ್ಟು ಕೆಲಸ ಮಾಡಿರುವ ಅವರನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತ್ತಷ್ಟು ಮತಗಳಿಂದ ಗೆಲ್ಲಿಸಬೇಕಿತ್ತು ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಈ ಸಮಾರಂಭಕ್ಕೆ ಕುಮಾರಸ್ವಾಮಿಯವರೆ ಬರಬೇಕಾಗಿತ್ತು. ಅಧಿವೇಶನ ನಡೆಯುತ್ತಿರುವ ಕಾರಣ ಅವರ ಪರವಾಗಿ ತಾನು ಆಗಮಿಸಿದ್ದೇನೆ. ನನ್ನ ಸಹೋದರ ಸಮಾನರಾಗಿರುವ ಸಾ.ರಾ.ಮಹೇಶ್ ಅವರ ಮೇಲಿನ ವಿಶ್ವಾಸದಿಂದ ಬಜೆಟ್ ಅಧಿವೇಶನವನ್ನೂ ಬದಿಗೊತ್ತಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ಮಹೇಶ್ ಅವರು ನಮ್ಮ ಕುಟುಂಬದೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದಾರೆ. ಒಬ್ಬ ಜನಪ್ರತಿನಿಧಿಯಾಗಿ ಅವರ ಕರ್ತವ್ಯ ಇತರರಿಗೆ ಮಾದರಿ ಎಂದರು.

ಸಚಿವ ಸಾ.ರಾ.ಮಹೇಶ್ ಅವರು ಮಾತನಾಡಿ ಜನಪರ ಹಾಗೂ ರೈತಪರ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಅಧಿಕಾರ ವಹಿಸಿಕೊಂಡ ಏಳು ತಿಂಗಳೂ ಒತ್ತಡದಲ್ಲೇ ಕಾರ್ಯನಿರ್ವಹಿತ್ತಿದ್ದಾರೆ. ಸಂಕಷ್ಟದಲ್ಲಿರುವ ರೈತರ 40 ಸಾವಿರ ಕೋಟಿಗೂ ಹೆಚ್ಚು ಸಾಲವನ್ನು ಮನ್ನಾ ಮಾಡಿರುವ ಯಾರಾದರೂ ಒಬ್ಬ ಮುಖ್ಯಮಂತ್ರಿಯಿದ್ದರೆ ಅದು ಕುಮಾರಸ್ವಾಮಿಯವರು ಮಾತ್ರ. ಹೀಗಿದ್ದರೂ ಸಿಎಂ ನೆಮ್ಮದಿಯಾಗಿ ಅಧಿಕಾರ ಚಲಾಯಿಸಲು ಪ್ರತಿಪಕ್ಷ ಬಿಜೆಪಿ ಅವಕಾಶ ನೀಡುತ್ತಿಲ್ಲ ಎಂದು ದೂರಿದರು.

ಬಜೆಟ್ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣಕ್ಕೂ ಅವಕಾಶ ನೀಡದೆ ಬೇಜವಬ್ದಾರಿ ಮೆರೆದಿರುವ ಬಿಜೆಪಿ ಕುರ್ಚಿ ಆಸೆಗಾಗಿ ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದಿದೆ. ನಮ್ಮ ಶಾಸಕರೊಬ್ಬರ ಮನೆಬಾಗಿಲಿಗೆ ತೆರಳಿ ಐದು ಕೋಟಿ ರೂ. ನೀಡಲು ಮುಂದಾಗಿರುವ ಬಿಜೆಪಿ ನಾಯಕರು ಅಧಿಕಾರವಿಲ್ಲದಿದ್ದರೆ ನಾವು ಬದುಕುವುದಕ್ಕೆ ಸಾಧ್ಯವೇ ಇಲ್ಲ ಎಂದು ಗೋಗರೆದರೆ ಕುಮಾರಸ್ವಾಮಿಯವರು ರಾಜೀನಾಮೆ ನೀಡಿ ಅಧಿಕಾರ ತ್ಯಾಗ ಮಾಡುತ್ತಿದ್ದರು ಎಂದು ಮಾರ್ಮಿಕವಾಗಿ ನುಡಿದರು.

ಕೆಲ ದೃಶ್ಯ ಮಾಧ್ಯಮಗಳು ಸರಕಾರದ ವಿರುದ್ಧ ಸುಳ್ಳುಸುದ್ದಿ ಹಬ್ಬಿಸುವ ಕೆಲಸ ಮಾಡುತ್ತಿವೆ. ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಕೆಲ ಸಚಿವರು, ಶಾಸಕರು ಅನಿವಾರ್ಯ ಕಾರಣಗಳಿಂದ ಅಧಿವೇಶನಕ್ಕೆ ಬಾರದಿದ್ದರೆ ಅವರೆಲ್ಲಾ ಬಿಜೆಪಿಗೆ ಹೋಗಲಿದ್ದಾರೆ ಎಂದು ಊಹಪೋಹ ವರದಿ ಮಾಡಲಾಗುತ್ತಿದೆ. ಒಂದು ವೇಳೆ ಮುಖ್ಯಮಂತ್ರಿಗಳೇ ಸದನಕ್ಕೆ ಹಾಜರಾಗಿರದಿದ್ದರೆ ಅವರ ಬಗ್ಗೆ ಆ ಮಾಧ್ಯಮಗಳು ಏನು ಹೇಳುತ್ತಿದ್ದವು ಎಂದು ವ್ಯಂಗ್ಯವಾಡಿದರು.

ಮುಖ್ಯಮಂತ್ರಿ ಕುಮಾರಸ್ವಾಮಿಯವರು ನನ್ನನ್ನು ಮಂತ್ರಿ ಮಾಡಬೇಕೆಂಬ ಆಸೆ ಹೊಂದಿದ್ದರೂ ಅದು ಕೈಗೂಡುವ ಭರವಸೆ ಇರಲಿಲ್ಲ. ಏಕೆಂದರೆ ಒಕ್ಕಲಿಗ ಏಳು ಶಾಸಕರಿಗೆ ಅಂದು ಸಚಿವ ಸ್ಥಾನ ಕಲ್ಪಿಸಲಾಗಿದ್ದರಿಂದ ನಾನು ಮಂತ್ರಿಯಾಗುವುದು ಅಸಾಧ್ಯವೆನಿಸಿತ್ತು. ಅಂದು ಮುಖ್ಯಮಂತ್ರಿಗಳ ಮನಸ್ಥಿತಿ ಅರಿತು ನನಗೆ ಸಚಿವ ಸ್ಥಾನ ಬೇಡ ಎಂದು ಕುಮಾರಸ್ವಾಮಿಯವರಲ್ಲಿ ವಿನಂತಿ ಮಾಡಿದೆ. ಆದರೆ ಅನಿತಮ್ಮ ಅವರು ಮಂತ್ರಿ ಮಾಡಲೇಬೆಂಕೆಂದು ಪತಿಯವರಲ್ಲಿ ಬಲವಾದ ಬೇಡಿಕೆಯಿಟ್ಟಿದ್ದರಿಂದ ನಾನು ಸಚಿವನಾದೆ ಎಂದು ಹೇಳಿದರು.

ಗಾವಡಗೆರೆ ಮಠಾಧೀಶ ಶ್ರೀ ನಟರಾಜ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಉಪವಿಭಾಗಧಿಕಾರಿ ವೀಣಾ, ತಹಸೀಲ್ದಾರ್ ಮಂಜುಳಾ, ಉಪತಹಸೀಲ್ದಾರ್ ಯಧುಗಿರೀಶ್, ನವನಗರ ಕೋ ಆಪರೆಟೀವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ತಾ.ಜೆಡಿಎಸ್ ಅಧ್ಯಕ್ಷ ಚಂದ್ರಶೆಖರ್, ವಕ್ತಾರ ಕೆ.ಎಲ್.ರಮೇಶ್, ಜಿ.ಪಂ ಸದಸ್ಯೆ ವೀಣಾಕೀರ್ತಿ, ಎಪಿಎಂಸಿ ಮಾಜಿ ನಿರ್ದೇಶಕ ಬಿ.ಆರ್.ಕುಚೇಲ್, ತಾ.ಪಂ ಮಾಜಿ ಅಧ್ಯಕ್ಷ ಶಶಿಕಲಾ ರಮೇಶ್, ಇಒ ಲಕ್ಷ್ಮೀಮೋಹನ್, ಮುಖಂಡರಾದ ಎಸ್.ಟಿ.ಕೀರ್ತಿ, ಎಸ್.ಆರ್.ಪ್ರಕಾಶ್, ಹೆಬ್ಬಾಳುಸುಜಯ್, ಮೂ.ರಾ. ಹರ್ಷಕುಮಾರ್, ಪ್ರಶಾಂತ್, ಮಂಜೇಗೌಡ, ದಮ್ಮನಹಳ್ಳಿ ಜಗದೀಶ್ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ನಾನಾ ಇಲಾಖೆಯ ಅಧಿಕಾರಿಗಳು ಇದ್ದರು.

Translate »