ಕುಕ್ಕರಹಳ್ಳಿ ಕೆರೆಯಲ್ಲಿ ಮೀನುಗಾರಿಕೆ:  ವಲಸೆ ಪಕ್ಷಿಗಳಿಗೆ ಕಂಟಕ
ಮೈಸೂರು

ಕುಕ್ಕರಹಳ್ಳಿ ಕೆರೆಯಲ್ಲಿ ಮೀನುಗಾರಿಕೆ: ವಲಸೆ ಪಕ್ಷಿಗಳಿಗೆ ಕಂಟಕ

February 8, 2019

ಮೈಸೂರು: ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಕರ್ನಾಟಕ ಮೀನು ಗಾರಿಕಾ ಮಹಾಮಂಡಲದ ವತಿಯಿಂದ ಮೀನುಗಾರಿಕೆ ಆರಂಭವಾಗಿರುವುದರಿಂದ ವಲಸೆ ಪಕ್ಷಿಗಳು ಆತಂಕಕ್ಕೆ ಒಳಗಾಗಿದ್ದು, ತಕ್ಷಣವೇ ಮೀನುಗಾರಿಕೆ ನಿಲ್ಲಿಸುವಂತೆ ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.

ಕುಕ್ಕರಹಳ್ಳಿ ಕೆರೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ತೆಪ್ಪ ಬಳಸಿ ಮೀನುಗಾರಿಕೆ ನಡೆಸಿ ದಿನಕ್ಕೆ ನೂರಾರು ಕೆಜಿ ಮೀನುಗಳನ್ನು ಹಿಡಿದು ಮಾರಾಟ ಮಾಡಲಾಗುತ್ತಿದೆ. ಇದು ದೇಶ-ವಿದೇಶದ ಅಪರೂಪದ ಪಕ್ಷಿಗಳು ವಲಸೆ ಬರುವ ಕಾಲವಾಗಿದೆ. ಮೀನು ಗಾರಿಕೆಯಿಂದ ವಲಸೆ ಪಕ್ಷಿಗಳು ಬೆದರುತ್ತವೆ. ವಲಸೆ ಪಕ್ಷಿಗಳು ಸಂತಾನೋತ್ಪತ್ತಿ ಮುಗಿಯು ವವರೆಗೂ ಮೀನು ಹಿಡಿಯಬಾರದು ಎಂಬ ಕೂಗು ಪರಿಸರ ಪ್ರೇಮಿಗಳಿಂದ ಕೇಳಿ ಬರುತ್ತಿದೆ.

ಹಲವು ವರ್ಷದಿಂದ ನಡೆದು ಬಂದಿದೆ: ಮೀನುಗಾರಿಕೆಗೆ ಅನುಮತಿ ನೀಡಿರುವುದಕ್ಕೆ ಸಂಬಂಧಿಸಿದಂತೆ ಕುಲಸಚಿವ ಪ್ರೊ.ಆರ್.ರಾಜಣ್ಣ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಕುಕ್ಕರಹಳ್ಳಿ ಕೆರೆ ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಸೇರಿದ್ದರೂ ಮೀನುಗಾರಿಕಾ ಮಹಾಮಂಡಲಕ್ಕೆ ಎಲ್ಲಾ ಕೆರೆಗಳೂ ಒಳಪಡುವಂತೆ ಕುಕ್ಕರಹಳ್ಳಿ ಕೆರೆಯೂ ಸೇರುತ್ತದೆ. ಹಲವು ವರ್ಷಗಳಿಂದ ಕೆರೆಗೆ ಮಹಾಮಂಡಲ ಮೀನು ಮರಿಗಳನ್ನು ಬಿಟ್ಟು, ಗುತ್ತಿಗೆ ಪಡೆದು ಮೀನುಗಾರಿಕೆಯನ್ನು ನಡೆಸುತ್ತಾ ಬಂದಿದೆ. ಯಾವ ವರ್ಷವೂ ಮೀನುಗಾರಿಕೆಯಿಂದ ಪಕ್ಷಿಗಳಿಗೆ ತೊಂದರೆಯಾಗಿಲ್ಲ. ಈ ವರ್ಷ ಮೈಸೂರು ವಿವಿಗೆ ಮೀನುಗಾರಿಕಾ ಮಹಾಮಂಡಲವು ಮೀನುಗಾರಿಕೆ 7.25 ಲಕ್ಷ ರೂ. ನೀಡಲಿದೆ. ಕಳೆದ ವರ್ಷ 6 ಲಕ್ಷ ರೂ. ನೀಡಿತ್ತು ಎಂದರು.

ಮೀನುಗಾರಿಕೆ ನಡೆಸುತ್ತಿರುವುದು ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಯಲ್ಲ. ಸರ್ಕಾರಿ ಸ್ವಾಮ್ಯದ ಸಂಸ್ಥೆ. ಕೆಲವರು ಕೆರೆ ಅಭಿವೃದ್ಧಿ ಮಾಡಿದರೂ ಅಪಸ್ವರ ಎತ್ತುತ್ತಾರೆ. ಇದೀಗ ಮೀನುಗಾರಿಕೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದರು.

ಪರಿಶೀಲಿಸುತ್ತೇನೆ: ಡಿಸಿಎಫ್ ಡಾ.ಪ್ರಶಾಂತ್ ಕುಮಾರ್ ಮಾತನಾಡಿ, ಕುಕ್ಕರಹಳ್ಳಿ ಕೆರೆಯಲ್ಲಿ ಮೀನುಗಾರಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆಯುತ್ತೇನೆ. ಅಲ್ಲದೆ ಕೆರೆಗೆ ಯಾವ ವಲಸೆ ಪಕ್ಷಿಗಳು ಬಂದಿವೆ ಎನ್ನುವ ಮಾಹಿತಿ ಪಡೆಯುತ್ತೇನೆ. ಮೀನು ಗಾರಿಕೆಯಿಂದ ಪಕ್ಷಿಗಳಿಗೆ ತೊಂದರೆಯಾಗುವುದು ಕಂಡು ಬಂದರೆ ಮೈಸೂರು ವಿಶ್ವವಿದ್ಯಾ ನಿಲಯ ಹಾಗೂ ಮೀನುಗಾರಿಕಾ ಮಹಾಮಂಡಲದ ಅಧಿಕಾರಿಗಳೊಂದಿಗೆ ಮಾತನಾಡಿ, ಮೀನುಗಾರಿಕೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುಂತೆ ಪತ್ರ ಬರೆಯುವುದಾಗಿ ತಿಳಿಸಿದರು.
ವಲಸೆ ಹಕ್ಕಿಗಳು: ಮೈಸೂರಿನ ಲಿಂಗಾಂಬುಧಿ ಕೆರೆಗೆ 500ಕ್ಕೂ ಹೆಚ್ಚು ವಲಸೆ ಹಕ್ಕಿಗಳು ಬರುತ್ತವೆ. ಕೆಲವು ವರ್ಷಗಳಿಂದ ವಲಸೆ ಹಕ್ಕಿಗಳು ಕುಕ್ಕರಹಳ್ಳಿಕೆರೆಗೂ ಆಗಮಿಸಿ ಗೂಡು ಕಟ್ಟಿ ಸಂತಾನೋತ್ಪತ್ತಿ ಮಾಡುತ್ತಿವೆ. ಕೆರೆಯಲ್ಲಿರುವ ದ್ವೀಪದಲ್ಲಿ ವಲಸೆ ಹಕ್ಕಿಗಳಿರುವುದರಿಂದ ಮೀನುಗಾರಿಕೆ ಬಲೆ ಬೀಸುವುದರಿಂದ ಹಾಗೂ ತೆಪ್ಪ ದ್ವೀಪದ ಬಳಿ ಬರುವುದರಿಂದ ಅವುಗಳಿಗೆ ತೊಂದರೆಯಾಗುತ್ತಿದೆ. ಕೂಡಲೆ ಮೀನುಗಾರಿಕೆ ನಿಲ್ಲಿಸಿ ವಲಸೆ ಪಕ್ಷಿಗಳ ಹಿತ ಕಾಪಾಡಬೇಕೆಂದು ಪಕ್ಷಿ ಪ್ರೇಮಿಗಳು ಒತ್ತಾಯಿಸಿದ್ದಾರೆ.

Translate »