ಮೈಸೂರು: ಕುವೆಂಪು ಸಾಹಿತ್ಯ ಭಾರತದ ಸಂವಿಧಾನದ ಆಶಯ ಗಳನ್ನು ಎತ್ತಿ ಹಿಡಿದಿದ್ದು, ಪ್ರಸ್ತುತ ನಮ್ಮ ಸಮಾಜದ ಅನೇಕ ಸಂಘರ್ಷಗಳಿಗೆ ಪರಿ ಹಾರ ಕಂಡುಕೊಳ್ಳಬೇಕಾದರೆ ಕುವೆಂಪು ಸಂದೇಶಾಮೃತ ಅತ್ಯಗತ್ಯ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನ ಕಲಾಮಂದಿರದಲ್ಲಿ ಜನ ಚೇತನ ಟ್ರಸ್ಟ್ ಮತ್ತು ಗ್ರಾಮೀಣ ಟ್ರಸ್ಟ್ ಜಂಟಿ ಆಶ್ರಯದಲ್ಲಿ `ಕಾಲಕ್ಕೆ ಕನ್ನಡಿ-ವಿಶ್ವಕವಿ ಕುವೆಂಪು’ ಶೀರ್ಷಿಕೆಯಡಿ ಬುಧ ವಾರ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರಕವಿ ಕುವೆಂಪು ಸಾಹಿತ್ಯೋತ್ಸವ ಉದ್ಘಾಟಿಸಿ, ಇದೇ ವೇಳೆ `ನೇಗಿಲ ಹಾಡು’ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ದೇಶದ ಸಂವಿಧಾನದ ಆಶಯಗಳನ್ನು ಕುವೆಂಪು ಸಾಹಿತ್ಯ ಪೋಷಿಸಿದ್ದು, ಸಮು ದಾಯಗಳನ್ನು ಗೊಡ್ಡು ಸಂಪ್ರದಾಯ ಗಳಿಂದ ಪಾರು ಮಾಡುವ ಪ್ರೇರಕಶಕ್ತಿ ಅವರ ಸಾಹಿತ್ಯದಲ್ಲಿದೆ. ಜಾತಿ-ಮತಗಳು ಅಜ್ಞಾನದ ಕೊನೆಯ ಕೋಟೆಗಳು, ಅವು ಗಳನ್ನು ದಾಟಿ ನೆಲಕ್ಕುರಳಿಸಬೇಕೆಂದು ಕುವೆಂಪು ಸಂದೇಶ ನೀಡಿದ್ದಾರೆ. ಇಂದಿನ ಸಮಾರಂಭದಲ್ಲಿ `ನೇಗಿಲ ಹಾಡು’ ಪತ್ರಿಕೆ ಬಿಡುಗಡೆಗೊಂಡಿದ್ದು, ಕುವೆಂಪು ರಚನೆಯ `ನೇಗಿಲ ಯೋಗಿ’ ಪದ್ಯ ರೈತ ಗೀತೆಯಾಗಿ ಅನುಷ್ಠಾನಗೊಂಡಿದೆ. ಅವರ ಸಾಹಿತ್ಯದ ನೇಗಿಲು ಸಾಮಾಜಿಕ ಅನಿಷ್ಟಗಳನ್ನು ನಿರ್ಮೂಲನೆ ಮಾಡಬಲ್ಲದು. ಹೀಗಾಗಿ ಅವರ ಸಾಹಿತ್ಯ ನೇಗಿಲು ಹೌದು, ನೊಗವೂ ಹೌದು ಎಂದು ನುಡಿದರು.
ಸಮಾಜ ಇಂದು ಅನೇಕ ರೀತಿಯಲ್ಲಿ ಮೃತಪ್ರಾಯಕ್ಕೆ ಸಿಲುಕಿದ್ದು, ಅದಕ್ಕೆ ಜೀವ ದಾನ ನೀಡಲು ಕುವೆಂಪು ಸಾಹಿತ್ಯದ ಸಂದೇಶಾಮೃತ ಅಗತ್ಯವಾಗಿದೆ. ಈ ಹಿನ್ನೆಲೆ ಯಲ್ಲಿ ಕುವೆಂಪು ಸಾಹಿತ್ಯದ ಸಂದೇಶ ಸುಧೆ ಪ್ರತಿ ಮನೆ-ಮನಕ್ಕೆ ತಲುಪಬೇಕಿದೆ. ಅವರ ಕಟ್ಟಕಡೆಯ ಸಂದೇಶವಾದ `ವಿಶ್ವ ಮಾನವ ಸಂದೇಶ’ ಅನುಷ್ಠಾನಕ್ಕೆ ತರುವ ಪ್ರಯತ್ನ ಇಂದು ಅಗತ್ಯವಾಗಿದೆ. ವಿಶ್ವ ಮಾನವ ಸಂದೇಶದ ತಮ್ಮ ಜೀವಿತಾವಧಿ ಯಲ್ಲೇ ಈಡೇರುತ್ತದೆ ಎಂಬ ಆಶಾಭಾವನೆ ಅವರಲ್ಲಿ ಇರಲಿಲ್ಲ. 500 ವರ್ಷಗಳ ಬಳಿಕವಾದರೂ ಅದು ಅನುಷ್ಠಾನಗೊಳ್ಳ ಬೇಕೆಂಬ ಭಾವನೆ ಅವರಲ್ಲಿತ್ತು. ಹೀಗಾಗಿ ಆ ಸಂದೇಶ ಅನುಷ್ಠಾನಕ್ಕೆ ಪ್ರಯತ್ನಗಳು ನಡೆಯಬೇಕಿದೆ ಎಂದು ತಿಳಿಸಿದರು.
ಕುವೆಂಪು ಅವರ ವ್ಯಕ್ತಿತ್ವ ಹಾಗೂ ಸಾಹಿತ್ಯ ವರ್ತಮಾನಕ್ಕೆ ಪ್ರಸ್ತುತವಾಗಿದ್ದು, ಕರ್ನಾಟಕ ಮತ್ತು ಕನ್ನಡದ ಬಗ್ಗೆ ಅರಿಯ ಬೇಕೆಂದರೆ ಕುವೆಂಪು ಅವರನ್ನು ಅಧ್ಯ ಯನ ಮಾಡಬೇಕು. ಪ್ರಕೃತಿ, ಸಂಸ್ಕøತಿ ಹಾಗೂ ಸಭ್ಯತೆಯ ಸಮನ್ವಯ ಮೂರ್ತಿಯಾಗಿದ್ದ ಕುವೆಂಪು ಕರ್ನಾಟಕದ ಸಾಂಸ್ಕøತಿಕ ನಾಯಕರು ಎಂದು ಬಣ್ಣಿಸಿದರು.
ನೇಗಿಲ ಹಾಡು ಪತ್ರಿಕೆ ಕುರಿತು ಮಾತ ನಾಡಿದ ಮೈಸೂರು ವಿವಿ ಗಾಂಧಿ ಅಧ್ಯ ಯನ ಕೇಂದ್ರದ ನಿರ್ದೇಶಕ ಪ್ರೊ.ಎಂ. ಎಸ್.ಶೇಖರ್, 75 ಪುಟಗಳಲ್ಲಿ ಹೊರ ತಂದಿರುವ ನೇಗಿಲ ಹಾಡು ಪತ್ರಿಕೆಯಲ್ಲಿ ಯುವ ತಲೆಮಾರು ಹಾಗೂ ಕನ್ನಡ ಅಧ್ಯಾಪಕರು ಸೇರಿದಂತೆ ಅನೇಕರು ಕುವೆಂಪು ಸಾಹಿತ್ಯದ ಮೇಲೆ ಬೆಳಕು ಚೆಲ್ಲಿದ್ದಾರೆ. ಕುವೆಂಪು ಅವರ ಬಾಲ್ಯ ದಿಂದ ಹಿಡಿದು ಅಂತಿಮ ದಿನಗಳವರೆ ಗಿನ ಹಲವು ಭಾವಚಿತ್ರಗಳನ್ನು ಕಲೆ ಹಾಕಿ ಪ್ರಕಟಿಸಲಾಗಿದೆ ಎಂದರು.
ಕುವೆಂಪು ಅವರನ್ನು ಗ್ರಹಿಸಬೇಕೆಂದರೆ ಅದಕ್ಕೆ ನಮ್ಮಲ್ಲಿ ತಾಳ್ಮೆ ಇರಬೇಕು. ಅವರು ಸೃಷ್ಟಿಸಿದ ಸಾಹಿತ್ಯ ಹಾಗೂ ಅವರ ಬದುಕು ಒಂದು ದೊಡ್ಡ ತಪಸ್ಸು. ಸರ್ವ ರನ್ನು ಅತ್ಯಂತ ಸಹನೆಯಿಂದ ನೋಡುವ ಮಹಾಶಕ್ತಿ ಕುವೆಂಪು. ಅವರು ತಮ್ಮ `ರಾಮಾಯಣ ದರ್ಶನಂ’ನಲ್ಲಿ ರಾಮ ನೊಳಗೆ ರಾವಣನ, ರಾವಣನಲ್ಲಿ ರಾಮ ನನ್ನು ಕಾಣುವ ಪ್ರಯತ್ನ ಮಾಡಿದ್ದಾರೆ. ರಾಮನನ್ನು ವಿಮರ್ಶೆಗೊಳಪಡಿಸಿದ ಶ್ರೇಷ್ಠ ಚಿಂತಕ ಕುವೆಂಪು. ಅವರು ಜೀವ ಜಗತ್ತಿನ ಮಹಾ ವಿವೇಕ ಎಂದು ಬಣ್ಣಿಸಿದರು.
ಇದೇ ವೇಳೆ ಕುವೆಂಪು ಅವರ ಸಮಗ್ರ ಸಾಹಿತ್ಯ ಕುರಿತಾದ ವೈಚಾರಿಕ ಲೇಖನ ಗಳನ್ನು ಒಳಗೊಂಡ `ಕಾಲಕ್ಕೆ ಕನ್ನಡಿ-ವಿಶ್ವಕವಿ ಕುವೆಂಪು’ ಪುಸ್ತಕವನ್ನು ಕುವೆಂಪು ವಿವಿ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ ಬಿಡುಗಡೆಗೊಳಿ ಸಿದರು. ಇದಕ್ಕೂ ಮುನ್ನ ಗಾಯಕಿ ಶ್ವೇತಾ ಮಡಪ್ಪಾಡಿ ಕುವೆಂಪು ರಚಿತ ಗೀತೆಗಳನ್ನು ಸಾದರಪಡಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಕುವೆಂಪು ರಚಿತ ಕವನಗಳ ನೃತ್ಯ ರೂಪಕವನ್ನು ಭರತನಾಟ್ಯ ಕಲಾವಿದೆ ಡಾ.ಕೃಪಾಫಡ್ಕೆ ಮತ್ತು ತಂಡ ಪ್ರದರ್ಶಿಸಿತು. ಬಳಿಕ ಮೈಸೂರು ವಿವಿ ಲಲಿತ ಕಲಾ ಕಾಲೇಜು ವಿದ್ಯಾರ್ಥಿಗಳು ಕುವೆಂಪು ರಚಿತ `ಶೂದ್ರ ತಪಸ್ವಿ’ ನಾಟಕ ಸಾದರಪಡಿಸಿದರು. ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ.ಎಸ್.ತುಕಾರಾಮ್, ಜನಚೇತನ ಟ್ರಸ್ಟ್ ಅಧ್ಯಕ್ಷ ಪ್ರಸನ್ನ ಎನ್.ಗೌಡ, ನೇಗಿಲ ಹಾಡು ಪತ್ರಿಕೆ ಸಹ ಸಂಪಾದಕ ಡಾ.ಹೊಂಬಯ್ಯ ಹೊನ್ನಲಗೆರೆ ಮತ್ತಿತರರು ಹಾಜರಿದ್ದರು.