ಮೈಸೂರು: ಸರ್ಕಾರಿ ಭೂಮಿ ಹಾಗೂ ಕೆರೆ ಒತ್ತುವರಿ ವಿರುದ್ಧ ಜಿಲ್ಲಾಡಳಿತ ಸಮರ ಮುಂದುವರೆಸಿದ್ದು, ಬುಧವಾರ ಮೈಸೂರು ತಾಲೂಕು ಜಯ ಪುರ ಹೋಬಳಿ ಮದ್ದೂರು ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ವಡವನ ಕಟ್ಟೆಯ ಒತ್ತುವರಿ ತೆರವು ಗೊಳಿಸಿ, ಕೆರೆ ಭೂಮಿಯನ್ನು ರಕ್ಷಿಸಿದರು.
ಮೈಸೂರು ತಹಶೀಲ್ದಾರ್ ಟಿ.ರಮೇಶ್ ಬಾಬು ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ ಬಿಗಿ ಪೊಲೀಸ್ ಬಂದೋಬಸ್ತ್‍ನಲ್ಲಿ ಕಾರ್ಯಾ ಚರಣೆ ನಡೆಸಿ, ವಡವನ ಕಟ್ಟೆಗೆ ಸೇರಿದ ಭೂಮಿಯನ್ನು 15 ಮಂದಿ ರೈತರು ಒತ್ತು ವರಿ ಮಾಡಿಕೊಂಡಿದ್ದ 25 ಎಕರೆ ಕೆರೆ ಜಾಗ ವನ್ನು ತೆರವುಗೊಳಿಸಿ, ಸಣ್ಣ ನೀರಾವರಿ ಇಲಾಖೆ ಸುಪರ್ದಿಗೆ ನೀಡಿದರು.
ಮದ್ದೂರು ಮತ್ತು ಕಲ್ಲಹಳ್ಳಿ ಮಧ್ಯೆ ಇರುವ ಈ ವಡವನಕಟ್ಟೆಯನ್ನು 1960ರಲ್ಲಿ 121 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿತ್ತು. ಆದರೆ ಕೆರೆ ಸುತ್ತಲಿನ ಹಲವು ರೈತರು, ತಲಾ ಒಂದೆರಡು ಎಕರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ತೋಟ, ಜಮೀನು ಮಾಡಿ ಕೊಂಡಿದ್ದರು. ಇದರಿಂದ ಕೆರೆಯ ವ್ಯಾಪ್ತಿ ಕಡಿಮೆಯಾಗುವುದರೊಂದಿಗೆ ನೀರು ಶೇಖರಣೆಯ ಪ್ರಮಾಣವೂ ಕ್ಷೀಣಿಸಿತ್ತು. ಕೆರೆ ಒತ್ತುವರಿಯಾಗಿರುವ ಬಗ್ಗೆ ಗ್ರಾಮಸ್ಥ ರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಮೂರು ವರ್ಷಗಳ ಹಿಂದೆ ಒತ್ತುವರಿ ತೆರವು ಕಾರ್ಯಾಚರಣೆ ನಡೆ ಸಲು ಪ್ರಯತ್ನಿಸಲಾಯಿತು. ಆದರೆ ಅಂದು ಒತ್ತುವರಿ ಮಾಡಿಕೊಂಡಿದ್ದವರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ತೆರವು ಕಾರ್ಯಾಚರಣೆ ಅರ್ಧಕ್ಕೆ ಸ್ಥಗಿತ ಗೊಂಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಬಿಗಿ ಪೊಲೀಸ್ ಬಂದೋಬಸ್ತ್‍ನಲ್ಲಿ ವ್ಯವ ಸ್ಥಿತವಾಗಿ ಕಾರ್ಯಾಚರಣೆ ಆರಂಭಿಸಲಾಯಿತು. ಮೂರ್ನಾಲ್ಕು ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ, ಒತ್ತುವರಿ ಯಾಗಿದ್ದ ಪ್ರದೇಶವನ್ನು ಸ್ವಾಧೀನಕ್ಕೆ ಪಡೆಯಲಾಯಿತು.
ಕಾರ್ಯಾಚರಣೆಯಲ್ಲಿ ಉಪ ತಹಸೀ ಲ್ದಾರ್ ಕುಬೇರ, ಕಂದಾಯ ನಿರೀಕ್ಷಕ ಲಿಂಗಪ್ಪ, ಗ್ರಾಮ ಲೆಕ್ಕಿಗ ಲೋಕೇಶ್, ಸರ್ವೆಯರ್ ಕುಮಾರಸ್ವಾಮಿ, ಜಯಪುರ ಠಾಣೆ ಸಬ್ ಇನ್ಸ್‍ಪೆಕ್ಟರ್ ಕೃಷ್ಣಮೂರ್ತಿ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.