ಮೈಸೂರು: ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಮೈಸೂರಿನ ರಂಗ ಚಾವಡಿ ಜಂಟಿ ಆಶ್ರಯದಲ್ಲಿ ಜ.24 ಮತ್ತು 25ರಂದು `ರಂಗಸಂಭ್ರಮ-2019’ ಶೀರ್ಷಿಕೆಯಡಿ ಪೌರಾಣಿಕ ನಾಟಕೋತ್ಸವ ಏರ್ಪಡಿಸಲಾಗಿದೆ ಎಂದು ರಂಗ ಚಾವಡಿ ಪ್ರಧಾನ ಕಾರ್ಯದರ್ಶಿ ಸಂಗಾಪುರ ನಾಗರಾಜ್ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.23ರಿಂದ 25ರವರೆಗೆ ನಾಟಕೋತ್ಸವ ನಡೆಸಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದರೆ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾದ ಕಾರಣ ಜ.24 ಮತ್ತು 25ಕ್ಕೆ ಮುಂದೂಡಲಾಗಿದೆ ಎಂದು ಹೇಳಿದರು.
ಮೈಸೂರಿನ ಕಲಾಮಂದಿರದಲ್ಲಿ ನಾಟಕ ಪ್ರದರ್ಶನಗಳು ನಡೆಯಲಿದ್ದು, ಎಲ್ಲಾ ನಾಟಕಗಳ ಪ್ರದರ್ಶನದ ಅವಧಿ 3ರಿಂದ ಮೂರೂವರೆ ಗಂಟೆ ಇದೆ. ಪ್ರವೇಶ ಉಚಿತವಿದ್ದು, ರಂಗಾಸಕ್ತರು ಇದನ್ನು ಸದುಪಯೋಗ ಮಾಡಿಕೊಳ್ಳಬೇಕು. ಜ.24ರಂದು ಸಂಜೆ 6ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಹಿರಿಯ ರಂಗತಜ್ಞ ಹಾಗೂ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕøತ ನಾಡೋಜ ಬೆಳಗಲ್ಲು ವೀರಣ್ಣ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಹೊನ್ನನಾಯಕ, ಗಣೇಶ್ ಅಮಿನಗಡ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ ಭಾಗವಹಿಸಲಿದ್ದು, ಇದೇ ವೇಳೆ ನಾಡೋಜ ಬೆಳಗಲ್ಲು ವೀರಣ್ಣ ಹಾಗೂ ಕೆ.ವಿ.ಶಂಕರೇ ಗೌಡ ಪ್ರಶಸ್ತಿ ಪುರಸ್ಕøತ ಹೆಚ್.ಎಸ್.ಗೋವಿಂದೇಗೌಡ ಅವರನ್ನು ಸನ್ಮಾನಿಸಲಾಗುವುದು. ಬಳಿಕ ಮಂಡ್ಯದ ಸಂಭ್ರಮ ಮಹಿಳಾ ಮಂಡಳಿ ವತಿಯಿಂದ ಪಾದುಕಾ ಪಟ್ಟಾಭಿಷೇಕ’ ನಾಟಕ ಪ್ರದರ್ಶನವಿದ್ದು, ಇದಕ್ಕೂ ಮುನ್ನ ಮಧ್ಯಾಹ್ನ 12ಕ್ಕೆ ಮೈಸೂರಿನ ಶ್ರೀ ರಾಜೇಶ್ವರಿ ವಸ್ತ್ರಾಲಂಕಾರ ರಂಗ ತಂಡದ ವತಿಯಿಂದ
ಕುರುಕ್ಷೇತ್ರ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಜ.25ರಂದು ಸಂಜೆ 6ಕ್ಕೆ ಹಿರಿಯ ರಂಗಕರ್ಮಿ ಪ್ರೊ.ಹೆಚ್.ಎಸ್.ಉಮೇಶ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಅತಿಥಿಯಾಗಿ ಕರ್ನಾಟಕ ನಾಟಕ ಅಕಾಡೆಮಿ ರಿಜಿಸ್ಟ್ರಾರ್ ಡಾ.ಎ.ಸಿ.ಶೈಲಜಾ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಚ.ಸರ್ವಮಂಗಳ ಸೇರಿದಂತೆ ರಂಗಕರ್ಮಿಗಳನ್ನು ಸನ್ಮಾನಿಸಲಾಗುವುದು. ಬಳಿಕ ಬೆಂಗಳೂರಿನ ಕಲಾವಿದರ ಬಳಗದ ವತಿಯಿಂದ `ದಶರಥ’ ನಾಟಕ ಪ್ರದರ್ಶನವಾಗಲಿದೆ ಎಂದು ಹೇಳಿದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಗಣೇಶ್ ಅಮಿನಗಡ, ರಂಗಚಾವಡಿ ಅಧ್ಯಕ್ಷ ಬಿ.ಹುಚ್ಚಯ್ಯ, ಶ್ರೀ ರಾಜೇಶ್ವರಿ ವಸ್ತ್ರಾಲಂಕಾರ ರಂಗತಂಡದ ಬಿ.ಎಂ.ರಾಮಚಂದ್ರ ಗೋಷ್ಠಿಯಲ್ಲಿದ್ದರು.