ಲ್ಯಾಪ್‍ಟಾಪ್, ಮೊಬೈಲ್ ಕದಿಯುತ್ತಿದ್ದ ಅಂತಾರಾಜ್ಯ ಖದೀಮನ ಸೆರೆ
ಮೈಸೂರು

ಲ್ಯಾಪ್‍ಟಾಪ್, ಮೊಬೈಲ್ ಕದಿಯುತ್ತಿದ್ದ ಅಂತಾರಾಜ್ಯ ಖದೀಮನ ಸೆರೆ

December 11, 2018

ಮೈಸೂರು:  ತಮಿಳುನಾಡು ಮತ್ತು ನಗರದ ವಿವಿಧ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಬೆಲೆಬಾಳುವ ಲ್ಯಾಪ್‍ಟಾಪ್ ಮತ್ತು ಮೊಬೈಲ್‍ಗಳನ್ನು ಕಳವು ಮಾಡುತ್ತಿದ್ದ ಅಂತಾರಾಜ್ಯ ಖದೀಮನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಈತನಿಂದ 9 ಲ್ಯಾಪ್‍ಟಾಪ್, 29 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆ ಗ್ರಾಮದ ಲೇಟ್ ಅಬ್ಬಯ್ಯ ಅವರ ಪುತ್ರ, ಮೈಸೂರಿನ ಸಾತಗಳ್ಳಿ 2ನೇ ಹಂತದ ನಿವಾಸಿ ಡಿ.ಎ.ರಂಗಸ್ವಾಮಿ ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಡಿ.7ರಂದು ಸಿಸಿಬಿ ಪೊಲೀಸರು ವಿಶೇಷ ಕಾರ್ಯಾ ಚರಣೆ ನಡೆಸಿ ಮೈಸೂರಿನ ನಿವಾಸದಲ್ಲಿ ಬಂಧಿಸಿದ್ದಾರೆ. ಈತನು ಮೈಸೂರು ಮತ್ತು ತಮಿಳುನಾಡಿನಲ್ಲಿ ವಿದ್ಯಾರ್ಥಿ ಸೋಗಿನಲ್ಲಿ ವಿದ್ಯಾರ್ಥಿ ವಸತಿ ನಿಲಯಗಳಿಗೆ ಭೇಟಿ ನೀಡಿ, ಬೆಲೆಬಾಳುವ ಲ್ಯಾಪ್‍ಟಾಪ್ ಮತ್ತು ಮೊಬೈಲ್‍ಗಳನ್ನು ಕಳ್ಳತನ ಮಾಡಿರುವುದಾಗಿ ಸಿಸಿಬಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ಈ ಪತ್ತೆ ಕಾರ್ಯದಲ್ಲಿ ಸಿಸಿಬಿ ಪೊಲೀಸ್ ಇನ್ಸ್‍ಪೆಕ್ಟರ್ ಆರ್.ಜಗದೀಶ್, ಎಎಸ್‍ಐ ಚಂದ್ರೇಗೌಡ ಮತ್ತು ಸಿಬ್ಬಂದಿಗಳಾದ ಸಿ.ಚಿಕ್ಕಣ್ಣ, ಅಲೆಕ್ಸಾಂಡರ್, ಎಂ.ಆರ್.ಗಣೇಶ್, ಲಕ್ಷ್ಮೀಕಾಂತ್, ರಾಮಸ್ವಾಮಿ ಸೇರಿದಂತೆ ಇತರರಿದ್ದರು.

Translate »