ಭೈರಪ್ಪ ಅಕ್ರಮ ಬಯಲಿಗೆಳೆದು ಕಾನೂನು ಹೋರಾಟ
ಮೈಸೂರು

ಭೈರಪ್ಪ ಅಕ್ರಮ ಬಯಲಿಗೆಳೆದು ಕಾನೂನು ಹೋರಾಟ

December 11, 2018

ಶಾಸಕ ರಾಮದಾಸ್ ವಿರುದ್ಧದ ಆರೋಪ ಸತ್ಯಕ್ಕೆ ದೂರ; ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಸ್ಪಷ್ಪನೆ
ಮೈಸೂರು:  ಜೆ.ಪಿ.ನಗರದ ಅಭಿವೃದ್ಧಿಗೆ ಯಾವುದೇ ಅನುದಾನ ತರದೇ ಕೇವಲ ಸುಳ್ಳು ಪ್ರಚಾರ ಪಡೆಯುತ್ತಿದ್ದಾರೆ ಎಂದು ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಶಾಸಕ ಎಸ್.ಎ.ರಾಮದಾಸ್ ವಿರುದ್ಧ ಮಾಡಿರುವ ಆರೋಪವನ್ನು ಬಿಜೆಪಿ ಮುಖಂಡ, ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಖಂಡಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೈರಪ್ಪ ಮೇಯರ್ ಆಗಿದ್ದ ಅವಧಿಯಲ್ಲಿ ಜೆ.ಪಿ.ನಗರದ ಸಮಸ್ಯೆಗಳನ್ನು ಕಡೆಗಣಿಸಿದ್ದಲ್ಲದೆ, ತಮ್ಮ ಸಮಸ್ಯೆ ಹೇಳಲು ಹೋಗಿದ್ದ ನಾಚನಹಳ್ಳಿ ಪಾಳ್ಯದ ಜನತೆಗೆ ನಿಮ್ಮ ಬೂತ್‍ನಲ್ಲಿ ನನಗೆ ಓಟ್ ಬಿದ್ದಿಲ್ಲಾ ಹೋಗಿ ಎಂದು ಗದರಿಸಿ ಕಳಿಸಿದ್ದರು. ತಮ್ಮಲ್ಲೇ ಇಷ್ಟೆಲ್ಲಾ ಹುಳುಕಿಟ್ಟುಕೊಂಡು ಅನಗತ್ಯವಾಗಿ ಶಾಸಕ ಎಸ್.ಎ.ರಾಮದಾಸ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಜೆ.ಪಿ.ನಗರದ ಬಹಳಷ್ಟು ರಸ್ತೆಗಳಿಗೆ ಡಾಂಬರೀಕರಣವಾಗಿಲ್ಲ. 10 ವರ್ಷದ ಅವಧಿಯಲ್ಲಿ ಚುನಾವಣೆ ಸಂದರ್ಭ ಬಿಟ್ಟರೆ, ಇನ್ನಾವುದೇ ಸಂದರ್ಭದಲ್ಲಿ ಸಾರ್ವ ಜನಿಕರ ಮನೆ ಬಾಗಿಲಿಗೆ ಭೇಟಿ ನೀಡದ ಭೈರಪ್ಪ, ಅಲ್ಲಿನ ಉದ್ಯಾನವನಗಳು ಪಾಳು ಬೀಳುವಂತೆ ಮಾಡಿರುವುದೇ ಅವರ ಸಾಧನೆಯಾಗಿದೆ ಎಂದರು.

ಪ್ರತಿ ಚುನಾವಣೆಯಲ್ಲೂ ಒಂದೊಂದು ಪಕ್ಷಕ್ಕೆ ನಿಷ್ಠೆ ಬದಲಿಸುತ್ತಾ ಬಂದಿದ್ದಾರೆ. ರಾಮದಾಸ್ ಕಸ ವಿಲೇವಾರಿ ಘಟಕಕ್ಕೆ ಸಂಬಂಧಿಸಿದಂತೆ ಉಪವಾಸ ಕುಳಿತಾಗ ಒಮ್ಮೆಯೂ ಸೌಜನ್ಯಕ್ಕಾದರೂ ಭೇಟಿ ನೀಡಲಿಲ್ಲ. ಇದೀಗ ರಾಮದಾಸ್ ವಿರುದ್ಧ ಆರೋಪ ಮಾಡುತ್ತಿ ರುವುದು ಹಾಸ್ಯಾಸ್ಪದವಾಗಿದೆ. ಮುಂದಿನ ದಿನಗಳಲ್ಲಿ ಭೈರಪ್ಪನವರ ಅಕ್ರಮಗಳನ್ನು ಬಯಲಿಗೆಳೆದು, ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ. ಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಎಂ.ಶಾರದಮ್ಮ, ಆರ್.ಶಾಂತಮ್ಮ, ಕೆ.ಆರ್.ಕ್ಷೇತ್ರ ಬಿಜೆಪಿ ಉಪಾಧ್ಯಕ್ಷ ವಡಿವೇಲು, ಎಸ್.ಸಿ.ಮೋರ್ಚಾ ಅಧ್ಯಕ್ಷ ಸಿ.ಈಶ್ವರ್ ಉಪಸ್ಥಿತರಿದ್ದರು.

Translate »