14ನೇ ವಾರ್ಡ್‍ನಲ್ಲಿ ಶಾಸಕ ಎಸ್.ಎ.ರಾಮದಾಸ್ ಪಾದಯಾತ್ರೆ
ಮೈಸೂರು

14ನೇ ವಾರ್ಡ್‍ನಲ್ಲಿ ಶಾಸಕ ಎಸ್.ಎ.ರಾಮದಾಸ್ ಪಾದಯಾತ್ರೆ

June 25, 2018

ಮೈಸೂರು:  ಮೈಸೂರಿನ ಕೆಆರ್ ಕ್ಷೇತ್ರ ವ್ಯಾಪ್ತಿಯ 14ನೇ ವಾರ್ಡಿನಲ್ಲಿ ಕ್ಷೇತ್ರದ ಶಾಸಕರೂ ಆದ ಮಾಜಿ ಸಚಿವ ಎಸ್.ಎ.ರಾಮದಾಸ್ ಶನಿವಾರ ಪಾದಯಾತ್ರೆ ನಡೆಸಿ, ನಾಗರಿಕರ ಕುಂದು-ಕೊರತೆ ಆಲಿಸಿದರು.

ವಾರ್ಡ್ ವ್ಯಾಪ್ತಿಯ ಮಧುವನ ಬಡಾವಣೆಯ ಬೀದಿ ದೀಪ ನಿರ್ವಹಣೆ, ಕುಡಿಯುವ ನೀರು ಸರಬರಾಜು ಹಾಗೂ ನಿವೇಶನಗಳ ಸಂಬಂಧ ಕೇಳಿ ಬಂದ ಸಮಸ್ಯೆಗಳನ್ನು ಆಲಿಸಿದ ಶಾಸಕರು, ನಿಗದಿತ ಅವಧಿಯೊಳಗೆ ಸಮಸ್ಯೆಗಳನ್ನು ಪರಿಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಧುವನ ಬಡಾವಣೆಯ ಬೀದಿದೀಪಗಳ ನಿರ್ವಹಣಾ ವೆಚ್ಚವನ್ನು ನಿವಾಸಿಗಳಿಂದ ಸಂಗ್ರಹಿಸದೇ ಚೆಸ್ಕಾಂನಿಂದಲೇ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜೊತೆಗೆ ವಾರ್ಡಿನ ಉದ್ಯಾನವನದಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಕಾರಣ ಮದ್ಯಪಾನ ಸೇರಿದಂತೆ ಅನೈತಿಕ ಚುಟುವಟಿಕೆ ನಡೆಯುತ್ತಿರುವ ಬಗ್ಗೆ ನಾಗರಿಕರು ಶಾಸಕರ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಶಾಸಕರು, ವಿದ್ಯುತ್ ಸಂಪರ್ಕ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಎರಡು ದಿನಕ್ಕೊಮ್ಮೆ ನೀರು ಬರುತ್ತಿರುವ ಬಗ್ಗೆ ನಾಗರಿಕರು ಶಾಸಕರ ಗಮನಕ್ಕೆ ತಂದಾಗ, ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಪ್ರತಿದಿನ ನೀರು ಒದಗಿಸಲು ಕ್ರಮ ಕೈಗೊಳ್ಳಲು ವಾರದ ಗಡುವು ನೀಡಿದರು. ಅಲ್ಲದೆ, ನಾಗರಿಕರ ಕೋರಿಕೆ ಮೇರೆಗೆ ಇಲ್ಲಿನ ನಿವೇಶನಗಳಿಗೆ ಸಂಬಂಧಿಸಿದಂತೆ ಉದ್ಭವಿಸಿರುವ ತಾಂತ್ರಿಕ ದೋಷಗಳನ್ನು ಸರಿಪಡಿಸಲು ಅಧಿಕಾರಿಗಳಿಗೆ ತಿಳಿಸಿದರು.

ಮಧುವನ ಬಡಾವಣೆ ಮತ್ತು ಅರವಿಂದನಗರದಲ್ಲಿ ಇರುವ ಎರಡು ಉದ್ಯಾನವನಗಳಲ್ಲಿ ಯೋಗಾಭ್ಯಾಸಕ್ಕಾಗಿ ವೇದಿಕೆ ನಿರ್ಮಿಸಲು ಅಗತ್ಯ ಕ್ರಮ ವಹಿಸಲು ತಿಳಿಸಿದ ಶಾಸಕರು, ನಂತರ ವಾರ್ಡ್ ವ್ಯಾಪ್ತಿಯ ಪ್ರೀತಿ ಬಡಾವಣೆ, ಸೂರ್ಯ ಬಡಾವಣೆ ಸೇರಿದಂತೆ ಇನ್ನಿತರ ಸ್ಥಳಗಳ ಒಳಚರಂಡಿ ವ್ಯವಸ್ಥೆಯನ್ನು ಪರಿಶೀಲಿಸಿದರು. ಬಳಿಕ ಒಳಚರಂಡಿಯಲ್ಲಿ ಉಂಟಾಗಿರುವ ಅಡಚಣೆಗಳನ್ನು ಸರಿಪಡಿಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗುತ್ತಿರುವ ಬಗ್ಗೆ ಪರಿಶೀಲಿಸಿದ ಶಾಸಕರು, ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸಿ, ಮಳೆ ನೀರು ಸಮರ್ಪಕವಾಗಿ ಚರಂಡಿಯಲ್ಲಿ ಹೋಗುವಂತೆ ವ್ಯವಸ್ಥೆ ಕೈಗೊಳ್ಳಲು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.

1 ಕೋಟಿ ವೆಚ್ಚದಲ್ಲಿ ಉದ್ಯಾನ ನಿರ್ಮಾಣ: ಮೈಸೂರಿನ ಕೆಆರ್ ಕ್ಷೇತ್ರ ವ್ಯಾಪ್ತಿಯ ಅರವಿಂದನಗರದಲ್ಲಿ ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರವ ಉದ್ಯಾನವನ ಕಾಮಗಾರಿಗೆ ಸಂಸದ ಪ್ರತಾಪ್‍ಸಿಂಹ ಗುದ್ದಲಿ ಪೂಜೆ ನೆರವೇರಿಸಿದರು. ಶಾಸಕ ಎಸ್.ಎ.ರಾಮದಾಸ್ ಸೇರಿದಂತೆ ಇನ್ನಿತರ ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Translate »