ಮೈಸೂರು, ನ.13(ಆರ್‍ಕೆಬಿ)- ತಂಬಾಕು ಬೆಳೆ ನಿರಂತರವಾಗಿ ಕುಸಿಯುತ್ತಿದ್ದು, ಕಂಗಾಲಾಗಿರುವ ರೈತರ ನೆರವಿಗೆ ಸರ್ಕಾರ ಆದಷ್ಟು ಬೇಗ ಧಾವಿಸದಿ ದ್ದರೆ ತಂಬಾಕು ಬೆಳೆಗಾರರ ಸರಣಿ ಆತ್ಮಹತ್ಯೆ ಆರಂಭವಾಗಲಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಇಂದಿಲ್ಲಿ ಆತಂಕ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧ ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಂಬಾಕು ಬೆಳೆಗಾರರು ಈಗಾಗಲೇ ಬ್ಯಾಂಕ್‍ಗಳಿಂದ ಪಡೆದ ಸಾಲ ತೀರಿಸಲಾಗದೇ ಕಂಗಾಲಾಗಿ, ತೀವ್ರ ಸಂಕಷ್ಟ ಪರಿಸ್ಥಿತಿಗೆ ಸಿಲುಕಿದ್ದಾರೆ. ತಂಬಾಕು ಬೆಳೆಗಾ ರರ ಆತ್ಮಹತ್ಯೆಗೂ ಮುನ್ನ ಸರ್ಕಾರ ಕೂಡಲೇ ಅವರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
ಪ್ರತಿ ಕೆಜಿ ತಂಬಾಕು ಬೆಳೆ ಯಲು ರೂ.115ರಿಂದ 130 ಖರ್ಚಾಗುತ್ತದೆ. ಆದರೆ ಮಾರು ಕಟ್ಟೆಯಲ್ಲಿ 140 ರಿಂದ 160 ರೂ.ಗೆ ಮಾರಾಟವಾಗುತ್ತಿದೆ. ಇದರಿಂದ ಬೆಳೆಗಾರರು ಆತಂಕ ಕ್ಕೀಡಾಗಿದ್ದಾರೆ. ಹಾಗಾಗಿ ಕನಿಷ್ಠ 180ರಿಂದ 250 ರೂ.ವರೆಗೆ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ತಂಬಾಕು ಬೆಳೆಯನ್ನು ಸಂಪೂರ್ಣ ನಿಷೇಧಿಸಬೇಕು ಎಂದು ವಿಶ್ವಸಂಸ್ಥೆ ಹೇಳುತ್ತಿದೆ. ತಂಬಾಕು ಬೆಳೆ ಆರೋ ಗ್ಯಕ್ಕೆ ಹಾನಿಕರ ನಿಜ. ಆದರೆ, ಅದನ್ನೇ ಕಸುಬಾಗಿಸಿ ಕೊಂಡಿರುವ ಸುಮಾರು 80 ಸಾವಿರಕ್ಕೂ ಹೆಚ್ಚಿನ ಕುಟುಂಬಗಳು ಇದರಿಂದ ಬೀದಿಗೆ ಬೀಳಲಿದ್ದಾರೆ. 56 ಸಾವಿರ ನೋಂದಾಯಿತ ಬೆಳೆಗಾರರಿದ್ದಾರೆ. ಇವರೆ ಲ್ಲರೂ ತಂಬಾಕನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. 2 ಲಕ್ಷ ಹೆಕ್ಟೇರ್‍ನಲ್ಲಿ ತಂಬಾಕು ಬೆಳೆಯಲಾಗುತ್ತಿದೆ. ಇದರಿಂದ ಉದ್ಯೋಗವೂ ಸೃಷ್ಟಿಯಾಗಿದೆ. ಕೇಂದ್ರಕ್ಕೆ 30 ಕೋಟಿ ರೂ. ಸೀಮಾ ಸುಂಕ ಸಂಗ್ರಹವಾಗುತ್ತಿದೆ. ತಂಬಾಕು ನಿಷೇಧಿಸುವುದಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೊಡ್ಡ ಪರಿಹಾರ ಘೋಷಿಸಬೇಕು. ಸೂಕ್ತ ಪರ್ಯಾಯ ಬೆಳೆ ಮಾರ್ಗೋಪಾಯಕ್ಕಾಗಿ ಐದು ವರ್ಷದ ಪ್ಯಾಕೇಜ್ ಘೋಷಿಸಬೇಕು. ಆ ನಂತರವೇ ತಂಬಾಕು ಬೆಳೆ ನಿಷೇಧಕ್ಕೆ ಮುಂದಾ ಗುವುದು ಸೂಕ್ತ ಎಂದು ಸಲಹೆ ನೀಡಿದರು.
ಈ ಎಲ್ಲಾ ವಿಚಾರಗಳು ಹಾಗೂ ತಂಬಾಕು ಬೆಳೆಗಾರರ ಸ್ಥಿತಿಗತಿ ಕುರಿತು ಚರ್ಚಿಸಲು ನವೆಂಬರ್ 18ರಂದು ಪಿರಿಯಾಪಟ್ಟಣದಲ್ಲಿ ತಂಬಾಕು ಬೆಳೆಗಾರರ ಸಭೆ ಆಯೋಜಿಸಲಾಗಿದ್ದು, ಮೈಸೂರು ಭಾಗದ ನಾಲ್ಕು ಸಂಸದರನ್ನೂ ಸಭೆಗೆ ಆಹ್ವಾನಿಸಲಾಗುತ್ತದೆ ಎಂದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಲೋಕೇಶ್ ಅರಸ್ ಮಾತನಾಡಿ, ತೀವ್ರ ಸಂಕಷ್ಟದಲ್ಲಿರುವ ತಂಬಾಕು ಬೆಳೆಗಾರರಿಗೆ ಸೂಕ್ತ ಪರ್ಯಾಯ ಬೆಳೆ ಹಾಗೂ ಬೆಂಬಲ ಬೆಲೆ ನೀಡುವ ಮೂಲಕ ಅವರ ಪುನಶ್ಚೇತನ ಗೊಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ತಂಬಾಕು ಬೆಳೆ ಗಾರರಾದ ಶ್ರೀನಿವಾಸ್, ಚಂದ್ರು ಉಪಸ್ಥಿತರಿದ್ದರು.