7 ಸಾವಿರ ರೂ. ಮೌಲ್ಯದ ಪ್ಲಾಸ್ಟಿಕ್ ವಶ
ಮೈಸೂರು,ನ.13(ವೈಡಿಎಸ್)-ಸಂತೆಪೇಟೆಯ ವಿವಿಧ ಅಂಗಡಿಗಳ ಮೇಲೆ ನಗರ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ, 7 ಸಾವಿರ ರೂ.ಮೌಲ್ಯದ ಪ್ಲಾಸ್ಟಿಕ್ ವಶಪಡಿಸಿ ಕೊಂಡರೆ, ಸ್ವಚ್ಛತೆ ಕಾಪಾಡದ ಮತ್ತು ಆಹಾರದಲ್ಲಿ ಹುಳುವಿದ್ದ ಹೋಟೆಲ್‍ಗೆ 30 ಸಾವಿರ ದಂಡ ವಿಧಿಸಿದ್ದಾರೆ. ಸ್ವಚ್ಛತೆ ಇಲ್ಲದ ಹಾಗೂ ಆಹಾರದಲ್ಲಿ ಹುಳುವಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಾಲಿಕೆ ಆರೋಗ್ಯಾಧಿಕಾರಿ ಮತ್ತು ಸಿಬ್ಬಂದಿ ಹೋಟೆಲ್ ಮೇಲೆ ದಾಳಿ ನಡೆಸಿ, 30 ಸಾವಿರ ರೂ. ದಂಡ ವಿಧಿಸಿದ್ದಾರೆ.
ವಲಯ ಕಚೇರಿ 6ರ ವಲಯ ಆಯುಕ್ತರಾದ ಗೀತಾ ಅವರು, ಬುಧವಾರ ಮಧ್ಯಾಹ್ನ ಊಟ ಮಾಡಲು ರೈಲ್ವೆ ನಿಲ್ದಾಣದ ಮುಂಭಾಗದಲ್ಲಿರುವ ಆಡ್ಯಾರ್ ಆನಂದ ಭವನ (ಎ2ಬಿ)ಕ್ಕೆ ಹೋಗಿದ್ದು, ಊಟ ಮಾಡುವ ವೇಳೆ ಆಹಾರದಲ್ಲಿ ಹುಳುಗಳು ಇರುವುದು ಗೊತ್ತಾಗಿದೆ. ಕೂಡಲೇ ಪಾಲಿಕೆ ಆರೋಗ್ಯಾಧಿಕಾರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಆರೋಗ್ಯಾಧಿಕಾರಿ ನಾಗರಾಜ್, ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಅಕ್ಕಿ, ಆಗ ತಾನೆ ತಯಾರಿಸಿದ್ದ ಆಹಾರದಲ್ಲಿ ಹುಳುಗಳು, ಕೊಳೆತ ತರಕಾರಿ ಬಳಕೆ, ಪಾಲಿಕೆಯ ಕಸದ ಬುಟ್ಟಿಯನ್ನು ಸ್ವಂತಕ್ಕೆ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಜತೆಗೆ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡದ ಹಿನ್ನೆಲೆಯಲ್ಲಿ 30 ಸಾವಿರ ರೂ. ದಂಡ ವಿಧಿಸಿದ್ದಾರೆ.
ಪ್ಲಾಸ್ಟಿಕ್ ವಶ: ಸಂತೇಪೇಟೆಯ ನಾಗೇಶ್, ಸತ್ಯನಾರಾಯಣ ಎಂಟರ್‍ಪ್ರೈಸಸ್ ಹಾಗೂ ನಾಗೇಶ್ ಪ್ಯಾಕೇಜ್ ಅಂಗಡಿಗಳ ಮೇಲೆ ದಾಳಿ ನಡೆಸಿ, 7 ಸಾವಿರ ರೂ. ಮೌಲ್ಯದ 2.5 ಟನ್ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ. ಈ ಅಂಗಡಿಗಳಲ್ಲಿ ಪ್ಲಾಸಿಕ್ ಬಳಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಪಾಲಿಕೆ ಆರೋಗ್ಯಾಧಿಕಾರಿ ಡಾ.ಜಯಂತ್, ಪರಿಸರ ಅಭಿಯಂತರ ಮೈತ್ರಿ, ಆರೋಗ್ಯ ಪರಿವೀಕ್ಷಕ ಯೋಗೇಶ್ ಹಾಗೂ ಅಭಯ ತಂಡದ ಸಿಬ್ಬಂದಿಗಳು ದಾಳಿ ನಡೆಸಿದ್ದರು.