6 ತಿಂಗಳಿಂದ ಕೆಟ್ಟು ನಿಂತ ಪಾಲಿಕೆ ಲಿಫ್ಟ್
ಮೈಸೂರು

6 ತಿಂಗಳಿಂದ ಕೆಟ್ಟು ನಿಂತ ಪಾಲಿಕೆ ಲಿಫ್ಟ್

November 15, 2019

ಮೈಸೂರು, ನ.14(ಆರ್‍ಕೆ)- ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮೈಸೂರು ಮಹಾನಗರ ಪಾಲಿಕೆ ಪ್ರಧಾನ ಕಚೇರಿಯ ಲಿಫ್ಟ್ ಕಳೆದ 6 ತಿಂಗಳಿಂದ ಕೆಟ್ಟು ನಿಂತಿದೆ. ರಸ್ತೆ, ನೀರು, ಒಳಚರಂಡಿ, ಸ್ವಚ್ಛತೆ ಯಂತಹ ಮೂಲ ಸೌಕರ್ಯ ಒದಗಿಸಿ ಮೈಸೂರು ನಗರವನ್ನು ನಿರ್ವಹಣೆ ಮಾಡುವ ಜವಾಬ್ದಾರಿ ಹೊತ್ತಿರುವ ಪಾಲಿಕೆ ಅಧಿಕಾರಿಗಳು ಕರ್ತವ್ಯ ಮರೆತಿರುವುದರಿಂದ ನಗರದಾದ್ಯಂತ ರಸ್ತೆಗಳು ಗುಂಡಿ ಬಿದ್ದು ಸಾರ್ವಜನಿಕರು ಓಡಾಡಲು ಪರಿತಪಿಸುವಂತಾಗಿದೆ.

ಹಲವು ಸೇವೆಗಳಿಗಾಗಿ ಬರುವ ಹಿರಿಯ ನಾಗರಿಕರು, ಅಂಗವಿಕ ಲರು, ಅಶಕ್ತರಿಗೆ ಮೊದಲ ಮಹಡಿಗೆ ಹೋಗಲು ಅನುಕೂಲವಾಗ ಲೆಂದು ಸಯ್ಯಾಜಿರಾವ್ ರಸ್ತೆಯಲ್ಲಿರುವ ಮೈಸೂರು ನಗರಪಾಲಿಕೆ ಪ್ರಧಾನ ಕಚೇರಿ ಕಟ್ಟಡಕ್ಕೆ ಕಳೆದ 2 ವರ್ಷಗಳ ಹಿಂದೆ ಅಳವಡಿ ಸಿದ್ದ ಓಟಿಸ್ ಕಂಪನಿಯ ಲಿಫ್ಟ್ 6 ತಿಂಗಳಿಂದ ಕೆಟ್ಟು ನಿಂತಿದೆ.

ಅಂಗವಿಕಲರ ಶೇ.3 ಅನುದಾನದಡಿ 40 ಲಕ್ಷ ರೂ. ಹಣ ಖರ್ಚು ಮಾಡಿ ಪಾಲಿಕೆಯ ಕಚೇರಿ ಪಾರಂಪರಿಕ ಕಟ್ಟಡದ ಹಿಂಬದಿ ವಿದ್ಯುತ್ ವಿಭಾಗದ ಬಳಿ ಲಿಫ್ಟ್ ಅಳವಡಿಸಲಾಗಿತ್ತು. ಅದೇ ಓಟಿಎಸ್ ಕಂಪನಿಯವರು ಒಂದು ವರ್ಷ ನಿರ್ವಹಣೆ ಮಾಡಿದ್ದರಿಂದ ಆ ಅವಧಿಯಲ್ಲಿ ಲಿಫ್ಟ್ ಸಮರ್ಪಕವಾಗಿ ಕಾರ್ಯನಿರ್ವಹಿಸಿತ್ತು.

ಅದರಲ್ಲಿ ಮೇಯರ್, ಉಪಮೇಯರ್, ಕಾರ್ಪೊರೇಟರ್ ಗಳು ಸೇರಿದಂತೆ ಮೊದಲ ಮಹಡಿಯಲ್ಲಿರುವ ಕೌನ್ಸಿಲ್ ಸೆಕ್ಷನ್, ನಗರ ಯೋಜನಾ ಶಾಖೆ, ಆರೋಗ್ಯ ಶಾಖೆ, ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಆ ಲಿಫ್ಟ್ ಬಳಸುತ್ತಿದ್ದರು.

ಅದೇ ರೀತಿ ಅಂಗವಿಕಲರು, ವೃದ್ಧರು, ಹಿರಿಯ ನಾಗರಿಕರೂ ಮೊದಲ ಮಹಡಿಗೆ ಹೋಗಲು ಲಿಫ್ಟ್ ಬಳಸುತ್ತಿದ್ದರು. ಕಚೇರಿ ವೇಳೆ ಒಬ್ಬ ಆಪರೇಟರ್ ಅನ್ನು ನಿಯೋಜಿಸಿದ್ದ ಓಟಿಸ್ ಕಂಪನಿಯು ಆಗಿಂದಾಗ್ಗೆ ಪರೀಕ್ಷಿಸಿ ವಿದ್ಯುತ್ ತೊಂದರೆಗಳನ್ನು ಸರಿಪಡಿಸುತ್ತಿದ್ದ ರಿಂದ ಪಾಲಿಕೆ ಕಚೇರಿ ಲಿಫ್ಟ್ ಒಂದೂವರೆ ವರ್ಷ ಚೆನ್ನಾಗಿಯೇ ಕೆಲಸ ಮಾಡಿತು. ತದನಂತರ ಪಾಲಿಕೆಯು ವಾರ್ಷಿಕ ನಿರ್ವಹಣೆ ವ್ಯವಸ್ಥೆ ಮಾಡುವುದನ್ನು ಮರೆತಿದ್ದಲ್ಲದೆ, ಅಲ್ಲಿಗೆ ಆಪರೇಟರನ್ನಾ ಗಲಿ, ಸೆಕ್ಯೂರಿಟಿ ಗಾರ್ಡ್ ಅನ್ನಾಗಲಿ, ನಿಯೋಜನೆ ಮಾಡದೆ ನಿರ್ಲಕ್ಷ್ಯ ವಹಿಸಿದ ಕಾರಣ, ಲಿಫ್ಟ್ ಕಾರ್ಯಾಚರಣೆ ಸ್ಥಗಿತ ಗೊಂಡಿತು. ಇದೀಗ ಅದು ಕೆಟ್ಟು ನಿಂತು 6 ತಿಂಗಳೇ ಕಳೆದಿ ದ್ದರೂ, ಅಧಿಕಾರಿಗಳು ಅತ್ತ ಗಮನ ಹರಿಸಿಲ್ಲ.

ಈ ಹಿಂದಿನ ಪಾಲಿಕೆ ವಲಯ ಕಚೇರಿ-1ರ ಅಸಿಸ್ಟೆಂಟ್ ಇಂಜಿನಿ ಯರ್ ರವಿಕುಮಾರ್ ಲಿಫ್ಟ್ ನಿರ್ಮಿಸುವಾಗ ಮೇಲ್ವಿಚಾರಣೆ ನಡೆಸಿ ದ್ದರು. ಅವರು ಬೇರೆಡೆಗೆ ವರ್ಗಾವಣೆಗೊಂಡ ನಂತರ ಅವರ ಜವಾಬ್ದಾರಿಯನ್ನು ಸಂತೋಷ್ ಅವರು ನಿರ್ವಹಿಸುತ್ತಿದ್ದಾರೆ. ತಮ್ಮ ವ್ಯಾಪ್ತಿಗೆ ಬರುವ ಅಭಿವೃದ್ಧಿ ಅಧಿಕಾರಿ ಭರತ್‍ಕುಮಾರ್ ಆಗಲಿ ಅಥವಾ ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಾಗಲೀ 6 ತಿಂಗಳಿಂದ ಕಾರ್ಯ ಸ್ಥಗಿತಗೊಂಡಿರುವ ಲಿಫ್ಟ್ ಸರಿಪಡಿಸುವತ್ತ ಗಮನ ಹರಿಸದಿರುವುದರಿಂದ ಅದರ ಉದ್ದೇಶ ನೆಲಕಚ್ಚಿದಂತಾಗಿದೆ.

Translate »