ಕಾರಂಜಿಕೆರೆ ಮಾದರಿ ಲಿಂಗಾಂಬುಧಿ ಕೆರೆ ಕಾಯಕಲ್ಪಕ್ಕೆ ಸ್ಥಳೀಯರ ಒತ್ತಾಯ
ಮೈಸೂರು

ಕಾರಂಜಿಕೆರೆ ಮಾದರಿ ಲಿಂಗಾಂಬುಧಿ ಕೆರೆ ಕಾಯಕಲ್ಪಕ್ಕೆ ಸ್ಥಳೀಯರ ಒತ್ತಾಯ

May 13, 2019

ಮೈಸೂರು: ಮೈಸೂರಿನ ಪ್ರತಿ ಷ್ಠಿತ ಕೆರೆಗಳಲ್ಲಿ ಒಂದಾಗಿರುವ ಲಿಂಗಾಂಬುಧಿ ಕೆರೆಯನ್ನು ಕಾರಂಜಿಕೆರೆ ಮಾದರಿಯಲ್ಲಿ ವೈಜ್ಞಾ ನಿಕವಾಗಿ ಅಭಿವೃದ್ಧಿಪಡಿಸುವಂತೆ ಸಾರ್ವ ಜನಿಕ ವಲಯದಲ್ಲಿ ಒತ್ತಾಯ ಕೇಳಿ ಬರುತ್ತಿದ್ದು, ಅರಣ್ಯ ಇಲಾಖೆ ಕೆರೆ ಅಭಿವೃದ್ಧಿಗೆ ಸಮ್ಮತಿಸಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲು ನಿರ್ಧರಿಸಿದೆ.

ಲಿಂಗಾಂಬುಧಿ ಕೆರೆ ಈ ಬಾರಿ ಸಂಪೂರ್ಣವಾಗಿ ಬತ್ತಿ ಹೋಗಿದೆ. ಸುಮಾರು 290 ಎಕರೆ ವಿಸ್ತೀರ್ಣ ಹೊಂದಿರುವ ಲಿಂಗಾಂಬುಧಿ ಕೆರೆಯಲ್ಲಿ 80ರಿಂದ 90 ಎಕರೆ ಪ್ರದೇಶದಲ್ಲಿ ನೀರು ಶೇಖರಣೆಯಾಗಲಿದ್ದು, ಉಳಿದ ಸ್ಥಳದಲ್ಲಿ ಉದ್ಯಾನವನ, ಬಿದಿರು. ತೇಗ ಸೇರಿದಂತೆ ವಿವಿಧ ಗಿಡ-ಮರ ಬೆಳೆಸಲಾಗಿದೆ. ಕಳೆದ ವರ್ಷ ಸುರಿದ ಮಳೆಗೆ ಲಿಂಗಾಂಬುಧಿ ಕೆರೆ ತುಂಬಿ ತುಳುಕಿತ್ತು. ಆದರೆ ಕೆರೆಯಲ್ಲಿನ ತೂಬು ಮುಚ್ಚದೆ ಇದ್ದ ಕಾರಣ ನೀರು ಪೋಲಾಗಿದೆ. ಇದರಿಂದ ಈ ಬಾರಿ ಮಾರ್ಚ್ ತಿಂಗಳಲ್ಲೇ ಕೆರೆ ಸಂಪೂರ್ಣ ವಾಗಿ ಬತ್ತಿ ಹೋಗಿದ್ದು, ಪಕ್ಷಿ ಸಂಕುಲ ನೀರಿಲ್ಲದೆ ಪರಿತಪಿಸುವಂತಾಗಿದೆ.

ಏನಾಯ್ತು: ಕಳೆದ ಬಾರಿ ಲಿಂಗಾಂಬುಧಿ ಕೆರೆ ಸಂಪೂರ್ಣವಾಗಿ ತುಂಬಿತ್ತು. ಈ ಕೆರೆ ಯಿಂದ ನೀರನ್ನು ಕೃಷಿ ಚಟುವಟಿಕೆಗಳಿಗೆ ಹಾಯಿಸಲು ಕೆರೆಯ ಮೂರ್ನಾಲ್ಕು ಸ್ಥಳ ಗಳಲ್ಲಿ ತೂಬು ನಿರ್ಮಿಸಲಾಗಿದೆ. ಈ ಎಲ್ಲಾ ತೂಬುಗಳನ್ನು ಮುಚ್ಚಲಾಗಿತ್ತಾದರೂ, ಒಂದು ತೂಬಿನಲ್ಲಿ ರಂಧ್ರ ಉಂಟಾಗಿ ಕೆರೆಯಿಂದ ನೀರು ರಾಜಕಾಲುವೆ ಮೂಲಕ ನೀರು ಹರಿದು ಪೋಲಾಗಿದೆ. ಆರೇಳು ತಿಂಗಳ ಹಿಂದೆಯೇ ಅರಣ್ಯ ಇಲಾಖೆ ಮಂಡ್ಯದಿಂದ ನುರಿತ ತಜ್ಞ ರನ್ನು ಕರೆಸಿ ತೂಬನ್ನು ಮುಚ್ಚಿಸಲಾಗಿತ್ತು. ಆದರೂ ನೀರು ಸಣ್ಣ ಪ್ರಮಾಣದಲ್ಲಿ ಸೋರಿಕೆಯಾಗುತ್ತಿತ್ತು. ಈ ನಡುವೆ ಕೆಲವರು ತೂಬಿನಲ್ಲಿ ಬಿಡಲಾಗಿದ್ದ ಮರಳಿನ ಮೂಟೆಯನ್ನು ಸಡಿಲಿಸಿದ್ದರಿಂದ ಕೆರೆ ನೀರು ಬತ್ತಿ ಹೋಗಲು ಕಾರಣವಾಗಿತ್ತು.

ಸ್ಥಳೀಯರಿಂದ ಒತ್ತಡ: ಸಾಮಾನ್ಯವಾಗಿ ಕೆರೆಯಲ್ಲಿ ಹೂಳೆತ್ತಲಾಗುತ್ತದೆ ಎಂದರೆ ವಿವಿಧ ಕಾರಣ ನೀಡಿ ಪ್ರತಿಭಟಿಸುವವರೇ ಹೆಚ್ಚು. ಆದರೆ ಈ ಬಾರಿ ಕಾರಂಜಿಕೆರೆಯನ್ನು ತಜ್ಞರು, ಪರಿಸರವಾದಿಗಳು ಹಾಗೂ ಕೆರೆ ಅಭಿವೃದ್ಧಿ ಸಮಿತಿ ಸದಸ್ಯರು ಚರ್ಚಿಸಿ ಅಲ್ಲಿನ ಜೀವ ವೈವಿ ಧ್ಯತೆ ಕಾಪಾಡಿಕೊಂಡು ಕೆರೆಯನ್ನು ವೈಜ್ಞಾನಿಕ ವಾಗಿ ಅಭಿವೃದ್ಧಿ ಮಾಡುವುದಕ್ಕೆ ನಿರ್ಧರಿ ಸಿತ್ತು. ಇದರಿಂದ ಕಾಮಗಾರಿ ಆರಂಭಿಸಿ, ಕೆರೆಯ ನೈಸರ್ಗಿಕ ಪರಿಸರ ಕಾಪಾಡುವು ದರೊಂದಿಗೆ ನೂರಾರು ವರ್ಷದಿಂದ ಕೆರೆ ಯಲ್ಲಿ ತುಂಬಿಕೊಂಡಿದ್ದ ಹೂಳನ್ನು ಮೇಲೆತ್ತ ಲಾಗಿತ್ತು. ಇದರಿಂದ ಪ್ರೇರಣೆಗೊಂಡ ದಟ್ಟ ಗಳ್ಳಿ ಗ್ರೀನ್ ಫೌಂಡೇಷನ್ ಸದಸ್ಯರು ಸ್ಥಳೀಯ ರೊಂದಿಗೆ ಸೇರಿ ಡಿಸಿಎಫ್ ಡಾ.ಕೆ.ಸಿ.ಪ್ರಶಾಂತ್ ಕುಮಾರ್ ಅವರನ್ನು ಭೇಟಿ ಮಾಡಿ ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿತ್ತು.

ಪರಿಶೀಲನೆ: ಲಿಂಗಾಬುಧಿ ಕೆರೆ ಸಮೀಪದ ಬಡಾವಣೆಗಳ ನಿವಾಸಿಗಳ ಕೋರಿಕೆ ಮೇರೆಗೆ ಡಿಸಿಎಫ್ ಡಾ.ಕೆ.ಸಿ.ಪ್ರಶಾಂತ್‍ಕುಮಾರ್ ನೇತೃತ್ವದಲ್ಲಿ ಆರ್‍ಎಫ್‍ಓ ಗೋವಿಂದರಾಜು, ಗ್ರೀನ್ ಫೌಂಡೇಷನ್ ಮುಖ್ಯಸ್ಥರಾದ ಆರ್.ನಾಗೇಂದ್ರಕುಮಾರ್, ನೆಹರು ಯುವ ಕೇಂದ್ರದ ಸಂಯೋಜನಾಧಿಕಾರಿ ಎಂ.ಎನ್.ನಟರಾಜು, ಡಾ.ನಾರಾಯಣ ಹೆಗಡೆ, ನಾಣಯ್ಯ ಇನ್ನಿತರರು ಲಿಂಗಾಬುಧಿ ಕೆರೆಯನ್ನು ಅಭಿವೃದ್ಧಿ ಮಾಡುವ ಸಂಬಂಧ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಕೆರೆಗೆ ಭೇಟಿ ನೀಡಿ ಬತ್ತಿರುವ ಕೆರೆಗೆ ಕಾಯಕಲ್ಪ ನೀಡುವಂತೆ ಸೂಚನೆ ನೀಡಿದ್ದಾರೆ.

ಕೆರೆಯಿಂದ ಕೆರೆಗೆ ಸಂಪರ್ಕಬೇಕು: ದಟ್ಟಗಳ್ಳಿ ಗ್ರೀನ್ ಫೌಂಡೇಷನ್ ಮುಖ್ಯಸ್ಥ ಆರ್.ನಾಗೇಂದ್ರ ಕುಮಾರ್ ಮಾತನಾಡಿ, ಕಳೆದ ಬಾರಿ ತುಂಬಿದ್ದ ಲಿಂಗಾಬುಧಿ ಕೆರೆ ಇದೀಗ ಸಂಪೂರ್ಣವಾಗಿ ಬತ್ತಿ ಹೋಗಿದೆ. ಕೆರೆಯಲ್ಲಿರುವ ತೂಬು ಮುಚ್ಚುವಲ್ಲಿ ಕ್ರಮ ಕೈಗೊಳ್ಳದೇ ಇರುವುದರಿಂದ ನೀರು ಪೋಲಾಗಿದೆ. ಅಲ್ಲದೆ ರಾಜಕಾಲುವೆ ಸಮೀಪದ ಜಮೀನಿನಲ್ಲಿ ಕೆಲವರು ಹುಲ್ಲನ್ನು ಬೆಳೆಯುತ್ತಿದ್ದಾರೆ. ಇದಕ್ಕೆ ಚರಂಡಿ ನೀರನ್ನು ಬಳಸಿ ಕೊಳ್ಳುತ್ತಿದ್ದಾರೆ. ಬಳಿಕ ಆ ಚರಂಡಿ ನೀರನ್ನು ರಾಜ ಕಾಲುವೆಗೆ ಬಿಡುತ್ತಿದ್ದಾರೆ. ಇದರಿಂದ ಲಿಂಗಾಬುಧಿ ಕೆರೆಗೆ ಚರಂಡಿ ನೀರು ಸೇರಿ ಪರಿಸರ ಕಲುಷಿತಗೊಳ್ಳುತ್ತಿದೆ. ಈ ಹಿನ್ನೆಲೆ ಯಲ್ಲಿ ಕೆರೆ ಅಭಿವೃದ್ಧಿ ಮಾಡುವಂತೆ ಮನವಿ ಮಾಡಿದ್ದೇವೆ. ಬಿಳಿಕೆರೆಗೆ ನೀರು ತುಂಬಿಸಲು ಯೋಜನೆ ಕೈಗೊಂಡಿರುವಂತೆ ಲಿಂಗಾಬುಧಿ ಕೆರೆಗೆ ಕಬಿನಿಯಿಂದ ನೀರು ತುಂಬಿಸುವ ಯೋಜನೆ ಅನುಷ್ಠಾನಗೊಳಿಸಬೇಕು. ಪರಸಯ್ಯನಹುಂಡಿ ಬಳಿಯಿರುವ ನಾಲೆಯಿಂದ ಕೆರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಕಳೆದ ಬಾರಿ ಬೋಗಾಧಿಯಲ್ಲಿ ರುವ ಬೈಯ್ಯಪ್ಪನ ಕೆರೆ ತುಂಬಿ ಕೋಡಿ ಹರಿದಿದ್ದರಿಂದಲೇ ಲಿಂಗಾಬುಧಿ ಕೆರೆಗೆ ಹೆಚ್ಚಿನ ನೀರು ಹರಿದು ಬಂದಿತ್ತು. ಅದೇ ಮಾದರಿಯಲ್ಲಿ ಕೆರೆ ಕೆರೆಯಿಂದ ಕೆರೆಗೆ ಲಿಂಕ್ ಮಾಡಿದರೆ, ಲಿಂಗಾಬುಧಿ ಕೆರೆಯನ್ನು ಸಂರಕ್ಷಿಸಬಹುದು ಎಂದು ಅಭಿಪ್ರಾಯಪಟ್ಟರು.

ಪಕ್ಷಿ ಸಂಕುಲಕ್ಕೆ ತೊಡಕು: ಲಿಂಗಾಬುಧಿ ಕೆರೆಯಲ್ಲಿ ನೀರಿಲ್ಲದೆ ಇರುವುದರಿಂದ ಅಲ್ಲಿನ ಪಕ್ಷಿ ಸಂಕುಲಕ್ಕೆ ತೀವ್ರ ತೊಂದರೆಯಾಗಿದೆ. ಇದನ್ನು ಮನಗಂಡು ದಟ್ಟಗಳ್ಳಿ ನಿವಾಸಿಗಳೆಲ್ಲರೂ ತಮ್ಮ ಮನೆ ಮುಂದೆ, ಮರಗಳಲ್ಲಿ ನೀರಿನ ಬಾಟಲ್‍ನಲ್ಲಿ ಪಕ್ಷಿಗಳಿಗೆ ಕುಡಿಯಲು ನೀರಿಡುತ್ತಿದ್ದೇವೆ. ಸುಮಾರು ನಾಲ್ಕು ಸಾವಿರ ಮರಗಳಲ್ಲಿ ನೀರಿನ ಬಾಟಲ್ ಇಟ್ಟು ಪಕ್ಷಿಗಳಿಗೆ ನೆರವಾಗಿದ್ದೇವೆ ಎಂದು ತಿಳಿಸಿದರು. ಈಗಾಗಲೇ ಕಾರಂಜಿಕೆರೆಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲಾಗಿದ್ದು, ಅದೇ ಮಾದರಿಯಲ್ಲಿ ಲಿಂಗಾಬುಧಿ ಕರೆಯನ್ನು ಅಭಿವೃದ್ಧಿ ಮಾಡಿದರೆ ಮೈಸೂರಿನ ಮತ್ತೊಂದು ಕೆರೆಯನ್ನು ಸಂರಕ್ಷಿಸಿದಂತಾಗುತ್ತದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

– ಎಂ.ಟಿ.ಯೋಗೇಶ್ ಕುಮಾರ್

Translate »