ರೋಹಿತ್ ಪಡೆಗೆ ಐಪಿಎಲ್ ಕಿರೀಟ
ಮೈಸೂರು

ರೋಹಿತ್ ಪಡೆಗೆ ಐಪಿಎಲ್ ಕಿರೀಟ

May 13, 2019

ಹೈದರಾಬಾದ್: ಈ ಸಾಲಿನ 12ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಆಗಿ ಮುಂಬೈ ಇಂಡಿ ಯನ್ಸ್ ಹೊರಹೊಮ್ಮಿದೆ. ಈ ಮೂಲಕ ಐಪಿಎಲ್ ಟ್ರೋಫಿ ಹಾಗೂ 20 ಲಕ್ಷ ರೂ. ನಗದು ಬಹುಮಾನವನ್ನು ತನ್ನ ದಾಗಿಸಿಕೊಂಡಿದೆ. ಇನ್ನು ರನ್ನರ್ ಅಪ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ 12.5 ಲಕ್ಷ ರೂ. ಬಹುಮಾನ ಪಡೆಯಿತು.

ಇಂದು ನಡೆದ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 1 ರನ್‍ಗಳ ರೋಚಕ ಜಯ ಸಾಧಿಸುವ ಮೂಲಕ ಐಪಿಎಲ್ ಕಿರೀಟ ವನ್ನು ಮುಡಿಗೇರಿಸಿಕೊಂಡಿತು. ಈ ಗೆಲು ವಿನೊಂದಿಗೆ ಮುಂಬೈ 4ನೇ ಬಾರಿಗೆ ಐಪಿಎಲ್ ಟ್ರೋಫಿ ಗೆಲ್ಲುವ ಮೂಲಕ ಅತೀ ಹೆಚ್ಚು ಬಾರಿ ಚಾಂಪಿಯನ್ ಆದ ತಂಡ ಎಂಬ ಕೀರ್ತಿಗೆ ಪಾತ್ರವಾಗಿದೆ.

ಇಲ್ಲಿನ ರಾಜೀವ್‍ಗಾಂಧಿ ಅಂತಾ ರಾಷ್ಟ್ರೀಯ ಮೈದಾನದಲ್ಲಿ ಭಾನುವಾರ ನಡೆದ ಫೈನಲ್ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈಗೆ ನಾಯಕ ರೋಹಿತ್ ಶರ್ಮಾ ಹಾಗೂ ವಿಕೆಟ್ ಕೀಪರ್ ಕ್ವಿಂಟನ್ ಡಿಕಾಕ್ ಮೊದಲ ವಿಕೆಟ್‍ಗೆ ಉತ್ತಮ ಆರಂಭ ನೀಡಿದರು. ಆದರೆ, ತಂಡದ ಮೊತ್ತ 45ರನ್ ಆಗಿದ್ದ ವೇಳೆ ಒಬ್ಬರ ಹಿಂದೆ ಒಬ್ಬರಂತೆ ಡಿಕಾಕ್ 29 ಹಾಗೂ ರೋಹಿತ್ ಶರ್ಮಾ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ನಂತರ ಬಂದ ಸೂರ್ಯ ಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ತಂಡಕ್ಕೆ ಕೊಂಚ ಚೇತರಿಕೆ ನೀಡಿದರಾದರೂ ಸೂರ್ಯ ಕುಮಾರ್ ಯಾದವ್ 15 ಹಾಗೂ ಇಶಾನ್‍ಕಿಶನ್ 23 ರನ್ ಗಳಿಸಿ ಔಟಾದರು. ಬಳಿಕ ಕ್ರೀಸ್‍ಗೆ ಆಗಮಿಸಿದ ಕೃನಾಲ್ ಪಾಂಡ್ಯ 7 ರನ್ ಗಳಿಸಿ ಬಹುಬೇಗ ಪೆವಿಲಿಯನ್ ಸೇರಿಕೊಂಡರು. ಈ ವೇಳೆ ಜೊತೆ ಯಾದ ಹಾರ್ದಿಕ್ ಪಾಂಡ್ಯ ಹಾಗೂ ಪೋಲಾರ್ಡ್ ತಂಡದ ಮೊತ್ತವನ್ನು ಹೆಚ್ಚಿಸಿದರು. ಹಾರ್ದಿಕ್ ಪಾಂಡ್ಯ 16ರನ್‍ಗಳಿಸಿ ವಿಕೆಟ್ ಒಪ್ಪಿಸಿದರೆ, ಕಿರಣ್ ಪೋಲಾರ್ಡ್ 41 ರನ್‍ಗಳಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಚೆನ್ನೈ ಬೌಲರ್‍ಗಳ ಬಿಗಿ ಬೌಲಿಂಗ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್ 20 ಓವರ್‍ಗಳಲ್ಲಿ 8 ವಿಕೆಟ್ ಕಳೆದುಕೊಂಡು 149ರನ್‍ಗಳ ಸವಾಲಿನ ಮೊತ್ತ ಗಳಿಸಿತು. ಚೆನ್ನೈ ಪರ ಬೌಲಿಂಗ್‍ನಲ್ಲಿ ದೀಪಕ್ ಚಹರ್ 3, ಠಾಕೂರ್, ಇಮ್ರಾನ್ ತಾಹೀರ್ ತಲಾ ಎರಡು ವಿಕೆಟ್ ಉರುಳಿಸಿದರು.

ಚೆನ್ನೈಗೆ ಸೋಲು: 4ನೇ ಬಾರಿಗೆ ಚಾಂಪಿಯನ್ ಆಗುವ ಕನಸಿನೊಂದಿಗೆ ಮುಂಬೈ ಇಂಡಿಯನ್ಸ್ ನೀಡಿದ 150ರನ್‍ಗಳ ಗುರಿ ಬೆನ್ನತ್ತಿದ ಚೆನ್ನೈ ನಿಗದಿತ 20 ಓವರ್‍ಗಳಲ್ಲಿ 7 ವಿಕೆಟ್ ಕಳೆದುಕೊಂಡು 148ರನ್‍ಗಳಿಸಿ ಒಂದು ರನ್‍ಗಳಿಂದ ಸೋಲು ಅನುಭವಿಸಿತು.

ಚೆನ್ನೈ ಪರ ಡುಪ್ಲೆಸಿಸ್ ಇನಿಂಗ್ಸ್ ಆರಂಭದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿ 26 ರನ್ ಗಳಿಗೆ ಔಟಾದರು. ನಂತರ ಬಂದ ಯಾವೊಬ್ಬ ಬ್ಯಾಟ್ಸ್‍ಮನ್‍ಗಳು ಕ್ರೀಸ್‍ನಲ್ಲಿ ಹೆಚ್ಚು ನಿಲ್ಲಲಾಗದೇ ಪೆವಿಲಿಯನ್ ಸೇರಿಕೊಂಡರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ, ಮತ್ತೊಂ ದೆಡೆ ಅಬ್ಬರಿಸಿದ ವಾಟ್ಸನ್ 59 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ ಒಳಗೊಂಡ 80ರನ್ ಗಳಿಸಿ ಇನಿಂಗ್ಸ್‍ನ ಕೊನೆಯಲ್ಲಿ ಪೆವಿಲಿಯನ್ ಸೇರಿಕೊಂಡರು. ಉಳಿದಂತೆ ಬ್ರಾವೋ 15 ರನ್ ಗಳಿಸಿದರು. ಮುಂಬೈ ಪರ ಬೌಲಿಂಗ್‍ನಲ್ಲಿ ಬೂಮ್ರಾ 2, ಹಾರ್ದಿಕ್ ಪಾಂಡ್ಯ, ಲಸಿತ್ ಮಲಿಂಗಾ ಹಾಗೂ ಚಹರ್ ತಲಾ ಒಂದು ವಿಕೆಟ್ ಪಡೆದರು. ಪಂದ್ಯದಲ್ಲಿ ಉತ್ತಮ ಬೌಲಿಂಗ್ ದಾಳಿ ನಡೆಸಿದ ಬೂಮ್ರಾ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು. ಇದರೊಂದಿಗೆ ಈ ಬಾರಿಯ ಐಪಿಎಲ್ ಪಂದ್ಯಾವಳಿಗೆ ತೆರೆಬಿದ್ದಿತು.

Translate »