ಸ್ಥಳ ಪರಿಶೀಲನೆಗೆ ಹೋದ ನಗರಪಾಲಿಕೆ ನಿಯೋಗ ತರಾಟೆಗೆ ತೆಗೆದುಕೊಂಡ ಸ್ಥಳೀಯರು
ಮೈಸೂರು

ಸ್ಥಳ ಪರಿಶೀಲನೆಗೆ ಹೋದ ನಗರಪಾಲಿಕೆ ನಿಯೋಗ ತರಾಟೆಗೆ ತೆಗೆದುಕೊಂಡ ಸ್ಥಳೀಯರು

July 7, 2019

ಮೈಸೂರು,ಜು.6 (ವೈಡಿಎಸ್)- ನಗರಪಾಲಿಕೆ ವತಿಯಿಂದ ಪೌರಕಾರ್ಮಿಕರಿಗೆ ಮನೆ ನಿರ್ಮಿಸಲು ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಮಳಲವಾಡಿಗೆ ಸ್ಥಳ ಪರಿಶೀಲನೆಗೆ ಹೋದ ಮೇಯರ್, ಉಪಮೇಯರ್, ಪಾಲಿಕೆ ಸದಸ್ಯರನ್ನು ಅಲ್ಲಿನ ಸ್ಥಳೀಯ ನಿವಾಸಿಗಳು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಮೈಸೂರು ಮಹಾನಗರಪಾಲಿಕೆ ವತಿಯಿಂದ ಪೌರ ಕಾರ್ಮಿಕರಿಗಾಗಿ 21 ಕೋಟಿ ರೂ. ವೆಚ್ಚದಲ್ಲಿ 158 ಮನೆಗಳನ್ನು ನಿರ್ಮಿಸಲು ನಿರ್ಧರಿಸಿದ್ದು, ಈ ಹಿನ್ನೆಲೆ ಯಲ್ಲಿ ಶನಿವಾರ ಸಂಜೆ ಮೇಯರ್ ಪುಷ್ಪಲತಾ ಜಗನ್ನಾಥ್ ನೇತೃತ್ವದಲ್ಲಿ ಪಾಲಿಕೆ ಸದಸ್ಯರು, ಅಧಿಕಾರಿ ಗಳು ಮಳಲವಾಡಿಗೆ ಭೇಟಿ ನೀಡಿ ಸ್ಥಳವನ್ನು ಪರಿ ಶೀಲಿಸುತ್ತಿದ್ದರು. ಈ ವೇಳೆ ನೂರಾರು ಮಂದಿ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿ, ಇದು ಮೊದಲೇ ಕೊಳಚೆ ಪ್ರದೇಶ. ಹೆಚ್ಚು ಮಳೆಯಾದರೆ ಚರಂಡಿ ನೀರು ಮನೆ ಯೊಳಗೆ ಬರುತ್ತದೆ. ಜತೆಗೆ ಸ್ಮಶಾನವೂ ಸಮೀಪದಲ್ಲೇ ಇದ್ದು, ಹೆಣವನ್ನು ಸುಡುವಾಗ ವಾಸನೆ ಬರುತ್ತದೆ. ಮೂಲ ಸೌಕರ್ಯವೂ ಇಲ್ಲ. ಮೊದಲು ಇಲ್ಲಿನ ನಿವಾಸಿ ಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು.

ಪೌರ ಕಾರ್ಮಿಕರಿಗೆ ಇಲ್ಲಿ ಮನೆ ನಿರ್ಮಿಸಿ ಅವ ರನ್ನು ಮತ್ತೆ ಕೊಳಚೆ ಪ್ರದೇಶಕ್ಕೆ ಸೇರಿಸುವ ಪ್ರಯತ್ನ ಮಾಡುತ್ತಿದ್ದೀರಿ. ಪೌರಕಾರ್ಮಿಕರು ಕೊಳಚೆ ಪ್ರದೇಶ ದಲ್ಲೇ ವಾಸಿಸಬೇಕೆ? ರಮಾಬಾಯಿನಗರದಲ್ಲಿ ಸೂಕ್ತ ಜಾಗವಿದ್ದು, ಅಲ್ಲಿ ಮನೆಗಳನ್ನು ನಿರ್ಮಿಸಿಕೊಟ್ಟರೆ ಅನು ಕೂಲವಾಗಲಿದೆ. ಅಲ್ಲದೆ, ನಮ್ಮ ಮಕ್ಕಳು ಆಟವಾಡಲು ಜಯನಗರದ ಉದ್ಯಾನವನಕ್ಕೆ ಹೋಗುತ್ತಾರೆ. ಹಾಗಾಗಿ ಈ ಜಾಗದಲ್ಲಿ ಗ್ರಂಥಾಲಯ, ಉದ್ಯಾನವನ, ಅಂಗನ ವಾಡಿ ಕೇಂದ್ರ ನಿರ್ಮಿಸುವಂತೆ ಒತ್ತಾಯಿಸಿದರು.

ಈ ವೇಳೆ ಮೇಯರ್ ಪುಷ್ಪಲತಾ ಜಗನ್ನಾಥ್ ಮಾತ ನಾಡಿ, ನಿಮ್ಮ ಕೋರಿಕೆಯ ಮೇರೆಗೆ ಈ ಜಾಗದಲ್ಲಿ ಪೌರಕಾರ್ಮಿಕರಿಗೆ ಮನೆ ನಿರ್ಮಿಸುವ ಕುರಿತಂತೆ ಕೌನ್ಸಿಲ್‍ನಲ್ಲಿ ಚರ್ಚಿಸಲಾಗುವುದು ಎಂದರು. ಉಪ ಮೇಯರ್ ಶಫಿ ಅಹಮದ್, ಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಎಸ್‍ಬಿಎಂ ಮಂಜು, ಪ್ರೇಮಾ ಶಂಕರೇಗೌಡ, ಶೋಭಾ ಸುನೀಲ್ ಸೇರಿದಂತೆ 30ಕ್ಕೂ ಹೆಚ್ಚು ಮಂದಿ ಸದಸ್ಯರು ಉಪಸ್ಥಿತರಿದ್ದರು.

Translate »