ದಿನೇ ದಿನೆ ಹರಿದುಬರುತ್ತಿದೆ ಗ್ರೀನ್‍ಬಡ್ಸ್‍ನ ಸಂತ್ರಸ್ತ ಠೇವಣಿದಾರರ ದಂಡು
ಮೈಸೂರು

ದಿನೇ ದಿನೆ ಹರಿದುಬರುತ್ತಿದೆ ಗ್ರೀನ್‍ಬಡ್ಸ್‍ನ ಸಂತ್ರಸ್ತ ಠೇವಣಿದಾರರ ದಂಡು

December 28, 2018

* ಉಪ ವಿಭಾಗಾಧಿಕಾರಿಗೆ ಪ್ರತಿ ನಿತ್ಯ 20 ಸಾವಿರಕ್ಕೂ ಅಧಿಕ ಮಂದಿ ಅಹವಾಲು ಸಲ್ಲಿಕೆ
* ರಾಜ್ಯದ ಮೂಲೆ ಮೂಲೆಗಳಿಂದ ಮೈಸೂರಿಗೆ ಧಾವಿಸುತ್ತಿರುವ ಠೇವಣಿದಾರರು

ಮೈಸೂರು: ಗ್ರೀನ್ ಬಡ್ಸ್ ಸಂಸ್ಥೆಯಲ್ಲಿ ಠೇವಣಿಯಿಟ್ಟು ವಂಚನೆ ಗೊಳಗಾಗಿರುವ ಲಕ್ಷಾಂತರ ಹೂಡಿಕೆ ದಾರರು ತಾವು ಠೇವಣಿಯಿಟ್ಟಿರುವ ಹಣಕ್ಕೆ ಸಂಬಂಧಿಸಿದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ರಾಜ್ಯದ ವಿವಿಧೆಡೆಯಿಂದ ಸಾಗ ರೋಪಾದಿಯಲ್ಲಿ ಮೈಸೂರಿನ ಉಪ ವಿಭಾಗಾ ಧಿಕಾರಿಗಳ ಕಚೇರಿಗೆ ಲಗ್ಗೆ ಇಡುತ್ತಿದ್ದಾರೆ.

ಕಳೆದ ಒಂದು ತಿಂಗಳಿಂದಲೂ ಗ್ರೀನ್ ಬಡ್ಸ್ ಸಂಸ್ಥೆಯ ಹೂಡಿಕೆದಾರರಿಂದ ಅರ್ಜಿ ಪಡೆಯುವ ಪ್ರಕ್ರಿಯೆ ಮೈಸೂರಿನ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ನಡೆ ಯುತ್ತಿದೆಯಾದರೂ ಅರ್ಜಿ ಸಲ್ಲಿಸುವವರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿರುವುದರಿಂದ ಅರ್ಜಿ ಪಡೆಯುವುದನ್ನು 2 ದಿನಗಳ ಕಾಲ ವಿಸ್ತರಿಸಲಾ ಗಿತ್ತು. ಆದರೆ, ಅವಧಿ ವಿಸ್ತರಿಸಿದಷ್ಟು ಅರ್ಜಿಗಳು ಭಾರೀ ಪ್ರಮಾಣದಲ್ಲಿ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಅರ್ಜಿ ಪಡೆಯುವ ಅವಧಿ ಯನ್ನು ಇನ್ನಷ್ಟು ವಿಸ್ತರಿಸಬೇಕೇ ಎಂಬ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.

ರಾಜ್ಯದ ವಿವಿಧ ಭಾಗಗಳಿಂದ ಮೈಸೂ ರಿಗೆ ಹೂಡಿಕೆದಾರರು ಬರುತ್ತಿರುವ ಕಾರಣ ಅಧಿಕಾರಿಗಳು ರಾತ್ರಿ 8 ಗಂಟೆವರೆವಿಗೂ ಅರ್ಜಿ ಸ್ವೀಕರಿಸುತ್ತಿದ್ದಾರೆ. ಆದರೂ ಅರ್ಜಿ ಸಲ್ಲಿಸಲಾಗದ ಹೂಡಿಕೆದಾರರು ಮೈಸೂರಲ್ಲೇ ವಾಸ್ತವ್ಯ ಹೂಡಿ ಮರುದಿನ ಬೆಳಿಗ್ಗೆಯೇ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಸರದಿ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸುತ್ತಿ ರುವುದು ಸರ್ವೇ ಸಾಮಾನ್ಯವಾಗಿದೆ.

ಹಿನ್ನೆಲೆ: ಮೈಸೂರಿನಲ್ಲಿ ಕೇಂದ್ರ ಕಚೇರಿ ಹೊಂದಿದ್ದ ಗ್ರೀನ್ ಬಡ್ಸ್ ಸಂಸ್ಥೆಯು ದುಪ್ಪಟ್ಟು ಹಣದ ಆಮಿಷ ಒಡ್ಡಿ ರಾಜ್ಯದ ವಿವಿಧೆಡೆಗಳಿಂದ ಏಜೆಂಟರುಗಳನ್ನು ನೇಮಿಸಿ ಕೊಂಡು ಅವರ ಮೂಲಕ ಹಣ ಸಂಗ್ರಹಿಸುತ್ತಿತ್ತು. ಪ್ರಾರಂಭದಲ್ಲಿ ಸಂಸ್ಥೆ ಹೇಳಿದಂತೆ ಹಣ ಹಿಂತಿರುಗಿಸುತ್ತಿತ್ತಾದರೂ ಆನಂತರ ಅವಧಿ ಮುಗಿದರೂ ಹೂಡಿಕೆದಾರರಿಗೆ ಹಣ ಪಾವತಿಸದೆ ವಂಚಿಸಿತ್ತು. ಹೂಡಿಕೆದಾರರಿಂದ ಹಣ ಸಂಗ್ರಹಿಸಿದ್ದ ಏಜೆಂಟರು ಕೂಡ ಇಕ್ಕಟ್ಟಿಗೆ ಸಿಲುಕಿದ್ದರು. ಈ ಹಿನ್ನೆಲೆಯಲ್ಲಿ ಹಲವಾರು ಪ್ರತಿಭಟನೆಗಳು ನಡೆದಿದ್ದವು. ಮೈಸೂರಿನ ಈ ಹಿಂದಿನ ಉಪವಿಭಾಗಾಧಿ ಕಾರಿಯಾಗಿದ್ದ ಹಾಲಿ ಚಾಮರಾಜನಗರ ಅಪರ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಗ್ರೀನ್ ಬಡ್ಸ್ ಸಂಸ್ಥೆಯ ಹೆಸರಿನಲ್ಲಿ ವಿವಿಧೆಡೆ ಇರುವ ಆಸ್ತಿಗಳ ವಿವರವನ್ನು ಸಂಗ್ರಹಿಸಿ ಸರ್ಕಾ ರಕ್ಕೆ ವರದಿ ಸಲ್ಲಿಸಿದ್ದರು. ಈ ವರದಿಯ ಅನುಸಾರ ಗ್ರೀನ್ ಬಡ್ಸ್ ಸಂಸ್ಥೆಯ ಆಸ್ತಿಯನ್ನು ಹರಾಜು ಹಾಕಿ ಹೂಡಿಕೆದಾರರಿಗೆ ಹಣ ಹಿಂತಿ ರುಗಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿತ್ತು. ಅದರ ಅನ್ವಯ ಹೂಡಿಕೆ ದಾರರಿಂದ ದಾಖಲೆ ಸಮೇತ ಅರ್ಜಿ ಸ್ವೀಕರಿಸುವ ಕಾರ್ಯ ನಡೆಯುತ್ತಿದೆ. ಇಂದು ಅರ್ಜಿ ಸ್ವೀಕರಿಸಲು ಕೊನೆಯ ದಿನವಾಗಿತ್ತು. ಆದರೆ ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದ ಕಾರಣ ಎರಡು ದಿನ ವಿಸ್ತರಿಸಲಾಗಿದೆ.
ಡಿ.26ರವರೆಗೆ ಉಪವಿಭಾಗಾಧಿಕಾರಿಗಳ ಕಚೇರಿಗೆ 1.19 ಲಕ್ಷ ಅರ್ಜಿಗಳು ಸಲ್ಲಿಕೆ ಯಾಗಿದ್ದವು. ಪ್ರತಿದಿನ 20 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಕೊನೆಯ ದಿನ ಸಮೀಪಿಸುತ್ತಿದ್ದಂತೆಯೇ ಅರ್ಜಿ ಸಲ್ಲಿಸುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.

ಕೆಲವರಿಗೆ ಸಂಕಷ್ಟ: ಗ್ರೀನ್ ಬಡ್ಸ್ ಸಂಸ್ಥೆಯು ಬಾಗಿಲು ಮುಚ್ಚಿದ ಆರಂಭದ ದಿನಗಳಲ್ಲೇ ಏಜೆಂಟರು ಮತ್ತು ಹೂಡಿಕೆದಾರರು ಪ್ರತಿ ಭಟನೆ ನಡೆಸಿದಾಗ ಸಂಸ್ಥೆಯು ತನ್ನ ಕೆಲವು ಪ್ರತಿನಿಧಿಗಳ ಮೂಲಕ ಹಣ ಹಿಂತಿರುಗಿಸು ವುದಾಗಿ ತಿಳಿಸಿ ಬಾಂಡ್‍ಗಳನ್ನು ಸಂಗ್ರಹಿಸಿ, ಅವರಿಗೆ ಕಂಪ್ಯೂಟರ್‍ನಲ್ಲಿ ಮುದ್ರಿಸಿದ ಬಾಂಡ್ ಸಂಖ್ಯೆಯ ರಸೀದಿಯನ್ನಷ್ಟೇ ನೀಡಿತ್ತು. ಈಗ ಅರ್ಜಿ ಸಲ್ಲಿಸುವ ವೇಳೆ ಬಾಂಡ್‍ನ ಪ್ರತಿಯನ್ನು ಸಲ್ಲಿಸದಿದ್ದರೆ ಅರ್ಜಿ ಅನರ್ಹ ಗೊಳ್ಳುತ್ತದೆ ಎಂದು ಹೇಳಲಾಗುತ್ತಿದ್ದು, ಸಂಸ್ಥೆಗೆ ಬಾಂಡ್ ನೀಡಿ ರಸೀದಿ ಪಡೆದಿರು ವವರು ಸಂಕಷ್ಟಕ್ಕೊಳಗಾಗಿದ್ದಾರೆ. ಹುಣಸೂರು ತಾಲೂಕು ಹನಗೋಡು ನಿವಾಸಿ, ವಿಕಲ ಚೇತನರಾದ ರಾಜು ಎಂಬುವರು ಸುಮಾರು 250ಕ್ಕೂ ಹೆಚ್ಚು ಹೂಡಿಕೆದಾರರಿಂದ 1.35,605 ರೂ.ಗಳನ್ನು ಸಂಗ್ರಹಿಸಿದ್ದರು. ಅವರು ಅದಕ್ಕೆ ಸಂಬಂಧಪಟ್ಟ ಬಾಂಡ್‍ಗಳನ್ನು ಗ್ರೀನ್ ಬಡ್ಸ್ ಸಂಸ್ಥೆಗೆ ಹಿಂದಿರುಗಿಸಿ ರಸೀದಿಗಳನ್ನು ಪಡೆದಿದ್ದಾರೆ. ಈ ನಡುವೆ ರಾಜು ಅನಾ ರೋಗ್ಯಕ್ಕೆ ತುತ್ತಾಗಿ ನಿಧನರಾಗಿದ್ದು, ಅವರು ಸಂಗ್ರಹಿಸಿದ್ದ ಠೇವಣಿಗೆ ಸಂಬಂಧಪಟ್ಟ ಮಾಹಿತಿಯನ್ನು 2 ಸಿಡಿಗಳಲ್ಲಿ ಸಂಗ್ರಹಿ ಸುತ್ತಿದ್ದಾರೆ. ಈ ಸಿಡಿಗಳನ್ನು ಸ್ವೀಕರಿಸುವುದಿಲ್ಲ ಎಂದು ಹೇಳಲಾಗುತ್ತಿದ್ದು, ರಾಜು ಮೂಲಕ ಹಣ ಠೇವಣಿ ಇಟ್ಟಿರುವ ಹೂಡಿಕೆದಾರರು ಆತಂಕಕ್ಕೊಳಗಾಗಿದ್ದಾರೆ.

Translate »