ಮದುವೆಗೆ ನಿರಾಕರಿಸಿದ  ಪ್ರಿಯಕರ: ನರ್ಸ್ ಆತ್ಮಹತ್ಯೆ
ಮೈಸೂರು

ಮದುವೆಗೆ ನಿರಾಕರಿಸಿದ ಪ್ರಿಯಕರ: ನರ್ಸ್ ಆತ್ಮಹತ್ಯೆ

January 19, 2019

ನಂಜನಗೂಡು: ಕಳೆದ ಮೂರು ವರ್ಷಗಳಿಂದ ತನ್ನನ್ನು ಪ್ರೀತಿಸುತ್ತಿದ್ದ ಪ್ರಿಯಕರ ಮದುವೆಯಾಗಲು ನಿರಾಕರಿಸಿದ ಕಾರಣ ಮನನೊಂದು ನರ್ಸ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಂಜನಗೂಡು ತಾಲೂಕು ಲಕ್ಷ್ಮಣಾಪುರ- ಕೂಗಲೂರು ರಸ್ತೆಯಲ್ಲಿ ಗುರುವಾರ ನಡೆದಿದೆ.

ಬೆಂಗಳೂರಿನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ನಂಜನಗೂಡು ತಾಲೂಕು ಕೂಗಲೂರು ಗ್ರಾಮದ ಸವಿತಾ ಆತ್ಮಹತ್ಯೆಗೆ ಶರಣಾದವರಾಗಿದ್ದು, ಈಕೆಯ ಪ್ರಿಯಕರ ಮದುವೆಯಾಗಲು ನಿರಾಕರಿಸಿದ್ದೇ ಈಕೆಯ ಆತ್ಮಹತ್ಯೆಗೆ ಕಾರಣ ಎಂದು ಸವಿತಾ ತಾಯಿ ನಾಗಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ತನ್ನ ಪುತ್ರಿ ಸವಿತಾ ಸಿದ್ದಯ್ಯನಹುಂಡಿ ಗ್ರಾಮದ ಶಂಕರ್ ಎಂಬಾತನನ್ನು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದಳು ಎಂಬುದು ನಮಗೆ ಕೆಲವು ತಿಂಗಳ ಹಿಂದೆ ಗೊತ್ತಾಯಿತು. ಈ ಹಿನ್ನೆಲೆಯಲ್ಲಿ ನಾನು ಮತ್ತು ಸಂಬಂಧಿಕರು ಶಂಕರ್‍ನನ್ನು ಭೇಟಿ ಮಾಡಿ ನಮ್ಮ ಪುತ್ರಿಯ ತಂಟೆಗೆ ಬರಬೇಡ ಎಂದು ಹೇಳಿದೆ ವಾದರೂ ಆತ ಅದಕ್ಕೆ ನಿರಾಕರಿಸಿ ಸವಿತಾಳನ್ನೇ ಮದುವೆಯಾಗುವುದಾಗಿ ಹೇಳಿದ್ದ.

ಎಷ್ಟೇ ಬುದ್ಧಿವಾದ ಹೇಳಿದರು ಕೇಳದ ಸವಿತಾ ತಾನು ಶಂಕರನನ್ನೇ ಮದುವೆ ಯಾಗುವುದಾಗಿ ಪಟ್ಟುಹಿಡಿದಿದ್ದಳು. ಕಳೆದ ಒಂದು ತಿಂಗಳಿನಿಂದ ಕೆಲಸಕ್ಕೆ ರಜೆ ಹಾಕಿ ಗ್ರಾಮಕ್ಕೆ ಬಂದಿದ್ದ ಸವಿತಾ, ತಾನು ಪ್ರೀತಿಸುತ್ತಿದ್ದ ಶಂಕರ ಬೇರೆ ಹುಡುಗಿಯನ್ನು ಮದುವೆಯಾಗಲು ಪ್ರಯತ್ನಿ ಸುತ್ತಿದ್ದಾನೆ ಎಂಬುದು ತಿಳಿದು ಆತನನ್ನು ಪ್ರಶ್ನಿಸಿದಾಗ, ಜಾತಿ ಬೇರೆಯಾಗಿರುವುದರಿಂದ ನಿನನ್ನು ಮದುವೆ ಯಾಗಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದಾನೆ ಎಂದು ಮಗಳು ನನಗೆ ತಿಳಿಸಿದ್ದಳು ಎಂದು ದೂರಿನಲ್ಲಿ ಹೇಳಿರುವ ನಾಗಮ್ಮ, ಗುರುವಾರ ಬೆಳಿಗ್ಗೆ 11 ಗಂಟೆಯಲ್ಲಿ ತನ್ನ ಸ್ಕೂಟರ್‍ನಲ್ಲಿ (ಕೆಎ.09-ಹೆಚ್‍ಎಸ್.7646) ಹೊರಗಡೆ ಹೋದ ಸವಿತಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಆತ್ಮಹತ್ಯೆಗೆ ಪ್ರಿಯಕರ ಶಂಕರನೇ ಕಾರಣವಾಗಿದ್ದು, ಆತನ ಮೇಲೆ ಕ್ರಮಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Translate »