ಚುಂಚನಕಟ್ಟೆ: ತಾಲೂಕಿನ ಚುಂಚನಕಟ್ಟೆಯ ಬಳಿ ಹರಿಯುವ ಕಾವೇರಿ ನದಿಯಲ್ಲಿ ಬಾಲಕರಿಬ್ಬರು ನೀರು ಪಾಲಾಗಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಕೆ.ಆರ್.ನಗರ ತಾಲೂಕಿನ ಮನುಗನಹಳ್ಳಿ ಗ್ರಾಮದ ಮಂಜ ಶೆಟ್ಟಿ ಅವರ ಮಗ ಲೋಕೇಶ್ ಶಟ್ಟಿ(16), ಮತ್ತು ಹೊಳೆನರಸೀ ಪುರ ತಾಲೂಕು ಆನೆಕನ್ನಂಬಾಡಿ ಗ್ರಾಮದ ಮಹದೇವ ಎಂಬು ವವರ ಮಗ ಹರ್ಷ(11) ಎಂಬುವವರೆ ನದಿಯಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಗಳು. ಚುಂಚನಕಟ್ಟೆ ಜಾತ್ರೆಯಲ್ಲಿ ಸವಿತಾ ಸಮಾಜದವರು ಇಂದು ಪರ(ಹಬ್ಬ)ಮಾಡುತ್ತಿದ್ದರು. ಅವರ ಜೊತೆ ಬಂದಿದ್ದ ಈ ಇಬ್ಬರು ಬಾಲಕರು ತಮ್ಮ ಪೋಷಕರ ಕಣ್ತಪ್ಪಿಸಿ ನೀರಿಗಿಳಿದಿದ್ದಾರೆ ಎನ್ನಲಾಗಿದೆ. ಈ ಸ್ಥಳದಲ್ಲಿ ಸುಳಿಗಳಿದ್ದ ಕಾರಣ ಬಾಲಕರು ನೀರಿನಲ್ಲಿ ಮುಳುಗಿದ್ದಾರೆ. ನದಿಯಲ್ಲಿ ಬಾಲಕರು ಮುಳುಗುತ್ತಿದ್ದುದನ್ನು ಕಂಡ ಸಾರ್ವಜನಿಕರು ಅವರನ್ನು ರಕ್ಷಣೆ ಮಾಡಲು ಪ್ರಯತ್ನಿಸಿದರಾದರೂ ಅಷ್ಟರಲ್ಲಿ ಅವರು ಮತ್ತು ಪೋಷಕರಿಗೆ ತಿಳಿಸಲಾಯಿತು. ಘಟನಾ ಸ್ಥಳಕ್ಕೆ ಚುಂಚನಕಟ್ಟೆ ಪೊಲೀಸ್ ಠಾಣೆಯ ಮುಖ್ಯ ಪೇದೆ ಸುಬ್ರಹ್ಮಣ್ಯ ಮತ್ತು ಪೊಲೀಸರಾದ ರಾಘು ಭೇಟಿ ನೀಡಿ ನುರಿತ ಈಜುಗಾರರು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಶವಗಳನ್ನು ಹೊರತೆಗೆಸಿ ಮರಣೋತ್ತರ ಪರೀಕ್ಷೆಗಾಗಿ ಕೆ.ಆರ್.ನಗರ ಸಾರ್ವಜನಿಕರ ಆಸ್ಪತ್ರೆಗೆ ಸಾಗಿಸಿದರು.
ಪೋಷಕರ ಆಕ್ರಂದನ: ಬಾಲಕರಿಬ್ಬರು ನದಿಯಲ್ಲಿ ಮುಳುಗಿ ಹೋಗಿದ್ದರಿಂದ ಮೃತರ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು ದೃಶ್ಯವನ್ನು ಕಂಡ ಸಾರ್ವಜನಿಕರ ಕಣ್ಣಾಲಿಗಳು ತೇವಗೊಂಡವು. ಈ ಸಂಬಂದ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.