ರಸ್ತೆಗಿಳಿದಿವೆ ಹುಚ್ಚು ಕುದುರೆಗಳು!
ಮೈಸೂರು

ರಸ್ತೆಗಿಳಿದಿವೆ ಹುಚ್ಚು ಕುದುರೆಗಳು!

May 5, 2019

ಮೈಸೂರು: ಜೀವ ಬಲಿಯಾಗಿ ದ್ದರೂ ಬಿಡಾಡಿ ಕುದುರೆಗಳಿಗೆ ಕಡಿವಾಣ ಹಾಕುವಲ್ಲಿ ಮೈಸೂರು ನಗರಪಾಲಿಕೆ ನಿರ್ಲಕ್ಷ್ಯ ತಳೆದಿರುವುದು ವಿಷಾದನೀಯ. ಮೈಸೂರಿನ ಮಾನಸಗಂಗೋತ್ರಿ ಎಸ್‍ಜೆ ಸಿಇ ಮುಖ್ಯ ರಸ್ತೆಯಲ್ಲಿ ನಾಲ್ಕೈದು ಬಿಡಾಡಿ ಕುದುರೆಗಳು ಸ್ವಚ್ಛಂದವಾಗಿ ಅಡ್ಡಾಡುತ್ತಿದ್ದವು. ಕೆಲ ಹೊತ್ತು ಫುಟ್ ಪಾತ್‍ನಲ್ಲಿ ಹುಲ್ಲು ಮೇದು ಮತ್ತೆ ರಸ್ತೆಗೆ ಇಳಿಯುತ್ತಿದ್ದವು. ವಾಹನ ಹತ್ತಿರ ಬರುತ್ತಿದ್ದಂತೆ ಕುದುರೆಗಳು ಅಡ್ಡಾದಿಡ್ಡಿ ಯಾಗಿ ಓಡಾಡುತ್ತಿದ್ದವು. ಇದರಿಂದ ದ್ವಿಚಕ್ರ ವಾಹನ ಸವಾರರು, ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳು ಭಯದಿಂದಲೇ ಸಂಚರಿಸುತ್ತಿದ್ದರು.

ಈ ರಸ್ತೆಯಲ್ಲಿ ಆಗಾಗ್ಗೆ ಕುದುರೆಗಳು ಓಡಾಡುತ್ತವೆ. ಇವು ಗಳನ್ನು ನೋಡಿದಾಗಲೆಲ್ಲಾ ಹಿಂದಿನ ಕಹಿ ಘಟನೆಗಳು ನೆನ ಪಾಗಿ, ಆತಂಕ ಹೆಚ್ಚುತ್ತದೆ. ಇಲ್ಲಿ ವಾಹನ ಸಂಚಾರ ಹೆಚ್ಚಿರು ವುದರಿಂದ ಅಪಘಾತ ಸಂಭವಿಸುವ ಸಾಧ್ಯತೆಯೂ ಇದೆ. ಹಾಗಾದರೆ ವಾಹನ ಸವಾರರು ಅಥವಾ ಮೂಕ ಪ್ರಾಣಿಗಳಿಗೂ ಪೆಟ್ಟಾಗಬಹುದು. ಈ ಬಗ್ಗೆ ಪಾಲಿಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಮಾಲೀಕರನ್ನು ಪತ್ತೆಹಚ್ಚಿ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದರು.

5 ತಿಂಗಳ ಹಿಂದೆ ಮಹಿಳೆ ಬಲಿ: ಬಿಡಾಡಿ ಹುಚ್ಚು ಕುದುರೆಗಳ ದಾಳಿಯಿಂದ 5 ತಿಂಗಳ ಹಿಂದೆ ಅಮಾಯಕ ಮಹಿಳೆಯೊಬ್ಬರು ಬಲಿಯಾಗಿದ್ದರು. 2018ರ ಡಿ.17ರಂದು ಗಾಯತ್ರಿಪುರಂ 1ನೇ ಹಂತದ ಬೀದಿಯೊಂದರಲ್ಲಿ ಕಾದಾ ಡುತ್ತಿದ್ದ ಹುಚ್ಚು ಕುದುರೆಗಳು ಅಲ್ಲಿಯೇ ಸೊಪ್ಪು ಮಾರಾಟ ಮಾಡುತ್ತಿದ್ದ ಮುನೇಶ್ವರನಗರ ನಿವಾಸಿ, 55 ವರ್ಷದ ಪಾರ್ವತಮ್ಮ ಅವರ ಮೇಲೆರಗಿದ್ದವು. ತೀವ್ರ ರಕ್ತಸ್ರಾವದಿಂದ ಪಾರ್ವತಮ್ಮ ಸ್ಥಳದಲ್ಲೇ ಮೃತಪಟ್ಟರು. ಇದಕ್ಕಿಂತ ಹಿಂದೆಯೂ ದೇವರಾಜ ಅರಸು ರಸ್ತೆ, ಚಾಮರಾಜ ಜೋಡಿ ರಸ್ತೆ ಇನ್ನಿ ತರ ಕಡೆಗಳಲ್ಲಿ ಬಿಡಾಡಿ ಕುದುರೆಗಳು ಸಾರ್ವಜನಿಕರ ಮೇಲೆ ದಾಳಿ ನಡೆಸಿವೆ. ಹಲವು ವಾಹನಗಳಿಗೆ ಹಾನಿ ಯಾಗಿರುವುದಲ್ಲದೆ ಅನೇಕ ಮಂದಿ ಗಾಯಗೊಂಡಿದ್ದರು.

ಘಟನೆಯಾದ ಮರುದಿನ ಮಾತ್ರ ಬಿಡಾಡಿ ಪ್ರಾಣಿಗಳ ಸೆರೆಗೆ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುವ ನಗರ ಪಾಲಿಕೆ, ಕೆಲ ದಿನಗಳು ಕಳೆಯುತ್ತಿದ್ದಂತೆ ಕೈಕಟ್ಟಿ ಕುಳಿತುಕೊಳ್ಳುತ್ತದೆ. ನೆಪಮಾತ್ರಕ್ಕೆ ಕೆಲ ಪ್ರಾಣಿಗಳ ಸೆರೆ ಹಿಡಿದು, ಮಾಲೀಕರಿಂದ ದಂಡ ವಸೂಲಿ ಮಾಡಿದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಮತ್ತೊಂದು ದುರ್ಘಟನೆ ಸಂಭವಿಸದಂತೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Translate »