ವರ್ಣರಂಜಿತ ದಶಮಂಟಪ ಮೆರವಣಿಗೆಗೆ ವರುಣನ ಸಿಂಚನ: ಪ್ರವಾಸಿಗರ ಸಂಖ್ಯೆ ಇಳಿಮುಖ
ಕೊಡಗು

ವರ್ಣರಂಜಿತ ದಶಮಂಟಪ ಮೆರವಣಿಗೆಗೆ ವರುಣನ ಸಿಂಚನ: ಪ್ರವಾಸಿಗರ ಸಂಖ್ಯೆ ಇಳಿಮುಖ

October 21, 2018

ಮಡಿಕೇರಿ: ದುಷ್ಟ ಸಂಹಾರ ಶಿಷ್ಟ ಪರಿಪಾಲನೆಯ ಸಂದೇಶ ಸಾರುವ ಐತಿಹಾಸಿಕ ಮಡಿಕೇರಿ ದಸರಾ ಉತ್ಸವ ಮಳೆಯ ನಡುವೆಯೇ ಸಾಂಪ್ರದಾಯಿಕವಾಗಿ ನೆರವೇರಿತು. ನವದುರ್ಗೆಯರು ವಿವಿಧ ರೂಪ ತಾಳಿ ಅಸುರರನ್ನು ಸಂಹರಿಸುವ ಕಥಾ ಹಂದರ ಹೊಂದಿದ ದಶ ಮಂಟಪಗಳು, ದೈವಿಲೋಕವನ್ನು ಧರೆಗಿಳಿ ಸುವ ಮೂಲಕ ಮಡಿಕೇರಿ ದಸರಾಕ್ಕೆ ಮೆರಗು ತುಂಬಿದವು.

ಶಕ್ತಿ ದೇವತೆಗಳಾದ ಶ್ರೀ ಚೌಟಿ ಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕಂಚಿ ಕಾಮಾಕ್ಷಿಯಮ್ಮ, ಹಾಗೂ ಶ್ರೀ ಕೋಟೆ ಮಾರಿಯಮ್ಮ ಮಂಟಪಗಳೊಂದಿಗೆ ಶ್ರೀ ಪೇಟೆ ಶ್ರೀರಾಮ ಮಂದಿರ, ಶ್ರೀ ಕರವಲೆ ಭಗವತಿ, ಶ್ರೀ ಕೋದಂಡ ರಾಮ, ದೇಚೂರು ಶ್ರೀ ರಾಮಮಂದಿರ, ಶ್ರೀ ಕೋಟೆ ಗಣಪತಿ, ಶ್ರೀ ಚೌಡೇಶ್ವರಿ ದೇವಾ ಲಯಗಳು ವಿವಿಧ ಪೌರಾಣಿಕ ಕಥಾ ಹಂದರದೊಂದಿಗೆ ಮಂಟಪಗಳನ್ನು ಸಿದ್ಧಪಡಿಸಿ ಶೋಭಾ ಯಾತ್ರೆ ನಡೆಸಿದವು.

ಸಾಂಪ್ರದಾಯಿಕ ವಾಲಗ, ಪೂಕೋಡ್ ಬ್ಯಾಂಡ್‍ಸೆಟ್‍ನೊಂದಿಗೆ ಡಿ.ಜೆ.ಸೌಂಡ್ಸ್ ಗಳು ಕೂಡ ದಶಮಂಟಪಗಳ ಶೋಭಾ ಯಾತ್ರೆಗೆ ಮೆರಗು ತುಂಬಿದವು. ಡಿಂಡಿಗಲ್‍ನ ವಿದ್ಯುತ್ ಅಲಂಕೃತ ಲೈಟಿಂಗ್ ಬೋರ್ಡ್ ನೊಂದಿಗೆ ದಶಮಂಟಪಗಳ ಕಥಾ ಸಾರಾಂಶ ಮತ್ತು ದೇವತೆಗಳಿಂದ ಅಸುರರು ಸಂಹಾರವಾಗುವ ಘಟನಾವಳಿಗಳಿಗೆ ತಕ್ಕಂತೆ ಮಂಟಪ ಗಳಲ್ಲಿ ಸ್ಟುಡಿಯೋ ಲೈಟ್ ಸೆಟ್ಟಿಂಗ್ ವ್ಯವಸ್ಥೆ ಯನ್ನು ಅಳವಡಿಸಲಾಗಿತ್ತು. ಪೌರಾಣಿಕ ಹಿನ್ನೆಲೆ ಹೊಂದಿರುವ ಶ್ರೀ ಪೇಟೆ ಶ್ರೀರಾಮ ಮಂದಿರ ಮಂಟಪ ಸಂಪ್ರದಾಯದಂತೆ ದಶಮಂಟಪಗಳನ್ನು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲು ಅಣಿಗೊಳಿಸಿತು.

ದಶಮಂಟಪಗಳ ದೈವಿ ಸ್ಥಾನದಲ್ಲಿ ಮಹಾ ಪೂಜೆ ನೆರವೇರಿಸಿ, ಮಂಟಪಗಳಿಗೂ ಪೂಜೆ ಸಲ್ಲಿಸಿ ರಾತ್ರಿ 10.30 ವೇಳೆಗೆ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡವು. ಬಹುತೇಕ ಮಂಟಪಗಳು ಇದೇ ಮೊದಲ ಬಾರಿಗೆ ಎಂಬಂತೆ ಜನರಿಗಾಗಿ 8 ರಿಂದ 10 ಬಾರಿ ಪ್ರದರ್ಶನ ನೀಡಿ ಮನರಂಜನೆ ಒದಗಿಸಿದರು. ಜನರು ಕೂಡ ದಶಮಂಟಪಗಳ ಪ್ರದರ್ಶನ ವನ್ನು ಕಣ್ತುಂಬಿಕೊಂಡರು. ಅಬ್ಬರದ ಡಿ.ಜೆ. ಧ್ವನಿವರ್ಧಕಗಳ ಮ್ಯೂಸಿಕ್ ಮತ್ತು ಬ್ಯಾಂಡ್ ಸೆಟ್ಟ್‍ಗೆ ಯುವಕ ಯುವತಿ ಯರು ಕುಣಿದು ಕುಪ್ಪಳಿಸುತ್ತಾ ಮಂಟಪ ಗಳೊಂದಿಗೆ ಸಾಗಿ ಬಂದರು. ನಗರದ ಮುಖ್ಯ ಬೀದಿಗಳಲ್ಲಿ ಶೋಭಾಯತ್ರೆ ನಡೆಸಿದ ದಶಮಂಟಪಗಳು ಅ.20ರಂದು ಬೆಳಿಗ್ಗೆ ನಗರದ ಎ.ವಿ.ಶಾಲೆಯ ಬಳಿಯಿರುವ ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಕಡಿದು ತಮ್ಮ ಮೂಲ ಸ್ಥಾನಗಳಿಗೆ ಮರಳಿದವು.

ಕರಗಗಳ ಪ್ರದಕ್ಷಿಣೆ: ವಿಜಯ ದಶಮಿಯ ದಿನದಂದು ಶಕ್ತಿ ದೇವಿಗಳ 4 ಕರಗಗಳು ನಗರದಲ್ಲಿ ಪ್ರದಕ್ಷಿಣೆ ನಡೆಸಿದವು. ದಶ ಮಂಟಪಗಳ ಬಳಿಗೂ ತೆರಳಿ ಸಂಗೀತ ವಾದ್ಯಗಳಿಗೆ ನರ್ತಿಸಿ ಶೋಭಾಯಾತ್ರೆಗೆ ಯಾವುದೇ ವಿಘ್ನಗಳು ಎದುರಾಗದಿರಲೆಂದು ಹರಸಿದವು. ದಸರಾ ಉತ್ಸವದಲ್ಲಿ ಪಾಲ್ಗೊಂ ಡಿದ್ದ ಜನರು ಕೂಡ ಶಕ್ತಿ ದೇವತೆಗಳ ಕರಗಗಳಿಗೆ ಭಕ್ತಿ ಸಮರ್ಪಿಸಿದರು. ದಶ ಮಂಟಪಗಳ ದೇವಾಲಯಗಳಿಗೆ ತೆರಳಿದ ಕರಗಗಳು ಪೂಜೆ ಸ್ವೀಕರಿಸಿದವು.

ಪ್ರವಾಸಿಗರ ಕೊರತೆ : ಮೈಸೂರು ದಸರಾ ಹೊರತುಪಡಿಸಿದರೆ ಅದ್ದೂರಿ ಮತ್ತು ಸಂಭ್ರಮದಿಂದ ನಡೆಯುವ ಮಡಿಕೇರಿ ದಸರಾಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿರಲಿಲ್ಲ. ಹಿಂದಿನ ವರ್ಷಗಳಂತೆ ಕಿಕ್ಕಿರಿದು ತುಂಬುತ್ತಿದ್ದ ನಗರಸಭಾ ಮುಂಭಾಗ ರಸ್ತೆ, ಪೊಲೀಸ್ ಠಾಣೆ ಎದುರು ಭಾಗ, ಖಾಸಗಿ ನಿಲ್ದಾಣದಿಂದ ಪೋಸ್ಟ್ ಆಫೀಸ್‍ವರೆಗಿನ ರಸ್ತೆಗಳಲ್ಲಿ ಈ ವರ್ಷ ಜನಸಂದಣಿಯೇ ಕಂಡು ಬರಲಿಲ್ಲ. ಸಾಮಾನ್ಯವಾಗಿ ಮೈಸೂರು ದಸರಾ ವೀಕ್ಷಿಸಿದ ಬಳಿಕ ಹೊರ ಊರುಗಳ ಪ್ರವಾಸಿಗರು ರಾತ್ರಿಯಿಂದ ಬೆಳಗ್ಗಿನವರೆಗೆ ನಡೆಯುವ ಮಡಿಕೇರಿ ದಸರಾ ಸಂಭ್ರಮವನ್ನು ಕಣ್ತುಂಬಿ ಕೊಳ್ಳಲು ಆಗಮಿಸುತ್ತಿದ್ದರು. ಆದರೆ ಈ ವರ್ಷ ಹೆಚ್ಚಿನ ಪ್ರವಾಸಿಗರು ಮಡಿಕೇರಿ ದಸರಾದ ಕಡೆ ಬೆನ್ನು ತಿರುಗಿಸಿದ್ದು ಕಂಡು ಬಂತು. ಹಾಗಾಗಿ ಪ್ರವಾಸಿಗರಿಲ್ಲದ ದಸರಾ ಉತ್ಸವ ಬಿಕೋ ಎನ್ನುವಂತಾಯಿತು. ಪ್ರಕೃತಿ ವಿಕೋಪದಿಂದ ಕೊಡಗು ಜಿಲ್ಲೆ ತತ್ತರಿಸಿದ್ದ ರಿಂದ ಸರಳ ಮತ್ತು ಸಂಪ್ರದಾಯದಂತೆ ದಸರಾ ಆಚರಿಸುವ ಬಗ್ಗೆ ಪ್ರಾರಂಭದಲ್ಲಿ ನೀಡಲಾದ ಹೇಳಿಕೆಗಳು ಜಿಲ್ಲೆಯ ಕಡೆ ಪ್ರವಾಸಿಗರು ಬೆನ್ನು ತಿರುಗಿಸಲು ಕಾರಣ ವಾಯಿತು ಎಂಬ ಅಭಿಪ್ರಾಯಗಳು ಸ್ಥಳೀಯ ಜನರಿಂದ ವ್ಯಕ್ತವಾದವು.

ವಿದ್ಯುತ್ ಅಲಂಕಾರ ವಿರಳ: ದಶಮಂಟಪಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ರಸ್ತೆಗಳು ಮತ್ತು ಇಕ್ಕೆಲಗಳಲ್ಲಿದ್ದ ಕಟ್ಟಡಗಳ ಕೆಲವು ಅಂಗಡಿ ಮಳಿಗೆಗಳನ್ನು ಹೊರತು ಪಡಿಸಿದರೆ ಮತ್ತೆಲ್ಲೂ ಝಗಮಗಿಸುವ ವಿದ್ಯುತ್ ಅಲಂಕಾರ ಕಂಡು ಬರಲಿಲ್ಲ. ವರ್ತಕರು ಉದ್ಯಮಿಗಳು ಕೂಡ ತಮ್ಮ ಮಳಿಗೆಗಳನ್ನು ವಿಜೃಂಭಣೆಯಿಂದ ಝಗಮಗಿಸುವ ಬೆಳಕಿ ನಿಂದ ಸಿಂಗರಿಸಲು ಈ ಬಾರಿ ಮನಸ್ಸು ಮಾಡ ಲಿಲ್ಲ. ಆದರೆ ನವರಾತ್ರಿಯ ಕರಗ ಉತ್ಸವಕ್ಕೂ ಮುನ್ನ ದಿನದಿಂದಲೇ 4 ಶಕ್ತಿ ದೇವತೆಗಳ ದೇವಾಲಯಗಳು ವಿದ್ಯುತ್ ಅಲಂಕಾರ ದೊಂದಿಗೆ ಶೃಂಗಾರ ಗೊಂಡಿದ್ದವು. ಆ ಬಳಿಕ ದಶಮಂಟಪಗಳ ದೇವಾಲಯಗಳು ಅದ್ಧೂರಿಯಾಗಿ ಅಲಂಕೃತಗೊಂಡಿದ್ದವು.

ಪೈಪೋಟಿ ಸ್ಥಗಿತ : ಮಡಿಕೇರಿ ದಸರಾ ಉತ್ಸವದ ಕೇಂದ್ರ ಬಿಂದುವೇ ದಶಮಂಟಪ ಗಳ ಕಥಾ ಹಂದರದ ಪೈಪೋಟಿ. ಅದ ರೊಂದಿಗೆ ಬಹುಮಾನ ಪಡೆಯುವ ತವಕ ಕೂಡ ಮಡಿಕೇರಿ ದಸರಾಕ್ಕೆ ಮತ್ತಷ್ಟು ಮೆರಗು ತುಂಬುತ್ತಿತ್ತು. ಆದರೆ ಈ ಬಾರಿ ದಶ ಮಂಟಪಗಳ ಬಹುಮಾನ ಸ್ಪರ್ಧೆ ರದ್ದುಗೊಂಡಿದ್ದರಿಂದ ಯಾವುದೇ ಪೈಪೋಟಿ ಇರಲಿಲ್ಲ. ಕೆಲ ಮಂಟಪಗಳು ಮಾತ್ರ ಕಲಾಕೃತಿಗಳ ಚಲನ-ವಲನಗಳಿಗೆ ಮಹತ್ವ ನೀಡಿದರೆ, ಉಳಿದ ಮಂಟಪ ಗಳು ಸ್ಥಿರಸ್ಥಿತಿಯ ಕಲಾಕೃತಿಗಳನ್ನು ಒಳಗೊಂಡ ಮಂಟಪವನ್ನು ಶೋಭಾ ಯಾತ್ರೆ ನಡೆಸಿದವು. ಮಂಟಪಗಳ ತಯಾರಿಕೆಗೆ ದುಬಾರಿ ವೆಚ್ಚ, ಜನರಿಂದಲೂ ಸಂಗ್ರಹಿಸದ ಚಂದಾಹಣ ಮತ್ತು ಒಲ್ಲದ ಮನಸ್ಸಿನಿಂದ ಕೆಲವು ಮಂಟಪಗಳನ್ನು ಸರಳವಾಗಿಯೇ ವಿನ್ಯಾಸ ಮಾಡಲಾಗಿತ್ತು.

ವ್ಯಾಪಾರ ಕ್ಷೀಣ: ಬಹುತೇಕ ಮಡಿಕೇರಿ ಸುತ್ತಮುತ್ತಲಿನ ನಿವಾಸಿಗಳೂ ಸೇರಿದಂತೆ ಪ್ರವಾಸಿಗರು ಕೂಡ ದಸರಾವನ್ನು ಕಣ್ತುಂಬಿಕೊಳ್ಳಲು ಮನಸ್ಸು ಮಾಡದ ಹಿನ್ನೆಲೆಯಲ್ಲಿ ದಸರಾ ವ್ಯಾಪಾರವನ್ನೇ ನಂಬಿಕೊಂಡಿದ್ದ ವರ್ತಕರು ಸಪ್ಪೆಮೋರೆ ಹಾಕುವಂತಾಯಿತು. ರಸ್ತೆ ವ್ಯಾಪಾರಿಗಳು ಸೇರಿದಂತೆ ಹೋಂ ಸ್ಟೇ, ರೆಸಾರ್ಟ್‍ಗಳಿಗೂ ದಸರಾ ವ್ಯಾಪಾರದ ಬಿಸಿ ತಟ್ಟಿದಂತಿತ್ತು. ಕ್ಯಾಂಟೀನ್, ಹೊಟೇಲ್‍ಗಳಲ್ಲೂ ಹಿಂದಿನ ಸಾಲಿನಂತೆ ಈ ಬಾರಿ ವ್ಯಾಪಾರ ಕಂಡು ಬರಲಿಲ್ಲ.

ಬಿಗಿ ಭದ್ರತೆ: ಮಡಿಕೇರಿ ದಸರಾವನ್ನು ಜಿಲ್ಲಾ ಪೊಲೀಸ್ ಇಲಾಖೆ ಮಾತ್ರ ಗಂಭೀರ ವಾಗಿ ಪರಿಗಣಿಸಿತ್ತು. ನಗರವನ್ನು ಸೇರುವ ಎಲ್ಲಾ ರಸ್ತೆಗಳಲ್ಲೂ ಪೊಲೀಸ್ ಚೆಕ್ ಪೋಸ್ಟ್ ಅಳವಡಿಸಿ, ವಾಹನಗಳ ತಪಾಸಣೆ ನಡೆಸುತ್ತಿ ದ್ದುದು ಕಂಡು ಬಂತು. ಮಾತ್ರವಲ್ಲದೆ ನಗರ ದೊಳಗೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಸೇರಿದಂತೆ ಅಧಿಕಾರಿ ವರ್ಗ ಗಸ್ತು ತಿರುಗುವ ಮೂಲಕ ಭದ್ರತಾ ವ್ಯವಸ್ಥೆ ಪರಿಶೀಲನೆ ನಡೆಸಿದರು. ಸೂಕ್ಷ್ಮ, ಅತೀ ಸೂಕ್ಷ್ಮ ಪ್ರದೇಶಗಳು ಸೇರಿದಂತೆ ಮುಖ್ಯ ರಸ್ತೆ ಹಾಗೂ ಜನದಟ್ಟಣೆ ಏರ್ಪಡುವ ರಸ್ತೆ ಗಳಲ್ಲೂ ಸಿ.ಸಿ. ಕ್ಯಾಮರಾ ಅಳವಡಿಸಲಾಗಿತ್ತು.
ಒಟ್ಟಿನಲ್ಲಿ ಈ ಬಾರಿಯ ಮಡಿಕೇರಿ ದಸರಾ ಉತ್ಸವ ಸಂಪ್ರದಾಯದಂತೆ ನಡೆಯಿತಾದರೂ ವೈಭವದ ಕಳೆಕಟ್ಟಲಿಲ್ಲ.

Translate »