ಕೊಡಗು ದುರಂತಕ್ಕೆ ಮಾಫಿಯಾ ಕಾರಣ
ಕೊಡಗು

ಕೊಡಗು ದುರಂತಕ್ಕೆ ಮಾಫಿಯಾ ಕಾರಣ

September 7, 2018

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ವಿವಿಧ ಮಾಫಿಯಾವೇ ಕಾರಣವೆಂದು ಆರೋಪಿಸಿರುವ ಬಸವಣ್ಣ ದೇವರ ಬನ ಸಂರಕ್ಷಣಾ ಟ್ರಸ್ಟ್, ಪ್ರೊ.ಮಾಧವನ್ ಗಾಡ್ಗಿಲ್ ವರದಿ ಅನುಷ್ಠಾನದಿಂದ ಮಾತ್ರ ಮೂಲ ನಿವಾಸಿಗಳ ರಕ್ಷಣೆ ಸಾಧ್ಯ ಎಂದು ಅಭಿಪ್ರಾಯಪಟ್ಟಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್‍ನ ಕಾರ್ಯ ದರ್ಶಿ ಡಾ.ಬಿ.ಸಿ.ನಂಜಪ್ಪ, ಮತ ಬ್ಯಾಂಕ್, ಟಿಂಬರ್, ಭೂ ಪರಿವರ್ತನೆ, ರೆಸಾರ್ಟ್, ಮರಳು, ಕಲ್ಲು ಗಣಿಗಾರಿಕೆ ಸೇರಿದಂತೆ ಪರಿಸರಕ್ಕೆ ವಿರುದ್ಧವಾದ ಮಾಫಿಯಾ ಕೂಟಗಳ ತಪ್ಪಿನಿಂದಾಗಿ ಕೊಡಗು ಈ ದುಸ್ಥಿತಿಗೆ ಬಂದು ತಲುಪಿದ್ದು, ಮೂಲ ನಿವಾಸಿಗಳು ಅಸ್ತಿತ್ವವನ್ನು ಕಳೆದುಕೊಳ್ಳುವ ಆತಂಕವನ್ನು ಎದುರಿಸುತ್ತಿದ್ದಾರೆ ಎಂದರು.
ಸಣ್ಣ ಮಾರ್ಪಾಡುಗಳ ಮೂಲಕ ಪ್ರೊ.ಮಾಧವನ್ ಗಾಡ್ಗಿಲ್ ವರದಿ ಅನುಷ್ಠಾನ ಗೊಂಡರೆ ಮಾತ್ರ ಕೊಡಗಿನ ಪರಿಸರ ಹಾಗೂ ಮೂಲ ನಿವಾಸಿಗಳನ್ನು ರಕ್ಷಿಸಬಹು ದಾಗಿದೆ. ಅಧಿಕಾರಿಗಳ ಅಂತಿಮ ನಿರ್ಧಾರವನ್ನು ಅವಲಂಭಿಸಿರುವ ಡಾ.ಕಸ್ತೂರಿರಂಗನ್ ವರದಿಗಿಂತ ಗ್ರಾಮಸಭೆಗೆ ಆದ್ಯತೆ ನೀಡಿರುವ ಗಾಡ್ಗಿಲ್ ವರದಿ ಸೂಕ್ತವೆಂದು ಅವರು ಅಭಿಪ್ರಾಯಪಟ್ಟರು. ಕೇರಳ ರಾಜ್ಯದ ಜನ ಗಾಡ್ಗಿಲ್ ವರದಿಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಆದರೆ ಇತ್ತೀಚೆಗೆ ಪ್ರಕೃತಿ ವಿಕೋಪ ಸಂಭವಿಸಿದ ನಂತರ ಈ ವರದಿ ಜಾರಿ ಯಾಗಬೇಕೆನ್ನುವ ಅಪೇಕ್ಷೆಯನ್ನು ವ್ಯಕ್ತಪಡಿ ಸುತ್ತಿದ್ದಾರೆ. ಇದೇ ಪರಿಸ್ಥಿತಿ ಇದೀಗ ಕೊಡಗು ಜಿಲ್ಲೆಯಲ್ಲೂ ಉದ್ಭವವಾಗಿದ್ದು, ಶೇ.95 ರಷ್ಟು ಗ್ರಾಮಸ್ಥರು ನಮ್ಮ ವಾದಕ್ಕೆ ಒಪ್ಪಿಗೆ ಸೂಚಿಸುತ್ತಿದ್ದಾರೆ ಎಂದು ಡಾ.ನಂಜಪ್ಪ ಹೇಳಿದರು. ಮಡಿಕೇರಿ, ಮಕ್ಕಂದೂರು, ಮುಕ್ಕೋಡ್ಲು, ಕಾಲೂರು, ಸಂಪಾಜೆ ಸೇರಿದಂತೆ ಇನ್ನೂ ಕೆಲವು ಗ್ರಾಮಗಳ ಮೂಲನಿವಾಸಿಗಳು ಮಹಾಮಳೆಯ ದಾಳಿಗೆ ಸಿಲುಕಿ ಎಲ್ಲವನ್ನೂ ಕಳೆದುಕೊಂಡು ದುಃಖದಲ್ಲಿದ್ದಾರೆ. ಅಸಹಾಯಕ ಸ್ಥಿತಿಯಲ್ಲಿರುವ ಸಂತ್ರಸ್ತರ ಹಿತದೃಷ್ಟಿ ಮತ್ತು ಕೊಡಗಿನ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಕೆಲವು ನಿರ್ಣಯಗಳನ್ನು ಟ್ರಸ್ಟ್ ತೆಗೆದುಕೊಂಡಿದ್ದು, ಇದನ್ನು ಜಿಲ್ಲಾಡಳಿತಕ್ಕೆ ನೀಡುವುದಾಗಿ ತಿಳಿಸಿದರು.

Translate »