ನೋವಿನಲ್ಲೂ ಮೊಳಗಿದ ಮಂಗಳವಾದ್ಯ ನೆರೆ ಸಂತ್ರಸ್ತೆಗೆ ಮಾಂಗಲ್ಯ ಭಾಗ್ಯ
ಕೊಡಗು

ನೋವಿನಲ್ಲೂ ಮೊಳಗಿದ ಮಂಗಳವಾದ್ಯ ನೆರೆ ಸಂತ್ರಸ್ತೆಗೆ ಮಾಂಗಲ್ಯ ಭಾಗ್ಯ

September 7, 2018

ಮಡಿಕೇರಿ: ತಾನು ಪ್ರೀತಿಸಿದ ಯುವತಿ ಮನೆ, ತೋಟವನ್ನು ಕಳೆದು ಕೊಂಡು ನಿರಾಶ್ರಿತ ಕೇಂದ್ರ ಪಾಲಾದರೂ ಕೂಡ ಪ್ರಿಯತಮ ಆಕೆಯನ್ನು ವರಿಸುವ ಮೂಲಕ ಮಾನವೀಯತೆಯ ಹೃದಯ ಸ್ಪರ್ಶಿ ಘಟನೆಗೆ ಮಡಿಕೇರಿ ಅಶ್ವಿನಿ ಆಸ್ಪತ್ರೆಯ ಗಣಪತಿ ದೇವಾಲಯ ಸಾಕ್ಷಿಯಾಯಿತು.

ಜೋಡುಪಾಲ 2ನೇ ಮೊಣ್ಣಂಗೇರಿ ಗ್ರಾಮದ ನಿವಾಸಿ ವಾರಿಜ ಮತ್ತು ಮಹಾರಾಷ್ಟ್ರ ಪುಣೆ ಸಮೀಪದ ಸೊಲ್ಲಾಪುರ ನಿವಾಸಿ ರುದ್ರೇಶ್ ಅವರುಗಳೇ ಪ್ರೇಮ ವಿವಾಹವಾದ ಪ್ರೇಮಿಗಳಾಗಿದ್ದಾರೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಬದುಕು ಕಟ್ಟಿಕೊಂಡಿದ್ದ ವಾರಿಜ ಮತ್ತು ಬೆಂಗಳೂರಿನ ಖಾಸಗಿ ಆಪ್ಟಿಕಲ್ಸ್(ಕನ್ನಡಕ) ಕೇಂದ್ರದಲ್ಲಿ ಉದ್ಯೋಗಿಯಾಗಿದ್ದ ರುದ್ರೇಶ್ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ನಡುವೆ ಎರಡೂ ಕುಟುಂಬಗಳು ಒಪ್ಪಿದ ಮೇರೆಗೆ ಆಗಸ್ಟ್ 18 ರಂದು ಈ ಪ್ರೇಮಿಗಳ ವಿವಾಹಕ್ಕೆ ಮುಹೂರ್ತವನ್ನು ನಿಗದಿಗೊಳಿಸಲಾಗಿತ್ತು. ಆದರೆ, ಆಗಸ್ಟ್ 16 ರಂದು 2ನೇ ಮೊಣ್ಣಂಗೇರಿ ನಿವಾಸಿ ವಾರಿಜ ಅವರ ಮನೆಯ ಹಿಂಬದಿಯಲ್ಲಿ ಭೂ ಕುಸಿದು ಮನೆ ಮತ್ತು ತೋಟವನ್ನು ಭೂ ಸಮಾಧಿ ಮಾಡಿತ್ತು. ವಿಧಿ ಬರೆದ ಘೋರ ಮುಹೂರ್ತಕ್ಕೆ ಮದುವೆ ಚಪ್ಪರ ಹಾಸ ಬೇಕಿದ್ದಮನೆ ಭೂ ಸಮಾಧಿಯಾದರೆ, ಹಸೆಮಣೆ ಏರಬೇಕಿದ್ದ ಮಧು ಮಗಳು ವಾರಿಜ ಎಲ್ಲವನ್ನು ಕಳೆದುಕೊಂಡು ತನ್ನ ತಾಯಿಯೊಂದಿಗೆ ಕಲ್ಲುಗುಂಡಿಯ ನಿರಾಶ್ರಿತ ಶಿಬಿರ ಪಾಲಾದಳು.

ವಿವಾಹಕ್ಕೆ ಕೇವಲ ಎರಡು ದಿನಗಳು ಬಾಕಿ ಇರುವಾಗಲೇ ಕ್ರೂರ ವಿಧಿ ಬೆಟ್ಟದ ರೂಪದಲ್ಲಿ ಬಡ ಕುಟುಂಬದ ಮನೆಯನ್ನು ನಾಮಾವಶೇಷಗೊಳಿಸಿ ವಿಕೃತಿ ಮೆರೆಯಿತು. ಆದರೆ, ವಿವಾಹ ಮುಹೂರ್ತ ಕೈ ತಪ್ಪಿ ಹೋದರೂ ರುದ್ರೇಶ್ ಮಾತ್ರ ಪ್ರೀತಿಸಿದಾಕೆಯನ್ನು ಕೈ ಬಿಡಲಿಲ್ಲ.

ಆಗಸ್ಟ್ 18 ರಂದು ನಡೆಯಬೇಕಿದ್ದ ಮದುವೆಯನ್ನು ಮುಂದೂಡಿ ಸೆ.6 ರಂದು ಅಶ್ವಿನಿ ಆಸ್ಪತ್ರೆಯ ಗಣಪತಿ ದೇವಾಲಯದಲ್ಲಿ ವಾರಿಜಳನ್ನು ವರಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಲ್ಲುಗುಂಡಿಯ ನಿರಾಶ್ರಿತ ಕೇಂದ್ರದಲ್ಲಿದ್ದ ಸಂತ್ರಸ್ತರೇ ಬಂಧುಗಳಾಗಿ ವಾರಿಜಾಳಿಗೆ ಮೆಹಂದಿ ಶಾಸ್ತ್ರವನ್ನು ನೆರವೇರಿಸಿದರು. ವಧು-ವರನ ಕುಟುಂಬ ಸದಸ್ಯರು ವಿವಾಹದಲ್ಲಿ ಪಾಲ್ಗೊಂಡು ನವ ಜೋಡಿಗೆ ಶುಭ ಹಾರೈಸಿದರು.

Translate »