ಚಾಮುಂಡಿಬೆಟ್ಟದ ನಂದಿ ಮೂರ್ತಿಗೆ ನ.25ರಂದು ಮಹಾಭಿಷೇಕ
ಮೈಸೂರು

ಚಾಮುಂಡಿಬೆಟ್ಟದ ನಂದಿ ಮೂರ್ತಿಗೆ ನ.25ರಂದು ಮಹಾಭಿಷೇಕ

November 23, 2018

ಮೈಸೂರು:  ಚಾಮುಂಡಿಬೆಟ್ಟದ ನಂದಿ ಮೂರ್ತಿಗೆ ನ.25ರಂದು ಬೆಳಿಗ್ಗೆ 9.30ರಿಂದ ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ವತಿಯಿಂದ 13ನೇ ವರ್ಷದ ಮಹಾಭಿಷೇಕ ಕಾರ್ಯಕ್ರಮ ಆಯೋ ಜಿಸಲಾಗಿದೆ ಎಂದು ಟ್ರಸ್ಟ್‍ನ ಕಾರ್ಯ ದರ್ಶಿ ಗೋವಿಂದ್ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಮೆಟ್ಟಿಲುಗಳ ಮೂಲಕ ಬೆಟ್ಟ ಹತ್ತುವ ಭಕ್ತರು ಸೇರಿ ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ರಚಿಸಿಕೊಂಡಿದ್ದು, ಕಳೆದ 13 ವರ್ಷದಿಂದ ಕಾರ್ತೀಕ ಮಾಸದ ಅಂಗವಾಗಿ ಬೆಟ್ಟದ ನಂದಿ ಮೂರ್ತಿಗೆ ಶಾಸ್ತ್ರೋಕ್ತವಾಗಿ ಮಹಾಭಿಷೇಕವನ್ನು ನೆರವೇರಿಸುತ್ತಾ ಬಂದಿದ್ದೇವೆ. ಈ ಹಿನ್ನೆಲೆಯಲ್ಲಿ ಈ ಸಾಲಿನ ಮಹಾಭಿಷೇಕ ನ.25ರಂದು ಬೆಳಿಗ್ಗೆ 9.30ರಿಂದ ಆರಂಭವಾಗಲಿದೆ. ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮೀಜಿ ಅವರ ಸಮ್ಮುಖದಲ್ಲಿ ನಡೆಯಲಿರುವ ಮಹಾ ಭಿಷೇಕದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ಸೋಮನಾಥಾನಂದ ಸ್ವಾಮೀಜಿ, ಚಾಮುಂಡಿ ಬೆಟ್ಟದ ವ್ಯಾಘ್ರ ಮುಖರುದ್ರಪಾದ ಗುಹೆ ಶ್ರೀ ಜಮುನಗಿರಿ ಸ್ವಾಮೀಜಿ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ನಂದಿ ಮೂರ್ತಿಗೆ ನೀರು, ಎಳನೀರು, ಹಾಲು, ಮೊಸರು, ತುಪ್ಪ, ಜೇನುತುಪ್ಪ, ಶ್ರೀಗಂಧ ಸೇರಿದಂತೆ ದ್ರವ್ಯಗಳು ವಿವಿಧ ಬಗೆಯ ಹೂಗಳಿಂದ ಅಭಿಷೇಕ ಮಾಡಲಾಗು ವುದು. ಕಾರ್ಯಕ್ರಮದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗಾರಿ, ವೀರಗಾಸೆ, ಕೊಂಬುಕಹಳೆ ಸೇರಿದಂತೆ ಇನ್ನಿತರ ಜಾನಪದ ಕಲಾತಂಡಗಳಿಂದ ಕಲಾ ಪ್ರದರ್ಶನದ ಕಾರ್ಯಕ್ರಮ ಜರುಗಲಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳಾದ ಪ್ರಕಾಶ್ ರಾಜ್, ಶಿವಕುಮಾರ್, ಮಹೇಶ್, ಸುಂದರ್ ಇದ್ದರು.

Translate »