ಹನೂರು: ಸುಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ಸೋಮವಾರ ವಿಜೃಂಭಣೆಯಿಂದ ಜರುಗಿತು.
ಭಾನುವಾರ ರಾತ್ರಿ ಹಾಗೂ ಇಂದು ದೇವಸ್ಥಾನ ಮುಂಭಾಗ ಹಾಗೂ ರಂಗ ಮಂದಿರ ವಿವಿಧೆಡೆ ಬಿಡಾರ ಹೂಡಿದ್ದ ಭಕ್ತರು ಮಾದಪ್ಪನ ಗೀತೆಗಳನ್ನು ಹಾಡುವ ಮೂಲಕ ನೆರೆದಿದ್ದ ಭಕ್ತರನ್ನು ರಂಜಿಸಿದರು.
ಬೆಳಿಗ್ಗೆಯಿಂದಲೇ ಲಕ್ಷ ಬಿಲ್ವಾರ್ಚನೆ ವಿಶೇಷ ಪೂಜೆ ಧಾರ್ಮಿಕ ವಿಧಿವಿಧಾನ ಗಳೊಂದಿಗೆ ಜರುಗಿದವು. ಹರಕೆ ಹೊತ್ತ ಭಕ್ತರು ಹುಲಿವಾಹನ, ಬಸವವಾಹನ, ರುದ್ರಾಕ್ಷಿ ಮಂಟಪ ಉತ್ಸವಗಳನ್ನು ನೆರ ವೇರಿಸಿ ಇಷ್ಟಾರ್ಥ ಸಿದ್ಧಿಗಾಗಿ ಮಹದೇಶ್ವರ ನಿಗೆ ಹರಕೆ ಸಲ್ಲಿಸಿದರು. ದೇವಸ್ಥಾನವನ್ನು ತಳಿರು ತೋರಣಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಸಿಂಗಾರಗೊಳಿಸಲಾಗಿತ್ತು.
ಗರ್ಭಗುಡಿಯಲ್ಲಿ ಸರತಿ ಸಾಲಿನಲ್ಲಿ ದೇವರ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ಕಾಲ್ನಡಿಗೆಯಲ್ಲಿ ಹಾಗೂ ರಾಜ್ಯದ ನಾನಾ ಕಡೆಗಳಿಂದ ಬಂದಿದ್ದ ಲಕ್ಷಾಂತರ ಭಕ್ತರು ಸರತಿ ಸಾಲಿನಲ್ಲಿ ನಿಂತು ಮಾದಪ್ಪನ ದರ್ಶನ ಪಡೆದರು. ಜಾತ್ರೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಯಿಂದ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರ ಸಕಲ ರೀತಿಯಲ್ಲೂ ಶ್ರೀ ಕ್ಷೇತ್ರವನ್ನು ಸಜ್ಜುಗೊಳಿ ಸಿತ್ತು. ಕುಡಿಯುವ ನೀರಿನ ವ್ಯವಸ್ಥೆ, ಪ್ರಸಾದ ವಿತರಣೆ, ನೆರಳಿನ ವ್ಯವಸ್ಥೆ ಹಾಗೂ ಶೌಚಾಲಯದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ದಾಸೋಹ ವ್ಯವಸ್ಥೆ : ರಾಜ್ಯ ಮೂಲೆ ಮೂಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ ಪ್ರಾಧಿಕಾರದ ವತಿಯಿಂದ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಬಸ್ ವ್ಯವಸ್ಥೆ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯು ಸಹ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್‍ಗಳನ್ನು ಬಿಡಲಾಗಿತ್ತು. ಮುಜರಾಯಿ ಇಲಾಖೆ ಬಸ್ಸುಗಳು, ಖಾಸಗಿ ಬಸ್ಸುಗಳೂ ಸಹ ಸಂಚರಿಸುತ್ತಿದ್ದವು.
ಬಿಗಿ ಪೊಲೀಸ್ ಬಂದ್‍ಬಸ್ತ್: ರಾಜ್ಯ ಹಾಗೂ ನೆರೆ ರಾಜ್ಯಗಳಿಂದ ಲಕ್ಷಾಂತರ ಮಂದಿ ಮಾದಪ್ಪನ ಭಕ್ತರು ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿದ್ದು ದರಿಂದ ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯು ಬಿಗಿ ಬಂದೋ ಬಸ್ತ್ ಕಲ್ಪಿಸಿತ್ತು. ದೇವಸ್ಥಾನ, ಅಂತರ ಗಂಗೆ, ಸಾಲೂರು ಮಠ, ಬಸ್ ನಿಲ್ದಾಣ, ತಾಳಬೆಟ್ಟ ಮುಂತಾದ ಕಡೆಗಳಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಲಾಗಿತ್ತು.