ಮೈಸೂರು,ಫೆ.5(ಆರ್‍ಕೆ)-ವಾಹನ ನಿಲ್ಲಿಸಿ ರಸ್ತೆ ಬಂದ್ ಮಾಡಿದ್ದ ಕಾರಣಕ್ಕೆ ಮೂವ ರಿಂದ ಹಲ್ಲೆಗೊಳಗಾಗಿ ಗಾಯಗೊಂಡಿದ್ದ ವ್ಯಕ್ತಿ ಮಂಗಳವಾರ ಸಂಜೆ ಸಾವನ್ನಪ್ಪಿದ್ದಾನೆ. ಮೈಸೂರಿನ ರಾಜೀವ್‍ನಗರ ನಿವಾಸಿ ಮೊಹಮದ್ ಜಬ್ಬೀರ್ ಖಾನ್ ಅವರ ಮಗ ಮೊಹಮದ್ ಸಲ್ಮಾನ್‍ಖಾನ್(26) ಸಾವನ್ನಪ್ಪಿದವರು. ಮನೆ ಬಳಿ ವಾಹನವೊಂದನ್ನು ಅಡ್ಡ ನಿಲ್ಲಿಸಿ, ರಸ್ತೆ ಬಂದ್ ಮಾಡಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಜಬ್ರಾಸ್ ಪಟಾನ್, ಪರ್ವಿಜ್ ಪಟಾನ್, ತಬ್ರಿಸ್ ಪಟಾನ್ ಎಂಬುವರು ಆತನ ಮೇಲೆ ಕಬ್ಬಿಣದ ರಾಡ್‍ನಿಂದ ಜನವರಿ 25ರಂದು ತೀವ್ರ ಹಲ್ಲೆ ನಡೆಸಿದ್ದರು.
ತೀವ್ರ ರಕ್ತಸ್ರಾವದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಲ್ಮಾನ್‍ಖಾನ್‍ನ್ನು ವಿದ್ಯಾ ರಣ್ಯಪುರಂನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಮಂಗಳವಾರ ಸಂಜೆ 6.45 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಆರಂಭದಲ್ಲಿ ಹಲ್ಲೆ ಪ್ರಕರಣ ದಾಖಲಿಸಿಕೊಂಡಿದ್ದ ಉದಯಗಿರಿ ಠಾಣೆ ಪೊಲೀಸರು, ಸಲ್ಮಾನ್ ಖಾನ್ ಮೃತಪಟ್ಟ ನಂತರ ಕೊಲೆ ಪ್ರಕರಣ ದಾಖಲಿಸಿದ್ದು, ತಲೆಮರೆಸಿಕೊಂಡಿರುವ ಮೂವರು ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಇಂದು ಬೆಳಿಗ್ಗೆ ವಾರಸುದಾರರಿಗೆ ಒಪ್ಪಿಸಲಾಯಿತು.