ಮಕ್ಕಳಾಗಲಿಲ್ಲವೆಂದು ಪತ್ನಿ ಕೊಂದವನಿಗೆ ಜೀವಾವಧಿ ಶಿಕ್ಷೆ
ಮೈಸೂರು

ಮಕ್ಕಳಾಗಲಿಲ್ಲವೆಂದು ಪತ್ನಿ ಕೊಂದವನಿಗೆ ಜೀವಾವಧಿ ಶಿಕ್ಷೆ

July 12, 2019

ಮೈಸೂರು, ಜು.11- ಮಕ್ಕಳಾಗಿಲ್ಲವೆಂದು ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ವ್ಯಕ್ತಿಗೆ ಮೈಸೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಜಿ.ಕುರುವಟ್ಟಿ ಅವರು ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

ಪಿರಿಯಾಪಟ್ಟಣ ತಾಲೂಕು, ಬೆಟ್ಟದಪುರದ ಬಸವೇಶ್ವರ ಕಾಲೋನಿ ನಿವಾಸಿ ಮಹ ದೇವನಿಗೆ ಶಿಕ್ಷೆ ವಿಧಿಸಲಾಗಿದೆ. ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಪತ್ನಿ ಭಾಗ್ಯ ಅವರಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ ಮಹದೇವ, ಮತ್ತೊಂದು ವಿವಾಹ ವಾಗಲು ನಿರ್ಧರಿಸಿದ್ದ. ಇದಕ್ಕೆ ಭಾಗ್ಯ ಅಡ್ಡಿಯಾಗುತ್ತಾರೆಂದು 2016ರ ಜ.4ರಂದು ಮದ್ಯಕ್ಕೆ ವಿಷ ಬೆರೆಸಿ ಆಕೆಗೆ ಬಲವಂತವಾಗಿ ಕುಡಿಸಿದ್ದ. ಭಾಗ್ಯ ಮತ್ತಿನಲ್ಲಿ ಮಲಗಿದ್ದ ಸಂದರ್ಭದಲ್ಲಿ ಮಚ್ಚಿನಿಂದ ಕುತ್ತಿಗೆಗೆ ಹೊಡೆದು, ಅಮಾನುಷವಾಗಿ ಹತ್ಯೆ ಮಾಡಿದ್ದ. ಬಳಿಕ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಮನೆಯ ಹಿಂಭಾಗ ಗುತ್ತಿಗೆಯಲ್ಲಿ ಮಲಗಿಸಿ, ಮದ್ಯ ಹಾಗೂ ವಿಷದ ಡಬ್ಬಿಯನ್ನು ಇಟ್ಟು ತನಿಖೆ ದಿಕ್ಕುತಪ್ಪಿಸಲು ಯತ್ನಿಸಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಬೆಟ್ಟದಪುರ ಪೊಲೀ ಸರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 5ನೇ ಅಧಿಕ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು, ಮಹದೇವನ ವಿರುದ್ಧದ ಆರೋಪ ಸಾಕ್ಷಿ ಆಧಾರದಿಂದ ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿ, ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ನಾಗಪ್ಪ ಸಿ.ನಾಕ್‍ಮನ್ ವಾದ ಮಂಡಿಸಿದ್ದರು.

Translate »