ಬರದಿಂದ ತತ್ತರಿಸುತ್ತಿದೆ ಸಕ್ಕರೆ ನಾಡು ಮಂಡ್ಯ
ಮಂಡ್ಯ

ಬರದಿಂದ ತತ್ತರಿಸುತ್ತಿದೆ ಸಕ್ಕರೆ ನಾಡು ಮಂಡ್ಯ

May 6, 2019

ಮಂಡ್ಯ: ವಿಶ್ವಪ್ರಸಿದ್ಧ ಕೃಷ್ಣ ರಾಜಸಾಗರ (ಕೆಆರ್‍ಎಸ್) ಜಲಾಶಯವನ್ನೇ ಒಡಲಲ್ಲಿಟ್ಟುಕೊಂಡಿದ್ದರೂ, ನಾಡಿನ ಜೀವನದಿ ಕಾವೇರಿ ಹರಿಯುತ್ತಿದ್ದರೂ, ಸಾವಿರಾರು ಕೆರೆ-ಕಟ್ಟೆಗಳು ಇದ್ದರೂ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಹಲವೆಡೆ ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.

ಇನ್ನೊಂದೆಡೆ ಬೇಸಿಗೆಯ ಉರಿ ಬಿಸಿಲಿನ ತಾಪ ಮಂಡ್ಯ ಜಿಲ್ಲೆಯ ಜನ ತತ್ತರಿ ಸುವಂತೆ ಮಾಡುತ್ತಿದೆ. ಕೆರೆ-ಕಟ್ಟೆಗಳಲ್ಲಿ ನೀರು ಬತ್ತಿಹೋಗಿದೆ. ನೀರು, ದುಡಿಮೆ ಅರಸಿಕೊಂಡು ಜಿಲ್ಲೆಯ ಗ್ರಾಮೀಣ ಭಾಗದ ಜನರು ಗಂಟು ಮೂಟೆ ಕಟ್ಟಿಕೊಂಡು ನಗರ ಪ್ರದೇಶಗಳತ್ತ ಗುಳೇ ಹೋಗಲು ಸಜ್ಜಾಗುತ್ತಿ ದ್ದಾರೆ. ಮಂಡ್ಯ, ನಾಗಮಂಗಲ, ಕೆ.ಆರ್. ಪೇಟೆ, ಮಳವಳ್ಳಿ, ಮದ್ದೂರು ಕಡೇ ಭಾಗ, ಶ್ರೀರಂಗಪಟ್ಟಣದ ಕೆಲ ಭಾಗಗಳು, ಪಾಂಡವಪುರ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ಲಭ್ಯ ಮಾಹಿತಿ ಪ್ರಕಾರ 600ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರು ಇಲ್ಲವಾಗಿದೆ.

ಮಂಡ್ಯ ತಾಲೂಕಿನ ದುದ್ದ, ಕೆರಗೋಡು, ಬಸರಾಳು ಸೇರಿದಂತೆ ಹಲವೆಡೆ ಕುಡಿಯುವ ನೀರಿಗೆ ಜನ ಪರಿತಪಿಸುತ್ತಿದ್ದಾರೆ. ಹಲ್ಲೆಗೆರೆ ಗ್ರಾಪಂ ವ್ಯಾಪ್ತಿಯ ದೊಡ್ಡಕೊತ್ತಗೆರೆ, ಮೋಳೆ, ಚಾಕನಹಳ್ಳಿ, ಚಲ್ಲನಾಯಕನಹಳ್ಳಿ, ಶಿವಪುರ ಮತ್ತಿತರ ಗ್ರಾಮಗಳಲ್ಲಿ ನೀರಿಲ್ಲದೇ ಹಾಹಾಕಾರವೆದ್ದಿದೆ. ದುದ್ದ ಹೋಬಳಿಯ ಮುದಗಂದೂರು ಗ್ರಾಪಂ ವ್ಯಾಪ್ತಿಯ ಹಲವು ಹಳ್ಳಿಗಳಲ್ಲಿ ಹನಿ ನೀರಿಗೂ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಜನರು ಮೈಲುಗಟ್ಟಲೆ ದೂರ ಹೋಗಿ ಜಮೀನುಗಳಲ್ಲಿನ ಪಂಪ್‍ಸೆಟ್, ಬೋರ್‍ವೆಲ್‍ಗಳಿಂದ ನೀರು ತಡುವ ದೃಶ್ಯ ಅಲ್ಲಲ್ಲಿ ಕಂಡುಬರುತ್ತದೆ.

ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿ ವ್ಯಾಪ್ತಿಯ ಕಳ್ಳನಕೆರೆ, ಸಾಸಲು, ಸೊಳ್ಳೇಪುರ, ಲಕ್ಷ್ಮೀಪುರ, ಮಂಗನಹೊಸಹಳ್ಳಿ, ಕೋಡಿಮಾರನಹಳ್ಳಿ, ಮಾದಿಹಳ್ಳಿ, ಡಿಂಕಾ, ಐನೋರಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ನೀರಿಲ್ಲ. ಅಪರೂಪಕ್ಕೊಮ್ಮೆ ಬರುವ ಟ್ಯಾಂಕರ್ ನೀರಿಗಾಗಿ ಜನತೆ ಬೇರೆ ಕೆಲಸಗಳನ್ನು ಬಿಟ್ಟು ಕಾಯುವ ಸ್ಥಿತಿ ಇದೆ.ಮಳವಳ್ಳಿ ತಾಲೂಕಿನ ಬಿಜಿಪುರ, ಹಲಗೂರು, ಕಿರಗಾವಲು ಸೇರಿದಂತೆ ಆಯ್ದ ಭಾಗಗಳಲ್ಲಿನ ಜನತೆ ಕುಡಿಯುವ ನೀರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್ ಅಣೆಕಟ್ಟೆ ಸುತ್ತ್ತಲಿನ ಬಹುತೇಕ ಗ್ರಾಮಗಳಿಗೆ ಕುಡಿಯುವ ನೀರಿಗೆ ಇಂದಿಗೂ ಕೆಆರ್‍ಎಸ್ ನೀರಿನ ಸೌಲಭ್ಯ ಸಿಕಿಲ್ಲ. ಈ ಬೇಸಿಗೆಯಲ್ಲಂತೂ ಆ ಭಾಗದ ಗ್ರಾಮಗಳ ಜನರ ಕುಡಿಯುವ ನೀರಿಗಾಗಿ ಬಹಳ ಪರಿತಪಿಸುತ್ತಿದ್ದಾರೆ.
ಬತ್ತಿಹೋದ ಕೆರೆ-ಕಟ್ಟೆ: ಜಿಲ್ಲೆಯಲ್ಲಿ 1500ಕ್ಕೂ ಹೆಚ್ಚು ಕೆರೆಗಳಿವೆ. ಆದರೆ ಕೇವಲ 300 ಕೆರೆಗಳಲ್ಲಷ್ಟೇ ಅರ್ಧಂಬರ್ಧ ನೀರಿದೆ. ಮಂಡ್ಯ ತಾಲೂಕೊಂದರಲ್ಲೇ 183 ಕೆರೆಗಳಲ್ಲಿ 50 ಕೆರೆಗಳಲ್ಲಷ್ಟೇ ಅಲ್ಪಸ್ವಲ್ಪ ನೀರಿದೆ. ಜಿಲ್ಲೆಯಲ್ಲಿನ ಬಹುತೇಕ ಕೆರೆ ಕಟ್ಟೆಗಳಲ್ಲಿನ ನೀರು ಖಾಲಿಯಾಗಿದೆ.

ಬಿಸಿಲಿನ ಜಳಕ್ಕೆ ಕೆರೆ-ಕಟ್ಟೆಗಳ ನೀರು ಇಂಗಿಹೋಗಿರುವುದರಿಂದ ಜನರಂತೆಯೇ ಪ್ರಾಣಿ-ಪಕ್ಷಿಗಳೂ ಪರದಾಡುವಂತಾಗಿದೆ. ಮರಗಿಡಗಳು ಒಣಗಿ ನಿಂತಿರುವುದರಿಂದ ನೆರಳಿಗಾಗಿ ತಡಕಾಡುವ ಸ್ಥಿತಿ ಇದೆ. ಕೆರೆ ಭಾಗಗಳಲ್ಲಿ ಅಲ್ಲಲ್ಲಿ ಬೆಳೆದಿದ್ದ ಅಲ್ಪಸ್ವಲ್ಪ ಬೆಳೆಯೂ ಈಗ ನೀರಿಲ್ಲದೇ ಒಣಗಿ ಹೋಗಿದ್ದು ರೈತರು ಕಂಗಾಲಾಗಿದ್ದಾರೆ.

1000 ಅಡಿ ಕೊರೆದರೂ ನೀರಿಲ್ಲ: ನಾಗಮಂಗಲ, ಕೆ.ಆರ್.ಪೇಟೆ, ಮಳವಳ್ಳಿ ಸೇರಿದಂತೆ ಜಿಲ್ಲೆಯ ಬಹಳಷ್ಟು ಭಾಗಗಳಲ್ಲಿರುವ ಸಾವಿರಾರು ಕೊಳವೆ ಬಾವಿಗಳು ಬತ್ತಿಹೋಗಿವೆ. 1000 ಅಡಿವರೆಗೆ ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ.

ಸದ್ಯ ಇರುವ ಬೋರ್‍ವೆಲ್‍ಗಳಲ್ಲಿಯೂ ಅಂತರ್ಜಲ ಬತ್ತಿಹೋಗುತ್ತಿದೆ ಎಂಬ ಸುದ್ದಿ ಅಲ್ಲಲ್ಲಿ ಕೇಳಿ ಬರುತ್ತಿದೆ. ಪರಿಣಾಮವಾಗಿ ಬೋರವೆಲ್ ನೀರನ್ನೇ ನಂಬಿ ರೈತರು ಬೆಳೆದಿದ್ದ ಬೆಳೆಗಳು ಒಣಗಿ ಅಪಾರ ನಷ್ಠ ಅನುಭವಿಸುಂತಾಗಿದೆ. ಸಾಲ ಮಾಡಿ ಬೋರ್‍ವೆಲ್ ಕೊರೆಸಲು ಲಕ್ಷಾಂತರ ರೂ. ವೆಚ್ಚ ಮಾಡಿದ ರೈತರು, ಆ ಹಣವನ್ನು ಬೆಳೆಯ ರೂಪದಲ್ಲಿ ವಾಪಸ್ ಪಡೆಯಲಾಗದೆ ತಲೆಮೇಲೆ ಕೈಹೊತ್ತು ಕೂರುವಂತಾಗಿದೆ.

ಗುಳೆ ಹೊರಟರು: ನೀರಿಗೆ ಅಭಾವವಾಗಿರುವ ಹಿನ್ನೆಲೆಯಲ್ಲಿ ಹಳ್ಳಿಯ ಜನರಲ್ಲಿ ಹಲವರು ನಗರಗಳತ್ತ ವಲಸೆ ಹೊರಟಿದ್ದಾರೆ. ನಾಗಮಂಗಲ, ಕೆ.ಆರ್.ಪೇಟೆ, ಮಳವಳ್ಳಿ ತಾಲೂಕಿನ ಹಲವು ಗ್ರಾಮಗಳ ಜನತೆ ಮನೆಗೆ ಬೀಗ ಜಡಿದು ಬೆಂಗಳೂರು, ಮಂಗಳೂರು, ಮೈಸೂರು, ಮುಂಬೈನತ್ತ ಕುಟುಂಬ ಸಹಿತ ಮುಖಮಾಡಿದ್ದಾರೆ.

ಬರದ ಛಾಯೆ ಜನ-ಜಾನುವಾರುಗಳ ಜೀವನ ನಿರ್ವಹಣೆ ಮೇಲೆ ತೀವ್ರ ಪರಿಣಾಮ ಬೀರಿದೆ. ಮೇವು ನೀರಿನ ಅಭಾವದಿಂದಾಗಿ ಜೀವನೋಪಾಯಕ್ಕಾಗಿ ಸಾಕಿಕೊಂಡಿದ್ದ ಆಡು, ಕುರಿ, ಹಸು, ಎಮ್ಮೆಗಳನ್ನು ಸಿಕ್ಕಷ್ಟು ಬೆಲೆಗೆ ಮಾರುತ್ತಿರುವುದು ಕಂಡು ಬಂದಿದೆ.

ನೀಗದ ನೀರಿನ ಸಮಸ್ಯೆ: ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಜಿಲ್ಲಾಡಳಿತ ಹಲವು ಪರಿಹಾರ ಕ್ರಮಗಳನ್ನು ಕೈಗೊಂಡಿದ್ದರೂ ಬಹಳಷ್ಟು ಕಡೆ ಜನರ ನೀರಿನ ಬವಣೆ ನೀಗಿಸಲು ಸಾಧ್ಯವಾಗಿಲ್ಲ ಎಂಬ ಮಾತುಗಳು ಕೇಳಿ ಬಂದಿದೆ.

ಬಹಳಷ್ಟು ಗ್ರಾಮಗಳಲ್ಲಿನ ನೀರಿನ ಟ್ಯಾಂಕ್‍ಗಳು, ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿವೆ. ದುರಸ್ತಿ ಮಾಡಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ನಾಗಯ್ಯ ಲಾಳನಕೆರೆ

Translate »